Advertisement
ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ’ ಅಭಿಯಾನ ಹಮ್ಮಿಕೊಂಡಿದ್ದು, ಹಳ್ಳಿಗಳ ನೈರ್ಮಲ್ಯದ ಬಗ್ಗೆ ಖುದ್ದು ಮೌಲ್ಯಮಾಪನ ಮಾಡಲಿರುವ ಕೇಂದ್ರ ಸರ್ಕಾರ, ಅತ್ಯುತ್ತಮ ಜಿಲ್ಲೆಗೆ ಅಕ್ಟೋಬರ್ 2ರಂದು ಪ್ರಶಸ್ತಿ ನೀಡಲಿದೆ. ಈ ನಿಟ್ಟಿನಲ್ಲಿ ಜಿ.ಪಂ. ಪ್ರತಿ ಹಳ್ಳಿಗಳಲ್ಲಿ ಹಗಲು-ರಾತ್ರಿ ಆಂದೋಲನ ಮಾದರಿಯಲ್ಲಿ ಸ್ವಚ್ಛತಾ ಕ್ರಮ ಕೈಗೊಂಡಿದೆ. ಆದರೆ, ಈ ಉತ್ಸಾಹಕ್ಕೆ ನಗರದ ಕಸ ಕಿರಿಕಿರಿ ಉಂಟುಮಾಡುತ್ತಿದೆ.
Related Articles
Advertisement
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಶೀಘ್ರದಲ್ಲೇ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಗಮನಸೆಳೆಯಲಿದ್ದಾರೆ. ಅಲ್ಲದೆ, ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಏನಿದು ಸ್ವಚ್ಛ ಸರ್ವೇಕ್ಷಣ?: “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ’ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ್ ಮಿಷನ್‌ನ ಮುಂದುವರಿದ ಭಾಗ. ಈ ಮೊದಲು ಮನೆಗಳಲ್ಲಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿತ್ತು. ಈಗ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ರಥ’ವು ಹಳ್ಳಿಗಳಲ್ಲಿನ ಸಾಮೂಹಿಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದೆ. ಜತೆಗೆ ಜಿ.ಪಂ.ಯು ಆಸ್ಪತ್ರೆಗಳು, ಶಾಲೆಗಳು, ಅಂಗನವಾಡಿ, ಬಸ್ ನಿಲ್ದಾಣಗಳಲ್ಲಿನ ಸಮುದಾಯ ಶೌಚಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು,
ಶೌಚಾಲಯಗಳ ಬಳಕೆ ಸೇರಿದಂತೆ ಸಮಗ್ರ ನೈರ್ಮಲ್ಯ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಗುವುದು. ಗ್ರಾಮ ಸಭೆಗಳನ್ನು ನಡೆಸುವುದು, ಕರಪತ್ರ ಹಂಚುವುದು, ಕಸ ವಿಂಗಡಣೆ ಮತ್ತು ಸಮರ್ಪಕ ವಿಲೇವಾರಿ ಮತ್ತಿತರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿನ ಕಾಪಾಡಿಕೊಂಡಿದ್ದರೆ, ಇದಕ್ಕೆ 35 ಅಂಕಗಳೂ ಸಿಗಲಿವೆ.
ನಗರದ ತ್ಯಾಜ್ಯ ಹಳ್ಳಿಗಳಲ್ಲಿ ತಂದು ಸುರಿಯುವುದು ತಪ್ಪು. ಆದರೆ, ಇದಕ್ಕೆ ಏಕಾಏಕಿ ಕಡಿವಾಣ ಹಾಕುವುದೂ ಸುಲಭವಲ್ಲ. ಅದೇನೇ ಇರಲಿ, ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನನ್ನ ಗಮನಕ್ಕೆ ತಂದರೆ, ಪಾಲಿಕೆ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗುವುದು. -ಎಲ್.ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ, ಪಂಚಾಯತ್‌ರಾಜ್ ಇಲಾಖೆ ವಿಮಾನ ಹಾರಾಟಕ್ಕೂ ತೊಂದರೆ!: ಜಿ.ಪಂ ಉತ್ತರ ಭಾಗದಲ್ಲಿ ನಗರದ ಕಸ ಮತ್ತೂಂದು ರೀತಿಯ ಸಮಸ್ಯೆ ಹುಟ್ಟುಹಾಕಿದ್ದು, ಆ ಭಾಗದಲ್ಲಿ ಹಾರಾಡುವ ಲೋಹದ ಹಕ್ಕಿಗಳಿಗೂ ಕಿರಿಕಿರಿ ಉಂಟುಮಾಡುತ್ತಿವೆ! ಯಲಹಂಕ ವಾಯುನೆಲೆಯಲ್ಲಿ ನಿರಂತರ ವಿಮಾನಗಳ ಹಾರಾಟ ಮತ್ತು ತಾಲೀಮು ನಡೆಯುತ್ತದೆ. ಆದರೆ, ಅಲ್ಲಿ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಂಸದ ಅಂಗಡಿಗಳು ಮತ್ತು ಮಾಂಸಾಹಾರ ಹೋಟೆಲ್‌ಗಳು ಇವೆ. ಮಾಂಸದ ತ್ಯಾಜ್ಯವನ್ನು ರಾತ್ರೋರಾತ್ರಿ ರಸ್ತೆ ಬದಿ ಸುರಿಯಲಾಗುತ್ತಿದೆ. ಈ ತ್ಯಾಜ್ಯ ತಿನ್ನಲು ಹದ್ದುಗಳು ಬರುವುದರಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುತ್ತಿದೆ. ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನದ ವೇಳೆ ಈ ಸಮಸ್ಯೆ ಕಂಡುಬರುತ್ತದೆ. ಆಗ ಹದಿನೈದು ದಿನ ಮುಂಚಿತವಾಗಿ ಮಾಂಸ ಮಾರಾಟ ನಿಷೇಧಿಸಲಾಗುತ್ತದೆ. ಆದರೆ, ಇತ್ತೀಚೆಗೆ ಉಳಿದ ಸಂದರ್ಭದಲ್ಲೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ವಾಯುಸೇನೆ ಅಧಿಕಾರಿಗಳಿಂದಲೂ ದೂರು ಬಂದಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಬಿಬಿಎಂಪಿ ಆಯುಕ್ತರ ಗಮನಕ್ಕೂ ತರಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. * ವಿಜಯಕುಮಾರ ಚಂದರಗಿ