ಗುಡಿಬಂಡೆ: ಪಟ್ಟಣದಿಂದ ರಾಮಪಟ್ಟಣ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಸವಾರರರು ಓಡಾಡಲು ಪರದಾಡುತ್ತಿದ್ದರಿಂದ, ಸಾರ್ವಜನಿಕರೇ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿದ ಘಟನೆ ನಡೆದಿದೆ.
ಗುಡಿಬಂಡೆಯಿಂದ ಉಲ್ಲೋಡು, ರಾಮಪಟ್ಟಣ ಸಂಪರ್ಕಿಸುವ ರಸ್ತೆ ಭಾರಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗಿದ್ದು, ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ನೀರು ತುಂಬಿ ರಸ್ತೆ ಗುಂಡಿಗಳು ಕಾಣದಾಗಿದ್ದು, ಇದರಿಂದ ಹಲವು ದ್ವಿಚಕ್ರ ವಾಹನ ಸವಾರರು ಉಟ್ಟ ಬಟ್ಟೆಗಳನ್ನು ಕೆಸರು ಮಯ ಮಾಡಿಕೊಂಡು, ಮನೆಗೆ ಹೋಗುವುದು ಸರ್ವೆ ಸಾಮಾನ್ಯವಾಗಿತ್ತು.
ರಸ್ತೆ ಚಿಕ್ಕದಾಗಿರುವುದರಿಂದ ಕೆಲವು ವಾಹನಗಳು ವೇಗವಾಗಿ ಸಂಚಾರ ಮಾಡುವುದರಿಂದ ನೀರು ಅಕ್ಕ ಪಕ್ಕದ ಮನೆ, ಅಂಗಡಿಗೆ ಹಾರುತ್ತಿತ್ತು, ಇದರಿಂದಾಗಿ ಮನೆ, ಅಂಗಡಿಗಳು ಸಹ ಕೆಸರು ಮಯವಾಗುತ್ತಿತ್ತು ಎಂದು ಸಾರ್ವಜನಿಕರು ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
ರಾಮಪಟ್ಟಣ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಸುಮಾರು ಎರಡು ಅಡಿ ಆಳದಷ್ಟು ಗುಂಡಿಗಳು ನಿರ್ಮಾಣವಾಗಿ ಸಣ್ಣ ಕೆರೆಗಳಂತಾಗಿ ವಾಹನ ಸವಾರರು ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದ್ದು, ಈ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ, ಅವರು ತಲೆ ಕೆಡಿಸಿಕೊಳ್ಳದ ಕಾರಣ ಬೇಸತ್ತ ಅಕ್ಕ ಪಕ್ಕದ ಅಂಗಡಿಗಳ ಯುವಕರೇ ಟ್ರ್ಯಾಕ್ಟರ್ ನಿಂದ ಒಂದು ಲೋಡ್ ಮಣ್ಣು ಹಾಕಿ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ.
ಸಾರ್ವಜನಿಕರು ಶಾಸಕರಿಗೆ ಸೂಚಿಸಿದರ ಮೇರೆಗೆ, ಶಾಸಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರೂ, ಅಧಿಕಾರಿಗಳು ಮಾತ್ರ ಎಮ್ಮೆ ಮೇಲೆ ಮಳೆ ಸುರಿದಂತೆ ತಮಗೇನೂ ತಿಳಿದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಗುಡಿಬಂಡೆ ಪಟ್ಟಣದ ನಿವಾಸಿ ಬಾಲಾಜಿ ಮಾತನಾಡಿ, ರಾಮಪಟ್ಟಣ ರಸ್ತೆ ಕಿರಿದಾಗಿದ್ದು, ಭಾರಿ ಗುಂಡಿಗಳು ಬಿದ್ದಿರುವುದರಿಂದ ಸಂಚಾರ ಮಾಡಲು ತುಂಬಾ ತೊಂದರೆಯಾಗಿದ್ದು, ಅಧಿಕಾರಿಗಳು ಕ್ರಮ ತೆಗೆದುಕೊಳ್ಳದ ಕಾರಣ ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದೇವೆ.