ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಯಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ಭರಾಟೆ ಬಿರುಸುಗೊಂಡಿದೆ.
ಬಿಜೆಪಿ ಅಭ್ಯರ್ಥಿ ರವಿ, ಪಕ್ಷದ ಕಾರ್ಯಕರ್ತರು ಬೆಂಬಲಿಗರೊಂದಿಗೆ ಸೋಮವಾರ ಬೆಳಗ್ಗೆ ಕ್ಷೇತ್ರದ ಉದ್ಯಾನಗಳಿಗೆ ಭೇಟಿ ನೀಡಿ ವಾಯುವಿಹಾರಿಗಳೊಂದಿಗೆ ಸಂವಾದ ನಡೆಸಿ ಮತಯಾಚಿಸಿರು. ನಂತರ ಬೊಮ್ಮಸಂದ್ರ, ಕಟ್ಟಿಗೇನಹಳ್ಳಿ, ಶಿವಪುರ, ಅಗ್ರಹಾರ ಲೇಔಟ್, ಜಕ್ಕೂರು ಲೇಔಟ್ ಸೇರಿದಂತೆ ಹಲವು ಭಾಗಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಸಲುವಾಗಿ ಈ ಬಾರಿ ಶಾಸಕರಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಪ್ರಚಾರದ ವೇಳೆ ಸಾರ್ವಜನಿಕರ ಜತೆ ಸಂವಾದ ನಡೆಸಿದ ರವಿ, ಈ ಬಾರಿ ಆಯ್ಕೆಯಾದರೆ ಕಾನೂನು ಸುವ್ಯವಸ್ಥೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಕುಡಿಯುವ ನೀರಿನ ಸಂಪರ್ಕ, ಜಕ್ಕೂರು ಸಮೀಪದಲ್ಲಿ ಸುರಿಯುವ ತ್ಯಾಜ್ಯ ಮುಕ್ತ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಉದ್ಯಾನದಲ್ಲಿದ್ದ ಹಿರಿಯ ನಾಗರಿಕರು, ಸಾರ್ವಜನಿಕ ಉದ್ಯಾನವನಗಳ ಬಳಿ ಶೌಚಾಲಯಗಳಿಲ್ಲದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಈ ಸಮಸ್ಯೆ ಪರಿಹರಿಸುವುದಾಗಿ ರವಿ ಭರವಸೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನರೇ ಖುದ್ದಾಗಿ ಈ ಬಾರಿ ಬದಲಾವಣೆ ಬೇಕೆಂದು ಹೇಳುತ್ತಿರುವುದು ವಿಶ್ವಾಸ ಮೂಡಿಸಿದೆ. ಕಾರ್ಯಕರ್ತರ ಜತೆಗೂಡಿ ಅಭಿವೃದ್ಧಿ ಭರವಸೆ ನೀಡುವ ಮೂಲಕ ಮತ ಕೇಳುತ್ತಿದ್ದೇನೆ ಎಂದು ರವಿ ತಿಳಿಸಿದರು.