ಹುಬ್ಬಳ್ಳಿ: ಹಿರಿಯ ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿ ಸ್ಮರಣಾರ್ಥ ನೀಡುವ 2018ನೇ ಸಾಲಿನ ಸೇವಾ ಗೌರವ ಪ್ರಶಸ್ತಿಗೆ ಅಂಧ ಸಾಧಕಿ ಅಶ್ವಿನಿ ಅಂಗಡಿ ಭಾಜನರಾಗಿದ್ದಾರೆ.
ಜೂ.6ರಂದು ಹಳ್ಳಿಕೇರಿ ಗುದ್ಲೆಪ್ಪನವರ ಜಯಂತಿಯಂದು ಹೊಸರಿತ್ತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ
ಪ್ರದಾನ ಮಾಡಲಾಗುವುದು. ಪ್ರಶಸ್ತಿ 20,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ| ದೀನಬಂಧು
ಹಳ್ಳಿಕೇರಿ ನೇತೃತ್ವದ ಆಯ್ಕೆ ಸಮಿತಿ ಮೇ 21ರಂದು ಸಭೆ ನಡೆಸಿ ಅಶ್ವಿನಿ ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.
ಸಭೆಯಲ್ಲಿ ಸಾಹಿತಿ ಪ್ರೊ| ಎಸ್.ವಿ. ಪಟ್ಟಣಶೆಟ್ಟಿ, ಪ್ರೊ| ಕೆ.ಎಸ್. ಕೌಜಲಗಿ, ಪಿ.ಎಸ್. ಧರಣೆಪ್ಪನವರ, ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಪಾಲ್ಗೊಂಡಿದ್ದರು.
ಹುಟ್ಟಿನಿಂದಲೇ ಅಂಧತ್ವ ಹೊಂದಿದ ಅಶ್ವಿನಿ, ಅಂಧ ಮಕ್ಕಳ ಏಳ್ಗೆಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ತಮ್ಮ ಸಾಧನೆಗಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಶ್ವಸಂಸ್ಥೆ ಆಯ್ಕೆ ಮಾಡಿದ ವಿಶ್ವದ 7 ರಾಯಭಾರಿಗಳಲ್ಲಿ ಇವರೂ ಒಬ್ಬರು. ಕಾಮನ್ವೆಲ್ತ್ ಒಕ್ಕೂಟ ಯುವ ಸಾಧಕರಿಗೆ ನೀಡುವ ಕ್ವೀನ್ಸ್ ಯಂಗ್ ಲೀಡರ್ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.
ಅಶ್ವಿನಿ ಅಂಗಡಿಯವರು ಬೆಂಗಳೂರಿನಲ್ಲಿ ‘ಬೆಳಕು’ ಅಕಾಡೆಮಿ ಆರಂಭಿಸಿ ಅಂಧ ಮಕ್ಕಳಿಗೆ ವಸತಿ ಶಾಲೆ ನಡೆಸುತ್ತಿದ್ದಾರೆ. ಇವರ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವಿ.ಯು. ಚಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.