Advertisement

ಕಾಲೇಜಿನಲ್ಲೇ ಉಳಿದ ಅತಿಥಿ ಉಪನ್ಯಾಸಕರ ಗೌರವಧನ

07:20 AM Aug 24, 2020 | Hari Prasad |

– ರಾಜು ಖಾರ್ವಿ ಕೊಡೇರಿ

Advertisement

ಬೆಂಗಳೂರು: ರಾಜ್ಯದ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ಪಾವತಿಗೆ ಸರಕಾರ ಬಿಡುಗಡೆ ಮಾಡಿರುವ ಅನುದಾನ ಪ್ರಾಂಶುಪಾಲರ ಖಾತೆಯಲ್ಲೇ ಉಳಿಯುತ್ತಿದೆ!

ಕೋವಿಡ್ 19 ಪರಿಸ್ಥಿತಿ ಮತ್ತು ಲಾಕ್‌ಡೌನ್‌ನಿಂದ ಬಹುತೇಕರು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ, ಎದುರಿಸುತ್ತಲೇ ಇದ್ದಾರೆ.

ಅದರಲ್ಲೂ ಕಾಲೇಜು ಅತಿಥಿ ಉಪನ್ಯಾಸಕರ ಗೋಳು ಹೇಳತೀರದು.

ಎಲ್ಲವೂ ಸರಿ ಇದ್ದಾಗಲೇ ಇವರಿಗೆ ಗೌರವಧನ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬರುತ್ತಿತ್ತು. ನಾಲ್ಕು ತಿಂಗಳು ಆದುದೂ ಇದೆ. ಲಾಕ್‌ಡೌನ್‌ ಅವಧಿಯಲ್ಲಿ ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಮನವಿಗಳ ಮೇಲೆ ಮನವಿಯನ್ನು ಅತಿಥಿ ಉಪನ್ಯಾಸಕರು ಸಲ್ಲಿಸಿದ್ದಾರೆ.

Advertisement

ಇದಕ್ಕೆ ಸ್ಪಂದಿಸಿದ ಸರಕಾರವು ಅನುದಾನ ಬಿಡುಗಡೆ ಮಾಡಿದೆ. ಆದರೆ ಕೆಲವು ಕಾಲೇಜುಗಳ ಪ್ರಾಂಶುಪಾಲರು ಗೌರವಧನ ಹಂಚಿಕೆಯನ್ನು ಸಮರ್ಪಕವಾಗಿ ಮಾಡಿಲ್ಲ.

ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದ್ದಾರೆ.

ರಾಜ್ಯದ 400ಕ್ಕೂ ಅಧಿಕ ಪದವಿ ಕಾಲೇಜುಗಳಲ್ಲಿ 172 ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಗೌರವಧನ ಬಳಕೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಇನ್ನೂ ಪ್ರಮಾಣಪತ್ರ ಸಲ್ಲಿಸಿಲ್ಲ. ಅನೇಕ ಬಾರಿ ನೋಟಿಸ್‌ ನೀಡಿದ್ದರೂ ಪ್ರಾಂಶುಪಾಲರು ನಗಣ್ಯ ಮಾಡಿದ್ದಾರೆ. ಅನುದಾನವನ್ನು ತಮ್ಮಲ್ಲೇ ಉಳಿಸಿಕೊಂಡಿರುವ 172 ಸರಕಾರಿ ಪದವಿ ಕಾಲೇಜುಗಳಿಗೆ ಅಲ್ಲಿರುವ ಅತಿಥಿ ಉಪನ್ಯಾಸಕರ ಸಂಖ್ಯೆಗೆ ಅನುಗುಣವಾಗಿ 24.85 ಕೋಟಿ ರೂ.ಗಳನ್ನು ಸರಕಾರವು ಬಿಡುಗಡೆ ಮಾಡಿದೆ.

