Advertisement

ದಶಕಗಳ ಹಿಂದಿನ ಸಮಸ್ಯೆಗೆ ಪರಿಹಾರದ ಭರವಸೆ

10:09 AM Jul 22, 2018 | Team Udayavani |

ಬಂಟ್ವಾಳ: ಮಂಗಳೂರು – ಸಕಲೇಶಪುರ ರೈಲ್ವೇ ಹಳಿಯಿಂದ ಊರು ಇಬ್ಭಾಗವಾಗಿ ಸಂಪರ್ಕ ಕಡಿದುಕೊಂಡ ಎರಡು ದಶಕಗಳ ಹಿಂದಿನ ಸಮಸ್ಯೆಗೆ ಪರಿಹಾರದ ಭರವಸೆ ದೊರೆತಿದೆ. ಇಲ್ಲಿನ ದೈಪಲ ನಿವಾಸಿ ವಿಜಯಲಕ್ಷ್ಮೀ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಊರಿನ ಸಂಕಷ್ಟದ ಬಗ್ಗೆ ಬರೆದ ಪತ್ರದಿಂದ ಈ ಭರವಸೆ ದೊರೆತಿದೆ.

Advertisement

ಮಹಿಳೆಯ ಪತ್ರ ಪ್ರಧಾನಿ ಕಚೇರಿಗೆ ತಲುಪುತ್ತಲೇ ಕಾರ್ಯಾಚರಣೆ ಆರಂಭವಾಗಿದೆ. ಜಿಲ್ಲಾಧಿಕಾರಿ, ಬಂಟ್ವಾಳ ಪುರಸಭೆ, ಗ್ರಾ.ಪಂ., ಎಂಜಿನಿಯರಿಂಗ್‌ ವಿಭಾಗಕ್ಕೆ ಸಮಸ್ಯೆಯ ಕುರಿತು ಪರಿಶೀಲಿಸಿ ವರದಿ ಒಪ್ಪಿಸುವಂತೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆಯಲ್ಲದೆ, ಆದ್ಯತೆ ನೆಲೆಯಲ್ಲಿ ಊರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸುವ ಯೋಜನಾ ವರದಿ ಜತೆಗೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಿದೆ. 

ಎರಡು ದಶಕಗಳ ಹಿಂದೆ ಮಂಗಳೂರಿಂದ ಸುಬ್ರಹ್ಮಣ್ಯ-ಸಕಲೇಶಪುರ ಮೂಲಕ ಬೆಂಗಳೂರಿಗೆ ಸಂಪರ್ಕಿಸುವ ರೈಲು ಮಾರ್ಗ ಆಗುತ್ತಲೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟು-ಬಿ. ಮೂಡ ಗ್ರಾಮ ವಿಭಾಗವಾಗಿತ್ತು. ಇದರಿಂದ ಇಲ್ಲೊಂದು ರೈಲ್ವೇ ಮೇಲ್ಸೇತುವೆ ನಿರ್ಮಿಸಲು ಸುದೀರ್ಘ‌ ಅವಧಿಯಿಂದ ಪ್ರಯತ್ನ ನಡೆದಿತ್ತು.

ರೈಲು ಹಳಿ ನಿರ್ಮಾಣದಿಂದ ಇಬ್ಭಾಗ
ಬಿ. ಮೂಡ ಗ್ರಾಮದ ಅಜ್ಜಿಬೆಟ್ಟು ಮೈಸೂರು ರೈಲ್ವೇ ವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ರೈಲು ಹಳಿ ನಿರ್ಮಾಣದ ಮೊದಲು ಒಂದೇ ಗ್ರಾಮ, ಒಂದೇ ಊರು ಎಂದು ಗುರುತಿಸಲ್ಪಡುತ್ತಿದ್ದ ಅಜ್ಜಿಬೆಟ್ಟು ಈಗ ಇಬ್ಭಾಗವಾಗಿದೆ. ಅಜ್ಜಿಬೆಟ್ಟು, ದೈಪಲ, ಕಾಮಾಜೆ, ರಾಜೀವಪಲ್ಕೆ, ಪೊಟ್ಟುಕೋಡಿ, ಕಲಾಯಿ ಮತ್ತು ಅಮ್ಟಾಡಿ ಗ್ರಾಮಸ್ಥರು ನೇರ ಸಂಪರ್ಕದಿಂದ ಪ್ರತ್ಯೇಕವಾಗಿದ್ದಾರೆ. 

