ಅಹ್ಮದಾಬಾದ್: ವರ್ಷಾಂತ್ಯಕ್ಕೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಸದ್ದಿಲ್ಲದೆ ಇಬ್ಬರು ಪ್ರಮುಖ ಸಚಿವರಿಗೆ ನೀಡಲಾಗಿದ್ದ ಖಾತೆಗಳನ್ನು ವಾಪಸ್ ಪಡೆಯಲಾಗಿದೆ.
ಕಂದಾಯ ಸಚಿವರಾಗಿರುವ ರಾಜೇಂದ್ರ ತ್ರಿವೇದಿ, ಪೂರ್ಣೇಶ್ ಮೋದಿ ಅವರಿಗೆ ನೀಡಲಾಗಿರುವ ರಸ್ತೆ ಮತ್ತು ನಿರ್ಮಾಣ ಖಾತೆಗಳನ್ನು ವಾಪಸ್ ಪಡೆಯಲಾಗಿದೆ.
ಕಂದಾಯ ಖಾತೆಯನ್ನು ಗೃಹ ಖಾತೆ ಸಹಾಯಕ ಸಚಿವರಾಗಿರುವ ಹರ್ಷ್ ಸಾಂಘ್ವಿ ಅವರಿಗೆ ಕಂದಾಯ, ಕೈಗಾರಿಕೆ, ಅರಣ್ಯ ಮತ್ತು ಪರಿಸರ ಖಾತೆ ಸಹಾಯಕ ಸಚಿವ ಜಗದೀಶ್ ಪಂಚಾಲ್ ಅವರಿಗೆ ರಸ್ತೆ ಮತ್ತು ನಿರ್ಮಾಣ ಸಚಿವಾಲಯದ ಹೊಣೆಯನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಹಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ರಾಜೇಂದ್ರ ತ್ರಿವೇದಿ ಬಳಿ ಈಗ ವಿಪತ್ತು ನಿರ್ವಹಣೆ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳ ಖಾತೆ ಇದ್ದರೆ, ಪೂರ್ಣೇಶ್ ಮೋದಿ ಅವರ ಬಳಿ ಸಾರಿಗೆ, ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳ ಅಭಿವೃದ್ಧಿ ಸಚಿವಾಲಯ ಇರಲಿದೆ.
ಇಂಥ ಕ್ರಮವೇಕೆ?
ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವಾಗ ಪ್ರಮುಖ ಸಚಿವರಿಗೆ ನೀಡಲಾಗಿದ್ದ ಖಾತೆಗಳನ್ನು ವಾಪಸ್ ಪಡೆದದ್ದು ಏಕೆ ಎಂದು ಪ್ರತಿಪಕ್ಷಗಳಾಗಿರುವ ಆಪ್, ಕಾಂಗ್ರೆಸ್ ಪ್ರಶ್ನೆ ಮಾಡಿವೆ. ರಾಜ್ಯದ ಜನರಿಗೆ ಬದಲಾವಣೆಗೆ ಇದ್ದ ಕಾರಣ ತಿಳಿವ ಹಕ್ಕು ಇದೆ ಎಂದು ಎರಡೂ ಪಕ್ಷಗಳು ಪ್ರತಿಪಾದಿಸಿವೆ