Advertisement

ಕೊರೆವ ಚಳಿಯಲ್ಲೂ ಗುಡ್ಡವೆರಿ ಕುಮಾರಸ್ವಾಮಿ ದರ್ಶನ

03:43 PM Nov 24, 2018 | Team Udayavani |

ಸಂಡೂರು: ಮೂರು ವರ್ಷಕ್ಕೊಮ್ಮೆ ಆಚರಿಸಲಾಗುವ ಐತಿಹಾಸಿಕ ಶ್ರೀಕುಮಾರಸ್ವಾಮಿಯ ಮಹಾಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ಕೊರೆವ ಚಳಿಯಲ್ಲೂ ಸಾಲುಗಟ್ಟಿ ನಿಂತ ಭಕ್ತರು ಕುಮಾರಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು.

Advertisement

ಕಾರ್ತೀಕ ಮಾಸದ ಪೌರ್ಣಿಮೆಯಂದು ಕೃತಿಕಾ ನಕ್ಷತ್ರದಲ್ಲಿ ಶ್ರೀ ಕುಮಾರಸ್ವಾಮಿಯ ವಿಶೇಷ ದರ್ಶನ ಪಡೆಯುವುದು ಹಿಂದಿನಿಂದ ಬಂದಿರುವ ಪ್ರತೀತಿ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆಯಿಂದಲೇ ದೇವಸ್ಥಾನದಲ್ಲಿ ಸಾಲುಗಟ್ಟಿ ನಿಂತಿದ್ದ ಸಾವಿರಾರು ಭಕ್ತರು, ವಿಶೇಷವಾಗಿ ಅಲಂಕರಿಸಲಾಗಿದ್ದ ಕುಮಾರಸ್ವಾಮಿಯ ದರ್ಶನ ಪಡೆದರು. ಮಹಾಜಾತ್ರೆಯ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ನಡೆಯಲಿವೆ. 

ಕಾರ್ತೀಕ ಮಾಸ ಪೌರ್ಣಿಮೆಯಂದು ಸಂಡೂರು ಕುಮಾರಸ್ವಾಮಿಯ ವಿಶೇಷ ದರ್ಶನ ಪಡೆದವರಿಗೆ ಜೀವನದಲ್ಲಿ ಶುಭವಾಗಲಿದೆ. ಆ ದರ್ಶನ ಪಡೆದವರು ಪುಣ್ಯವಂತರೆಂಬ ಭಾವನೆ ಭಕ್ತರಲ್ಲಿ ಮನೆ ಮಾಡಿದೆ. ಅಲ್ಲದೇ, ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ತೀಕ ಮಾಸ ಪೌರ್ಣಿಮೆಯಂದು ಕೃತಿಕಾ ನಕ್ಷತ್ರದ ದಿನದಂದೇ ಕುಮಾರಸ್ವಾಮಿ ಮಹಾಜಾತ್ರೆ ನಡೆಯುತ್ತಿರುವುದು ಭಕ್ತರಲ್ಲೂ ಭಕ್ತಿಯ ಭಾವ ಮತ್ತಷ್ಟು ಹೆಚ್ಚಿಸಿದೆ. ಹಾಗಾಗಿ ಪೌರ್ಣಿಮೆಯ ಮುನ್ನಾದಿನ ರಾತ್ರಿಯೇ ದೇವಸ್ಥಾನಕ್ಕೆ ಆಗಮಿಸಿ ನಿದ್ದೆ ಮಾಡುವ ಭಕ್ತರು, ಪೌರ್ಣಿಮೆಯಂದು ಬೆಳಗಿನ ಜಾವವೇ ಸಾಲುಗಟ್ಟಿನಿಂತು ಕುಮಾರಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
 
ಮಹಾಜಾತ್ರೆಯ ನಿಮಿತ್ತ ದೇವಸ್ಥಾನದಲ್ಲಿ ಮುಖ್ಯವಾಗಿ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದಾಭಿಷೇಕ, ತೆಂಗಿನ ತಿಳಿನೀರಿನ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜಾತ್ರೆಯ ನಿಮಿತ್ತ ರಾಜ್ಯ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದರ್ಶನ ಪಡೆದರು.

ಪ್ರವೇಶಿಸದ ಮಹಿಳೆಯರು: ಸಂಡೂರಿನ ಬೆಟ್ಟಗುಡ್ಡಗಳಲ್ಲಿ ನೆಲೆಸಿರುವ ಐತಿಹಾಸಿಕ ಕುಮಾರಸ್ವಾಮಿಯ ದರ್ಶನಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಆದರೆ, ಮಹಾಜಾತ್ರೆ ನಿಮಿತ್ತ ದೇವಸ್ಥಾನಕ್ಕೆ ಆಗಮಿಸುವ ಮಹಿಳಾ ಭಕ್ತರು, ದೇವಸ್ಥಾನದೊಳಕ್ಕೆ ಪ್ರವೇಶಿಸಿ ಕುಮಾರಸ್ವಾಮಿಯ ದರ್ಶನ ಪಡೆಯದೆ, ಹೊರಗಡೆಯಿಂದಲೇ ಕೈ ಮುಗಿದು ಭಕ್ತಿ ಸಮರ್ಪಿಸಿದರು. ಬಳಿಕ ಪಕ್ಕದಲ್ಲೇ ಇರುವ ಪಾರ್ವತಿ ದೇವಸ್ಥಾನದೊಳಕ್ಕೆ ತೆರಳಿ ಪಾರ್ವತಿ ದೇವಿಯ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೇವಸ್ಥಾನದಲ್ಲಿ ಬೆಳಗ್ಗೆನಿಂದ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳು ನಡೆದಿದ್ದು, ರಾತ್ರಿ 9 ಗಂಟೆಯ ನಂತರ ಪೂರ್ಣ ಅಲಂಕಾರ ಪೂಜೆ ನಡೆಯಿತು. ಈ ವೇಳೆ ವಾಡಿಕೆಯಂತೆ ಸ್ಥಳೀಯ ಘೋರ್ಪಡೆ ವಂಶಸ್ಥರೆಲ್ಲರೂ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಾಣಿಕೆಯನ್ನು ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next