ಇಲ್ಲಿನ 167ಕ್ಕೂ ಅಧಿಕ ಕುಟುಂಬದವರು ಯಾವುದೇ ವಿಚಾರಕ್ಕೂ ನಡೆದು ಬಂದು ರೈಲು ಹಳಿಯನ್ನು ದಾಟಿ ಬಿ.ಸಿ.
ರೋಡ್‌ಗೆ ಬರಬೇಕಾಗಿದೆ. ಹಾಗಾಗಿ ರೈಲು ಹಳಿಯ ಅಜ್ಜಿಬೆಟ್ಟು ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿದ್ದರು. ಅಜ್ಜಿಬೆಟ್ಟು ಪ್ರದೇಶದವರು ಅಸೌಖ್ಯದಿಂದ ನಡೆಯಲು ಸಾಧ್ಯವಾಗದ ಸ್ಥಿತಿಗೆ ಬಂದರೆ ಅವರನ್ನು ಹೊತ್ತುಕೊಂಡೇ ಬರಬೇಕು. ಆ್ಯಂಬುಲೆನ್ಸ್‌ ಅಥವಾ ವಾಹನಗಳ ಸೇವೆ ಬೇಕಾದರೆ 6-7 ಕಿ.ಮೀ. ಸುತ್ತು ಬಳಸಿ ಬರಬೇಕಾದ ಅನಿವಾರ್ಯ ಇದೆ. ಶಾಲಾ ಮಕ್ಕಳು ಕೂಡ ನಡೆದೇ ಹೋಗಬೇಕಾಗಿದೆ.

Advertisement

ಕನಸು ನನಸು ಸಾಧ್ಯತೆ
ಮೇಲ್ಸೇತುವೆ ನಿರ್ಮಾಣ ಸಮಸ್ಯೆ ಬಗೆಹರಿಸಲು ಕಳೆದ 20 ವರ್ಷಗಳ ಅವಧಿಯಿಂದ ಪ್ರಯತ್ನಗಳು ಸಾಗುತ್ತಿದ್ದರೂ ರೈಲ್ವೇ ಇಲಾಖೆ ಅಧಿಕಾರಿಗಳು, ಸಚಿವರು, ರಾಜ್ಯ, ಕೇಂದ್ರ ಸರಕಾರ ಕೂಡ ಜನರ ಕೂಗನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. 1998ರಿಂದ ಹೋರಾಟ ಸಮಿತಿ ಮೂಲಕ ರೈಲ್ವೇ ಮಂತ್ರಿಯಾಗಿದ್ದ ಜಾಫ‌ರ್‌ ಶರೀಫ್, ಸಂಸದರಾಗಿದ್ದ ಧನಂಜಯ ಕುಮಾರ್‌, ಸಂಸದ ಡಿ.ವಿ. ಸದಾನಂದ ಗೌಡ ಅವರಿಗೆ ಮನವಿ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಸ್ಥಳೀಯರ ಕೂಗು. ಈಗ ಮೋದಿಗೆ ಬರೆದ ಪತ್ರದಿಂದ ಇಲಾಖೆಯಲ್ಲಿ ಸ್ವಲ್ಪಮಟ್ಟಿನ ಚುರುಕು ಮುಟ್ಟಿದೆ ಮತ್ತು ಇದರಿಂದ ಇಲ್ಲಿನ ನಿವಾಸಿಗಳ ದಶಕದ ಕನಸು ನನಸಾಗುವ ಸಾಧ್ಯತೆಯಿದೆ.

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next