Advertisement

ಅತಿಥಿ ಉಪನ್ಯಾಸಕರ ಕಾಯಂಗೆ ಒತ್ತಡ: ಭರವಸೆ

12:08 PM Apr 28, 2017 | Team Udayavani |

ಬೆಂಗಳೂರು: ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರ ಸೇವೆ ಕಾಯಂಗೊಳಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸುವುದಾಗಿ ವಿಧಾನ ಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ ಭರವಸೆ ನೀಡಿದ್ದಾರೆ. 

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಗುರುವಾರ ನಡೆದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮಾವೇಶದಲ್ಲಿ ಮಾತ­ನಾಡಿದ ಅವರು, ಅತಿಥಿ ಉಪನ್ಯಾಸಕರ ಸಮಸ್ಯೆ­ಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಶೀಘ್ರವೇ ಸಂಘದ ಪದಾಧಿಕಾರಿ­ಗಳನ್ನು ಒಳಗೊಂಡ ನಿಯೋಗ ಕರೆದೊಯ್ದು, ಮುಖ್ಯಮಂತ್ರಿಯವರಿಗೆ ಸಮಸ್ಯೆ ಮನವರಿಕೆ ಮಾಡಿಕೊಡುತ್ತೇವೆ. ಸದನದಲ್ಲೂ ಅತಿಥಿ ಉಪ­ನ್ಯಾಸಕರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಹೇಳಿದರು. 

ಪರಿಷತ್‌ ಜೆಡಿಎಸ್‌ ಉಪನಾಯಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಕೋರ್ಟ್‌ ಆದೇಶದಂತೆ ಅರೆಕಾಲಿಕ ಉಪನ್ಯಾಸಕರ, ಜೆಒಸಿ ಕೋರ್ಸ್‌­ಗಳ ಅಧ್ಯಾಪಕರನ್ನು ಕಾಯಂ ಮಾಡಲಾ­ಗಿತ್ತು. ಅದರಂತೆ ಈಗ ಅತಿಥಿ ಉಪನ್ಯಾಸಕರನ್ನೂ ಕಾಯಂ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು. ರಾಜ್ಯ­ದಲ್ಲಿ 13,557 ಅತಿಥಿ ಉಪನ್ಯಾಸಕರಿದ್ದು, ಹಿರಿ­ತನದ ಆಧಾರದಲ್ಲಿ ಕಾಯಂಗೆ ಆದೇಶ ಹೊರಡಿಸುವಂತೆ ಸದನದಲ್ಲಿ ಆಗ್ರಹಿಸಲಾಗುವುದು ಎಂದರು. 

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಚ್‌.ಸೋಮಶೇಖರ್‌ ಶಿಮೊಗ್ಗಿ, ಅತಿಥಿ ಉಪ­ನ್ಯಾಸಕರಿಗೆ ಸೇವಾ ಭದ್ರತೆ ನೀಡಿ ಕಾಯಂ ಮಾಡ­ಬೇಕು. ಯುಜಿಸಿ 2010ರ ನಿಯಮಗಳನ್ನು ಉಲ್ಲಂ­ ಸಿ ಮಾಡಿರುವ ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕ ತಡೆಹಿಡಿದು ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಬೇಕು. 10 ತಿಂಗಳ ಬದಲಾಗಿ 12 ತಿಂಗಳ ಸಂಬಳ ನೀಡಬೇಕು. ತಿಂಗಳಿಗೊಂದು ಸಿಎಲ್‌(ರಜೆ) ಹಾಗೂ ಉಪನ್ಯಾಸಕಿಯರಿಗೆ ಹೆರಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು. 

ರಾಜ್ಯದ 414 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12859ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ಭದ್ರತೆಗಾಗಿ ಸರ್ಕಾರ ಶಾಶ್ವತ ನಿಯಮಾವಳಿ ರಚನೆ ಮಾಡಬೇಕು. ಪ್ರಸ್ತುತ ಶಿಕ್ಷಣ ಇಲಾಖೆ 2160 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸಿದ್ಧತೆ ನಡೆಸಿದ್ದು, ಪರಿಣಾಮ 4320 ಅತಿಥಿ ಉಪನ್ಯಾಸಕರು ಬೀದಿಗೆ ಬೀಳಲಿದ್ದಾರೆ. ಇದನ್ನು ಸರ್ಕಾರ ತಡೆಯಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next