ಮಧುಗಿರಿ: ಗ್ಯಾರಂಟಿ ಕೆಲಸದ ಒತ್ತಡಕ್ಕೆ ಬೇಸತ್ತ ಮಹಿಳಾ ಸಿಬಂದಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಮಧುಗಿರಿ ತಾಲೂಕು ಕಚೇರಿಯಲ್ಲಿ ಪಡಸಾಲೆ ವಿಭಾಗದಲ್ಲಿ ಕಳೆದ 15 ವರ್ಷದಿಂದ ಕೆಲಸ ಮಾಡುತ್ತಿದ್ದ ಪಟ್ಟಣದ ಮೇದರಹಟ್ಟಿಯ ನಿವಾಸಿ ಲತಾ ಮೋಹನ್ (35) ಆತ್ಮಹತ್ಯೆ ಮಾಡಿಕೊಂಡ ಸಿಬಂದಿ.
ಗುರುವಾರ ರಾತ್ರಿ ಕಚೇರಿಯಿಂದ ಮನೆಗೆ ಹೋದ ಲತಾ ಸುಮಾರು 7.40 ರ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ.ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ. ನಂತರ ತಾಲೂಕು ಕಚೇರಿಯ ಮುಂದೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಸುಮಾರು 300 ಜನ ಸಾರ್ವಜನಿಕರು ಸೇರಿದ್ದು ಈಕೆಯ ಕರ್ತವ್ಯ ನೆನೆದು ಕಂಬನಿ ಮಿಡಿದರು.
ಈ ಸಮಯದಲ್ಲಿ ಸಾರ್ವಜನಿಕರೇ ತಹಶೀಲ್ದಾರ್ ಗೆ ದೂರು ನೀಡಿದ್ದು, ಇದಕ್ಕೆ ಕೆಲಸದ ಒತ್ತಡ ಹಾಗೂ ಗ್ರೇಡ್ 2 ತಹಶೀಲ್ದಾರ್ ಜಯಲಕ್ಷ್ಮಮ್ಮ ಕಾರಣ ಎಂದು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸುವಂತೆ ಮನವಿ ಸಲ್ಲಿಸಿದರು.
ಇದೇ ವೇಳೆ ಆಧಾರ್ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಬೇಕಾಗುವ ದಾಖಲೆ ನೀಡುವಾಗ ಹಣ ಸಂಗ್ರಹಿಸುವಂತೆ ಮೃತ ಲತಾ ರವರಿಗೆ ಒತ್ತಡ ಹೇರಲಾಗಿತ್ತು ಎಂದು ಸಾರ್ವಜನಿಕರು ದೂರಿದ್ದು, ಮಹಿಳಾ ಸಿಂಬ್ಬಂದಿಗಳನ್ನು ರಾತ್ರಿ 7.30 ರವರೆಗೂ ಕೆಲಸ ಮಾಡಿಸುತ್ತಿದ್ದ ಬಗ್ಗೆ ಅಸಮಧಾನ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿರುವ ಲತಾ ಪತಿ ಮೋಹನ್ ”ನಮ್ಮಲ್ಲಿ ಯಾವುದೇ ಕೌಟುಂಬಿಕ ಸಮಸ್ಯೆ ಇರಲಿಲ್ಲ. ಆದರೆ ಪ್ರತಿದಿನ ರಾತ್ರಿ 7 ರಿಂದ 8 ಗಂಟೆಯ ವರೆಗೂ ಕೆಲಸದ ಒತ್ತಡದ ಬಗ್ಗೆ ಪತ್ನಿ ಹೇಳುತ್ತಿದ್ದು ಇದಕೆ ಕೆಲಸದ ಒತ್ತಡವೇ ಕಾರಣ” ಎಂದು ದೂರಿದ್ದಾರೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.