ಹೊಸದಿಲ್ಲಿ : “ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಕೊಲ್ಲಲು ಇಬ್ಬರು ಬಿಜೆಪಿ ನಾಯಕರು ತನ್ನ ಹಿಟ್ ಲಿಸ್ಟ್‌ನಲ್ಲಿ ಇದ್ದರು’ ಎಂದು ಈಚೆಗೆ ಲಕ್ನೋದಲ್ಲಿ ಬಂಧಿತನಾಗಿದ್ದ ಲಷ್ಕರ್ ಎ ತಯ್ಯಬ ಉಗ್ರ ಅಬ್ದುಲ್ ನಯೀಮ್ ಶೇಖ್ ಬಾಯಿ ಬಿಟ್ಟಿರುವುದಾಗಿ ಗುಪ್ತಚರ ದಳ ತಿಳಿಸಿದೆ.
ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಲಾಹೋರ್‌ನಲ್ಲಿರುವ ನಿರ್ವಾಹಕರ ಸಂಪರ್ಕದಲ್ಲಿ ಉಗ್ರ ನಯೀಮ್ ಶೇಖ್ ಇದ್ದುದರ ಖಚಿತ ಮಾಹಿತಿ ಗುಪ್ತಚರ ದಳಕ್ಕೆ ಇತ್ತು. ಅಂತೆಯೇ ಆತನ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಇಬ್ಬರು ಬಿಜೆಪಿ ನಾಯಕರು ತನ್ನ ಹಿಟ್‌ಲಿಸ್ಟ್‌ನಲ್ಲಿ ಹೊಂದಿದ್ದ ಬಗ್ಗೆ ಆತನು ಲಕ್ನೋದಲ್ಲಿ ಬಂಧಿತನಾದಾಗ ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದ. ಇದನ್ನು ಅನುಸರಿಸಿ ಗುಜರಾತ್‌ನಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಉಗ್ರ ನಯೀಮ್ ಒಂದು ಬಾರಿ ಕಾಶ್ಮೀರಕ್ಕೂ ಭೇಟಿ ನೀಡಿದ್ದ ಮತ್ತು ಅತ್ಯಂತ ಮಹತ್ವದ ಸೂಕ್ಷ್ಮ ತಾಣಗಳು ಮತ್ತು ಭದ್ರತಾ ವ್ಯವಸ್ಥೆಗಳ ಅವಲೋಕನವನ್ನೂ ಮಾಡಿದ್ದ. ಆತನ ಗುರಿಗಳಲ್ಲಿ ಸೇನಾ ಶಿಬಿರಗಳು ಮತ್ತು ವಿದ್ಯುದುತ್ಪಾದನಾ ಘಟಕಗಳೂ ಸೇರಿದ್ದವು ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಚುನಾವಣೆಗೆ ಮುನ್ನ ಅಥವಾ ಚುನವಾಣೆಯ ವೇಳೆ ಕ್ಷೋಭೆ, ಗಲಭೆಯನ್ನು ಸೃಷ್ಟಿಸುವುದು ಲಕ್ನೋದಲ್ಲಿನ ಎಲ್‌ಇಟಿ ಸ್ಲಿàಪರ್ ಸೆಲ್‌ನ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಉಗ್ರ ನಯೀಮ್ ಮತ್ತು ಆತನ ಸಹಚರರು ಪಾಕಿಸ್ಥಾನದಲ್ಲಿನ ಎಲ್‌ಇಟಿ ಹ್ಯಾಂಡ್‌ಲರ್‌ಗಳಿಂದ ಸಲಹೆ-ಸೂಚನೆಗಳನ್ನು ಸ್ವೀಕರಿಸುತ್ತಿದ್ದರು ಎಂದು ಗುಪ್ತಚರ ಮಾಹಿತಿ ತಿಳಿಸಿದೆ.
ಉಗ್ರ ನಯೀಮ್ ಶೇಖ್ ಮೂಲತಃ ಮಹಾರಾಷ್ಟ್ರದ ಔರಂಗಾಬಾದ್ ನವ. 2006ರಲ್ಲಿ ನಡೆದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ ಪ್ರಕರಣದಲ್ಲಿ ಆತ ಮುಖ್ಯ ಆರೋಪಿಯಾಗಿದ್ದ. 2014ರಲ್ಲಿ ಆತ ಛತ್ತೀಸ್‌ಗಢದಿಂದ ಪರಾರಿಯಾಗಿದ್ದ. ಅಲ್ಲಿಯ ಬಳಿಕ ಆತ ಬಹುತೇಕ ಬಾಂಗ್ಲಾದೇಶದಲ್ಲಿ ಅಡಗಿಕೊಂಡಿದ್ದ; ಈಚೆಗೆ ಲಕ್ನೋದಲ್ಲಿ ಆತನನ್ನು ಸೆರೆ ಹಿಡಿಯಲಾಯಿತು.