Advertisement

Guarantee; ಗೃಹಲಕ್ಷ್ಮಿ ಆರ್ಥಿಕ ಸಂಕಷ್ಟ ಸರಿದೂಗಿಸಲು ಬಿಪಿಎಲ್‌ ಕಾರ್ಡ್‌ ರದ್ದು: ಕೋಟ

12:36 AM Oct 19, 2024 | Team Udayavani |

ಪುತ್ತೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿಯಡಿಯಲ್ಲಿ ಫಲಾನುಭವಿಗಳಿಗೆ ತಿಂಗಳಿಗೆ 2 ಸಾ. ರೂ. ಪಾವತಿಸಲು ಸರಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣ ಈ ಯೋಜನೆಯನ್ನು ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಸೀಮಿತಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆದಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್‌ ಚುನಾವಣೆ ಕುರಿತಂತೆ ಪಕ್ಷದ ಪ್ರಮುಖರ ಜತೆಗೆ ಸಭೆ ನಡೆಸಿ ಬಳಿಕ ಅವರು ಮಾತನಾಡಿದರು. ದ.ಕ.ಜಿಲ್ಲೆಯಲ್ಲಿ ಸುಮಾರು 50 ಸಾವಿರ ಕಾರ್ಡ್‌ ರದ್ದುಪಡಿಸಲು ಉದ್ದೇಶಿಸಲಾಗಿದ್ದು, ತನ್ಮೂಲಕ ಬಡವರಿಗೆ ಅನ್ಯಾಯವಾಗಲಿದೆ. ಬಿಪಿಎಲ್‌ ಕಾರ್ಡ್‌ ರದ್ದಾದರೆ ಆ ಕುಟುಂಬವೂ ಅನ್ನಭಾಗ್ಯ ಯೋಜನೆ, ಆಯುಷ್ಮಾನ್‌ ಭಾರತ್‌ ಸೌಲಭ್ಯ, ಸ್ಕಾಲರ್‌ಶಿಪ್‌ ಸಹಿತ ವಿವಿಧ ಯೋಜನೆಗಳಿಂದ ವಂಚಿತವಾಗಲಿದೆ ಎಂದರು.

ಪಂಚಾಯತ್‌ರಾಜ್‌ ವ್ಯವಸ್ಥೆ ದುರ್ಬಲಕ್ಕೆ ಕಾಂಗ್ರೆಸ್‌ ಯತ್ನ
ಕೇಂದ್ರದ ಬಿಜೆಪಿ ಸರಕಾರವೂ ಗ್ರಾ.ಪಂ.ಗಳಿಗೆ ಬಲ ತುಂಬುವ ಕಾರ್ಯ ನಡೆಸಿದೆ. ಗ್ರಾ.ಪಂ.ಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟರೆ ಸಾಮಾನ್ಯ ಜನರ ಹೆಚ್ಚಿನ ಸಮಸ್ಯೆ ಅಲ್ಲೇ ಪರಿಹಾರವಾಗಲಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ 15ನೇ ಹಣಕಾಸು ಯೋಜನೆಯಡಿ ಗ್ರಾ.ಪಂ.ಗಳಿಗೆ ನೇರ ಅನುದಾನ ನೀಡುತ್ತಿದೆ.

ಜನಸಂಖ್ಯಾ ಆಧಾರದಲ್ಲಿ ಕೆಲವು ಗ್ರಾ.ಪಂ.ಗಳಿಗೆ 50 ಲಕ್ಷ ರೂ.ನಿಂದ 1 ಕೋ. ರೂ. ತನಕ ಅನುದಾನ ಸಿಗುತ್ತಿದೆ. ಪ್ರತಿ ಮನೆಗೆ ಶೌಚಾಲಯ, ದೀನ ದಯಾಳ್‌ ಯೋಜನೆ ಮೂಲಕ ಮನೆ ಮನೆಗೆ ವಿದ್ಯುತ್‌ ಸಂಪರ್ಕ ಮೊದಲಾದ ಯೋಜನೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್‌ ಸರಕಾರ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಇದರ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಉದಾಹರಣೆಗೆ ಈ ಹಿಂದೆ 9/11 ಅನ್ನು ಗ್ರಾ.ಪಂ. ನೀಡುತ್ತಿತ್ತು. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಆ ಅಧಿಕಾರವನ್ನು ರದ್ದು ಮಾಡಿ ಪ್ರಾಧಿಕಾರಕ್ಕೆ ನೀಡಿದ್ದು, ಇದರಿಂದ ಜನರಿಗೆ ತೊಂದರೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next