ಅದರಲ್ಲಿ ಬಳಕೆಯಾಗಿರುವುದು 23.82 ಕೋಟಿ ರೂ. ಮಾತ್ರ. ಆದರೆ ಇದಕ್ಕೂ ಬಳಕೆ ಪ್ರಮಾಣ ಪತ್ರ ನೀಡಿಲ್ಲ. ಹಾಗೆಯೇ 1.03 ಕೋಟಿ ರೂ.ಗಳನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿದ್ದಾರೆ ಎಂಬುದು ಇಲಾಖೆಯ ಪರಿಶೀಲನೆ ವೇಳೆ ತಿಳಿದು ಬಂದಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಸುಮಾರು 50 ಕಾಲೇಜುಗಳ ಪ್ರಾಂಶುಪಾಲರು ತಮ್ಮ ಖಾತೆಯಲ್ಲಿ ಹೆಚ್ಚೇನೂ ಹಣ ಉಳಿಸಿಕೊಂಡಿಲ್ಲವಾದರೂ ಬಳಕೆಯ ಪ್ರಮಾಣಪತ್ರ ಸಲ್ಲಿಸಿಲ್ಲ.

ಆದರೆ 100ಕ್ಕೂ ಅಧಿಕ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಖಾತೆಯಲ್ಲಿ 20 ಸಾವಿರ ರೂ.ಗಳಿಂದ 7 ಲಕ್ಷ ರೂ.ವರೆಗೂ ಹಣ ಉಳಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ, ಕಲಬುರಗಿ, ಯಾದಗಿರಿ, ಉತ್ತರ ಕನ್ನಡ, ರಾಮನಗರ, ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ ಸಹಿತ ಎಲ್ಲ ಜಿಲ್ಲೆಗಳ ಕೆಲವು ಸರಕಾರಿ ಪದವಿ ಕಾಲೇಜುಗಳು ಈ ಪಟ್ಟಿಯಲ್ಲಿವೆ.

ಪರಿಶೀಲನೆಯೂ ನಡೆದಿದೆ
ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಣೆ ವಿಚಾರವಾಗಿ ಕೊರತೆ ಅಥವಾ ಹೆಚ್ಚುವರಿ ಅನುದಾನಕ್ಕೆ ಸಂಬಂಧಿಸಿ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿ, ಹೆಚ್ಚುವರಿ ಕಾರ್ಯಭಾರ ಹಂಚಿಕೆ, ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಲ್ಲಿ ಆ ವಿವರ, ಕಾರ್ಯಭಾರ ಕಡಿಮೆ ಮಾಡಿರುವುದು ಇತ್ಯಾದಿ ಮಾಹಿತಿಯನ್ನು ಇಲಾಖೆಗೆ ಪ್ರಾಂಶುಪಾಲರು ನೀಡದೇ ಇರುವುದು, ಶೈಕ್ಷಣಿಕ ಸಾಲಿನ ಎರಡನೇ ಅವಧಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಅನುಮೋದನೆಯನ್ನು ವಿಳಂಬವಾಗಿ ಪಡೆದಿರುವುದು ಇತ್ಯಾದಿಗಳಿಂದ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಎಚ್ಚರಿಕೆ ರವಾನಿಸಿದ ಇಲಾಖೆ
ಅತಿಥಿ ಉಪನ್ಯಾಸಕರ ಗೌರವಧನ ಪಾವತಿಗೆ ಸಂಬಂಧಿಸಿ ಯಾವುದೇ ದೂರುಗಳು ಬಂದರೂ ಪ್ರಾಂಶುಪಾಲರೇ ನೇರ ಹೊಣೆ. ಈ ಸಂಬಂಧ ಇಲಾಖೆ ಅಪೇಕ್ಷಿಸಿರುವ ಮಾಹಿತಿ ನೀಡಲು ನಿರ್ಲಕ್ಷ್ಯ ಮತ್ತು ಅಸಹಕಾರ ಸರಿಯಲ್ಲ. ಹೀಗಾಗಿ ಎಲ್ಲ ಪ್ರಾಂಶುಪಾಲರು ಅವಶ್ಯ ವಿರುವ ದಾಖಲೆಗಳನ್ನು ಸ್ಪಷ್ಟ ವಿವರಣೆಯೊಂದಿಗೆ ಸಲ್ಲಿಸಬೇಕು. ಇದೇ ರೀತಿಯ ಪ್ರಕರಣ ಪುನರಾವರ್ತಿತವಾದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ| ಎಸ್‌. ಮಲ್ಲೇಶ್ವರಪ್ಪ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next