ಬೆಂಗಳೂರು: ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂಬ ಸದುದ್ದೇಶದಿಂದ ರೂಪಿತವಾಗಿರುವ ಉದ್ಯೋಗ ಖಾತರಿ ಯೋಜನೆಯಲ್ಲಿ ವಿಧವೆ, ವಿಚ್ಛೇದಿತ ಅಥವಾ ಪತಿ ಪರಿತ್ಯಕ್ತರು, ನಿರಾಶ್ರಿತ ಮಹಿಳೆಯರು, ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಉದ್ಯೋಗ ಭಾಗ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಈ ವರ್ಷವೂ ಬರದ ಕರಿನೆರಳು ಬೀಳುತ್ತಿದೆ. ಹೀಗಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಯಂತೆ ಇವರೆಲ್ಲರಿಗೆ ಉದ್ಯೋಗ ಚೀಟಿ ನೀಡುವ ಮೂಲಕ 100 ದಿನದ ಉದ್ಯೋಗ ಖಾತರಿ ನೀಡಲು ನಿರ್ಧರಿಸಿದೆ. ಅಲ್ಲದೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಶ್ರಮರಹಿತ ಕೆಲಸ ಕೊಡಲೂ ಗ್ರಾಮೀಣಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ.
ನರೇಗಾ ಯೋಜನೆಯಡಿ ಮಹಿಳೆಯರಿಗೆ ಸೃಷ್ಟಿಸಲಾದ ಉದ್ಯೋಗಾವಕಾಶಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಉದ್ಯೋಗವನ್ನು ವಿಶೇಷ ವರ್ಗದ ಮಹಿಳೆಯರಿಗೆ ನೀಡಬೇಕು ಎಂದಿದೆ. ಅದರಂತೆ ವಿಧವೆಯರು, ಪತಿ ಪರಿತ್ಯಕ್ತ, ನಿರಾಶ್ರಿತ ಮಹಿಳೆಯರನ್ನು ದುರ್ಬಲ ಮತ್ತು ವಿಶೇಷ ವರ್ಗ ಎಂದು ಪರಿಗಣಿಸಿ ಅವರಿಗೆ ಉದ್ಯೋಗ ಸಿಗುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಗಮನಹರಿಸಿದೆ.
ಈ ರೀತಿಯ ಅಸಹಾಯ ಮತ್ತು ಅಶಕ್ತ ಮಹಿಳೆಯರನ್ನು ಗುರುತಿಸಿ ಅವರನ್ನು ಒಂದು ಕುಟುಂಬ ಎಂದು ಪರಿಗಣಿಸಿ, ವಿಶೇಷ ಉದ್ಯೋಗ ಚೀಟಿ ನೀಡಿ ಕ್ರಮ ಕೈಗೊಳ್ಳುವ ಮೂಲಕ 100 ದಿನಗಳ ಉದ್ಯೋಗವನ್ನು ಖಾತರಿಪಡಿಸಬೇಕು ಎಂದು ಇಲಾಖೆ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 1.38 ಕೋಟಿ ಕೆಲಸಗಾರರಿಗೆ ಒಟ್ಟು 53.19 ಲಕ್ಷ ಜಾಬ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಈ ಪೈಕಿ 63.24 ಲಕ್ಷ ಮಹಿಳೆಯರು ಇದ್ದಾರೆ. ಆದರೆ, ಒಟ್ಟು ಜಾಬ್ ಕಾರ್ಡ್‌ಗಳ ಪೈಕಿ 26.59 ಲಕ್ಷ ಜಾಬ್‌ಕಾರ್ಡ್‌ಗಳು ಚಾಲ್ತಿಯಲ್ಲಿದ್ದು, 61.44 ಲಕ್ಷ ಕೆಲಸಗಾರರು ಸಕ್ರಿಯರಾಗಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ 29 ಲಕ್ಷ ಇದೆ. ಇವರನ್ನು ಹೊರತುಪಡಿಸಿ ಹಳ್ಳಿಗಳಲ್ಲಿ ಇರುವ ಅಸಾಹಯಕ ಮತ್ತು ಅಶಕ್ತ ಮಹಿಳೆಯರನ್ನು ಗುರುತಿಸಿ ಅವರಿಗೂ 100 ದಿನಗಳ ಉದ್ಯೋಗ ಖಾತರಿ ನೀಡಿ, ಪ್ರತಿ ದಿನ 236 ರೂ. ಕೂಲಿ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಗರ್ಭಿಣಿ, ಬಾಣಂತಿಯರಿಗೆ ಮನೆ ಹತ್ತಿರವೇ ಕೆಲಸ
ಅಸಹಾಯಕ ಮತ್ತು ಅಶಕ್ತ ಮಹಿಳೆಯರ ಜತೆಗೆ ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಉದ್ಯೋಗ ಖಾತರಿಯಲ್ಲಿ ವಿಶೇಷ ಕಾಳಜಿ ತೋರಲಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷ ಸಂದರ್ಭಗಳಲ್ಲಿರುವ ಮಹಿಳೆಯರು ಎಂದು ಪರಿಗಣಿಸಿ ಅವರಿಗೆ ಹೆರಿಗೆಗೆ ಮೊದಲು ಕನಿಷ್ಠ 8 ತಿಂಗಳು ಮತ್ತು ಹೆರಿಗೆ ನಂತರ ಕನಿಷ್ಠ 10 ತಿಂಗಳು ಯಾವುದೇ ಕಠಿಣ ಶ್ರಮ ಇಲ್ಲದ ಕೆಲಸ ನೀಡಬೇಕು. ಆ ಕೆಲಸಗಳು ಅವರ ಮನೆ ಸಮೀಪ ಇರುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ಸೂಚನೆ ನೀಡಿದೆ.
ನರೇಗಾದಡಿ ವಿಶೇಷ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4,000 ವಿಕಲಚೇತನರಿಗೆ ಉದ್ಯೋಗ ನೀಡಲಾಗಿದೆ. ಇದರ ಜೊತೆಗೆ ವಿಧವೆಯರು, ಪತಿ ಪರಿತ್ಯಕ್ತ, ನಿರಾಶ್ರಿತ ಮಹಿಳೆಯರಿಗೆ 100 ದಿನಗಳ ಉದ್ಯೋಗ ಖಾತರಿ ನೀಡಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಗರ್ಭಿಣಿಯರು, ಬಾಣಂತಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ.
– ಉಪೇಂದ್ರ ಪ್ರತಾಪ್ ಸಿಂಗ್, ಆಯುಕ್ತರು, ಉದ್ಯೋಗ ಖಾತರಿ ಯೋಜನೆ.
– ರಫೀಕ್ ಅಹ್ಮದ್