ಗುಜರಾತ್: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಇಬ್ಬರು ಬಾಲಕಿಯರು ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿರುವುದಾಗಿ ವರದಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕಳೆದ ಬುಧವಾರ (ಜೂನ್ 19)ದಂದು ನಡೆದಿದ್ದು, ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ವಾಹನದ ಹಿಂಬದಿಯ ಬಾಗಿಲು ತೆರೆಯಲ್ಪಟ್ಟು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಅದೃಷ್ಟವಶಾತ್ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳು ಇಲ್ಲದ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ,
ಘಟನೆಯಿಂದ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವಘಡದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಬಂದಿದ್ದ ವಾಹನ ಚಾಲಕ ಮಕ್ಕಳನ್ನು ಕುಳ್ಳಿರಿಸಿ ಹಿಂಬದಿ ಬಾಗಿಲನ್ನು ಸರಿಯಾಗಿ ಹಾಕದ ಪರಿಣಾಮ ಕೆಲವೇ ದೂರ ಪ್ರಯಾಣಿಸುವ ವೇಳೆ ಬಾಗಿಲು ತೆರೆದು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ ಕೂಡಲೇ ಅಲ್ಲಿದ್ದ ಮನೆ ಮಂದಿ ಬಾಲಕಿಯರ ಸಹಾಯಕ್ಕೆ ಧಾವಿಸಿದ್ದಾರೆ, ಬಳಿಕ ವಾಹನ ಚಾಲಕನಿಗೆ ವಾಹನದ ಬಾಗಿಲು ತೆರೆದಿರುವುದು ಗೊತ್ತಾಗಿದೆ.
ವಾಹನ ಚಾಲಕನ ಅಜಾಗರೂಕತೆಗೆ ಸಾರ್ವಜನಿಕರು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಪೋಷಕರು ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.