ಹೊಸದಿಲ್ಲಿ : ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ ಮೂಲಕ ಜನರಿಗೆ ನೀಡಿರುವ ‘ಮಿಥ್ಯಾ ಭರವಸೆ’ಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಸವಿವರವಾಗಿ ವಿಶ್ಲೇಷಿಸಿ ಅನಾವರಣ ಮಾಡಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿನ ಕಾಂಗೆಸ್ ಭರವಸೆಗಳು ಎರಡು ಮುಖ್ಯ ಭಾಗಗಳನ್ನು ಹೊಂದಿವೆ. ಅದರಲ್ಲಿ ಮೊದಲನೇಯದು (ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ) ಸಾಂವಿಧಾನಿಕವಾಗಿ ಅಸಾಧ್ಯವಾದದ್ದು; ಎರಡನೇಯದ್ದು , 20,000 ಕೋಟಿ ರೂ. ತೆರಿಗೆ ರಿಯಾಯಿತಿ ನೀಡುವ ಭರವಸೆ, ರಾಜ್ಯದ ಆರ್ಥಿಕತೆಯಿಂದ ಅಸಾಧ್ಯವಾದದ್ದು ಎಂದು ಜೇತ್ಲಿ ವಿಶ್ಲೇಷಿಸಿದ್ದಾರೆ.
ಈ ಎರಡೂ ಮಿಥ್ಯಾ ಭರವಸೆಗಳನ್ನು ಕಾಂಗ್ರೆಸ್ ನೀಡಿರುವುದರ ಹಿಂದಿನ ಮುಖ್ಯ ಕಾರಣವೆಂದರೆ ಅದರ ಅಸಂಭವನೀಯ ಚುನಾವಣಾ ಗೆಲವು ಎಂದು ಜೇತ್ಲಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಕೇವಲ ಚುನಾವಣಾ ದೃಷ್ಟಿಯಿಂದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಒಬಿಸಿ ನಾಯಕ ಅಲ್‌ಪೇಶ್ ಠಾಕೂರ್ ಮತುತ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರೊಂದಿಗೆ ಸಂಬಂಧ ಬೆಳೆಸಿಕೊಂಡಿರುವುದು ಕೇವಲ ಬಿಜೆಪಿ ವಿರೋಧಿ ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದಾಗಿದ್ದು ಅದು ತೀರ ತಾತ್ಕಾಲಿಕವಾಗಿದೆ ಎಂದು ಜೇತ್ಲಿ ಹೇಳಿದರು.
90,000 ಕೋಟಿ ರೂ.ಗಳ ರಾಜ್ಯದ ಆದಾಯದಲ್ಲಿ 20,000 ಕೋಟಿಗಳ ತೆರಿಗೆ ರಿಯಾಯಿತಿ ನೀಡುವ ಕಾಂಗ್ರೆಸ್ ಭರವಸೆ ಇನ್ನೊಂದು ದೊಡ್ಡ ಮಿಥ್ಯೆಯಾಗಿದ್ದು ಅದರ ರಾಜ್ಯದ ಹಣಕಾಸು ಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕೆಡಿಸುವಂತಹ ಸುಳ್ಳು ಭರವಸೆಯಾಗಿದೆ ಎಂದು ಜೇತ್ಲಿ ಟೀಕಿಸಿದರು.