Advertisement

Guarantee Schemes ಕೈ ಹಿಡಿಯಲಿದೆ; ಕನಿಷ್ಠ 20 ಸ್ಥಾನ ಗೆಲ್ಲುವುದು ಖಚಿತ ಎಂದ ಮುಖ್ಯಮಂತ್ರಿ

10:13 PM Feb 18, 2024 | Team Udayavani |

ಮಂಡ್ಯ: ನಮ್ಮ ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿದ್ದು, ನಾವು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ. ಉಪಕಾರ ಮಾಡಿದವರನ್ನು ಮರೆಯಬಾರದು. ನೀವು ಮೈತ್ರಿ ಪಕ್ಷಕ್ಕೆ ಮತ ನೀಡಬಾರದು. ನಮ್ಮ ಯೋಜನೆಗಳಿಂದ ಸಾಕಷ್ಟು ಅನುಕೂಲವಿದೆ ಎಂಬುದನ್ನು ಮರೆಯಬೇಡಿ ಎಂದು ಮತದಾರರಿಗೆ ಹೇಳಿದರು.

ಜಾತ್ಯತೀತ ಪದ ತೆಗೆಯಿರಿ
ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎನ್ನುತ್ತಿದ್ದವರು ಈಗ ಕೋಮುವಾದಿ ಪಕ್ಷದ ಜತೆ ಕೈಜೋಡಿಸಿದ್ದಾರೆ. ಬಿಜೆಪಿಯೊಂದಿಗೆ ಹೋಗುವಂತೆ ನಾನೇ ಕುಮಾರಸ್ವಾಮಿಗೆ ಹೇಳಿದ್ದೇನೆ ಎಂದಿದ್ದಾರೆ. ಎಲ್ಲಿ ಹೋಯಿತು ಇವರ ಜಾತ್ಯತೀತ ತತ್ವ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಮಿಸ್ಟರ್‌ ದೇವೇಗೌಡರೇ, ನಿಮ್ಮ ಪಕ್ಷದಲ್ಲಿರುವ ಜಾತ್ಯತೀತ ಪದವನ್ನು ತೆಗೆದು ಬಿಡಿ, ಅದನ್ನು ಇಟ್ಟುಕೊಳ್ಳುವ ನೈತಿಕತೆ ನಿಮಗಿಲ್ಲ ಎಂದು ಕಿಡಿಕಾರಿದರು.

ಎಚ್‌ಡಿಡಿ, ಎಚ್‌ಡಿಕೆಯಿಂದ ನಾಟಕ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ 39 ಸ್ಥಾನ ಪಡೆದಿತ್ತು. 2023ರಲ್ಲಿ 19 ಸ್ಥಾನ ಪಡೆದಿದೆ. ಮುಂದೆ ಅದು ಸೊನ್ನೆಗೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಸಾಕಷ್ಟು ಶಾಸಕರು ಕಾಂಗ್ರೆಸ್‌ಗೆ ಬರಲು ಸಿದ್ಧವಾಗಿದ್ದರು. ಇದನ್ನು ಅರಿತ ದೇವೇಗೌಡರು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಜಾತಿವಾದಿ ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ನಾಟಕವಾಡುತ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಎರಡೆರಡು ಬಾರಿ ಸಿಎಂ ಆಗಿದ್ದರು. ಬಿಜೆಪಿ ಸರಕಾರವೂ ಇತ್ತು. ಆದರೆ, ಮಳವಳ್ಳಿ ಸಹಿತ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ನಿಮಗೇಕೆ ಜಿಲ್ಲೆಯ ಜನ ಮತ ಹಾಕಬೇಕು ಎಂದು ಪ್ರಶ್ನಿಸಿದರು.

ಸಚಿವರಾದ ಎನ್‌.ಚಲುವರಾಯಸ್ವಾಮಿ, ಸತೀಶ್‌ ಜಾರಕಿಹೊಳಿ, ಬೈರತಿ ಸುರೇಶ್‌, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌ಗೌಡ ಗಣಿಗ, ಕದಲೂರು ಉದಯ್‌, ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್‌ಗೂಳಿಗೌಡ, ಕೆ.ಆರ್‌.ನಗರ ಶಾಸಕ ರವಿಶಂಕರ್‌, ಮಂಜುನಾಥ್‌ ಭಂಡಾರಿ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next