Advertisement

ಸಿದ್ದು ಸೋಲಿಸಲು ಜಿಟಿಡಿ ಒಬ್ಬರೇ ಸಾಕು

07:25 AM Apr 30, 2018 | Team Udayavani |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನನ್ನು ಸೋಲಿಸಲು ನಾನು ಹೋಗಬೇಕಿಲ್ಲ. ಈ ಜೂನಿಯರ್‌ ದೇವೇಗೌಡ (ಜಿಟಿಡಿ) ಒಬ್ಬರೇ ಸಾಕು. ಇವರೇನು ಕಡಿಮೆ ಫೈಲ್ವಾನ್‌ ಅಲ್ಲ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಪ್ರಚಾರ ಅಂತೇನಿಲ್ಲ. ರಾಜ್ಯ ಪ್ರವಾಸದ ಪಟ್ಟಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರವೂ ಇದ್ದರೆ ಹೋಗುತ್ತೇನೆ. ಇಲ್ಲಿ ಕಷ್ಟ ಇದೇ ಅನ್ನುವ ಕಾರಣಕ್ಕೆ ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ದಲ್ಲವೇ, ಇದನ್ನು ಜನ ಮಾತನಾಡಿಕೊಳ್ಳುತ್ತಿಲ್ಲವೇ ಎಂದರು.

ಕಾಂಗ್ರೆಸ್‌ನಿಂದ ಅಪಪ್ರಚಾರ:
ಜೆಡಿಎಸ್‌ಗೆ ಓಟುಕೊಟ್ಟರೆ ಅದು ಬಿಜೆಪಿಗೆ ಕೊಟ್ಟಂತೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ತುತ್ತೂರಿ ಊದುತ್ತಾರೆ. ರಾಹುಲ್‌ ಗಾಂಧಿಗೆ ಏನೂ ಗೊತ್ತಾಗುವುದಿಲ್ಲ. ಅವರಿಗೆ ಚೀಟಿ ಬರೆದುಕೊಟ್ಟು ಹೇಳಿಸುತ್ತಾರೆ. ಮುಸ್ಲಿಮರನ್ನು ಇವರೇನು ಗುತ್ತಿಗೆಪಡೆದಿದ್ದಾರಾ? ನಾವು ಮುಸ್ಲಿಮರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ, ಸಿ.ಎಂ.ಇಬ್ರಾಹಿಂ ಬೆಳೆಸಿದ್ದು ನಾವು, ಹುಬ್ಬಳ್ಳಿಯ ಈದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ್ದು ನಾವು. ದತ್ತಪೀಠ ವಿವಾದ ಆರಂಭವಾಗಿದ್ದೂ ಕಾಂಗ್ರೆಸ್‌ ಆಡಳಿತಾವಧಿಯಲ್ಲೇ, ಎಸ್‌.ಎಂ.ಕೃಷ್ಣ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ, ದತ್ತಪೀಠದಲ್ಲಿ ಹೋಮ ಹವನ ಮಾಡಿದ್ದರಿಂದ ಸಮಸ್ಯೆ ಆರಂಭವಾಯಿತು. ಈ ಕಾಂಗ್ರೆಸ್‌-ಬಿಜೆಪಿಯವರು ಇಂತಹ ಸಮಸ್ಯೆಗಳಿಗೆ ಒಬ್ಬರು ಪೆಟ್ರೋಲ್‌ ಸುರಿಯುತ್ತಾರೆ, ಇನ್ನೊಬ್ಬರು ಬೆಂಕಿಹಚ್ಚುತ್ತಾರೆ. ಚ್‌.ಡಿ.ಕುಮಾರಸ್ವಾಮಿಯವರ ವರ್ಚಸ್ಸು ನೋಡಿ ಇವರೆಲ್ಲಾ ಹತಾಶರಾಗಿದ್ದಾರೆ ಎಂದು ಜರಿದರು.

ಸಿದ್ದರಾಮಯ್ಯ ಬೆಳೆದಿದ್ದೇ ಪ್ರಾದೇಶಿಕ ಪಕ್ಷದಲ್ಲಿ:
ಸಿದ್ದರಾಮಯ್ಯ ಬೆಳೆದಿದ್ದೇ ಪ್ರಾದೇಶಿಕ ಪಕ್ಷದಿಂದ ಎಂಬುದನ್ನು ನೆನಪಿಟ್ಟುಕೊಳ್ಳಲಿ, 1983ರಲ್ಲಿ ಪಕ್ಷೇತರ ಶಾಸಕರಾಗಿದ್ದ ಅವರನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು, ರಾಮಕೃಷ್ಣ ಹೆಗಡೆ ಸರ್ಕಾರ. ಇವತ್ತು ಎಚ್‌.ಡಿ.ದೇವೇಗೌಡ ನನ್ನನ್ನು ಬೆಳೆಸಲಿಲ್ಲ ಅನ್ನುತ್ತಾರೆ, ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಇದನ್ನು ಸರ್ಕಾರ ಅಂತಾರಾ? ಸಿದ್ದರಾಮಯ್ಯ ಅವರ ಐದು ವರ್ಷಗಳ ಆಡಳಿತವನ್ನು ಯಾರಾದ್ರು ಸರ್ಕಾರ ಅನ್ನುತ್ತಾರಾ? ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಗಳು ಜೈಲಿಗೆ ಹೋದರು, ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನು ಮುಗಿಸಿ, ಜೈಲಿಗೆ ಹೋಗಬೇಕಾದವರನ್ನೆಲ್ಲಾ ಉಳಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು. ನುಡಿದಂತೆ ನಡೆದಿದ್ದೇವೆ ಎನ್ನುವ ಸಿದ್ದರಾಮಯ್ಯ ಅವರದು ಐದು ವರ್ಷಗಳ ಕೆಟ್ಟ ಆಡಳಿತ, ಭಾಗ್ಯಗಳ ನಡುವೆ ಅವರಿಗೆ ಈ ತಪ್ಪುಗಳೆಲ್ಲಾ ಕಾಣುತ್ತಿಲ್ಲ ಎಂದು ಟೀಕಿಸಿದರು.

Advertisement

ಅನೇಕ ಕಡೆಗಳಲ್ಲಿ ಜೆಡಿಎಸ್‌ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಪ್ರಕರಣ ಹಾಕಿಸಿ ಭಯ ಹುಟ್ಟಿಸುತ್ತಿದ್ದಾರೆ. ಗೃಹ ಇಲಾಖೆಯನ್ನು ಕೆಂಪಯ್ಯ ನಿರ್ವಹಿಸುತ್ತಿರುವಾಗ ಇವರಿಂದ ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಭಟ್ಕಳದ ಜೆಡಿಎಸ್‌ ಅಭ್ಯರ್ಥಿಗೆ ಬೆದರಿಕೆ ಹಾಕಿ ನಾಮಪತ್ರ ವಾಪಸ್‌ ತೆಗೆಸಿದ್ದಾರೆ. ಅಲ್ಲಿನ ಎಸ್‌ಪಿ ಗಮನಕ್ಕೆ ಈ ವಿಷಯವನ್ನು ತಂದಿದ್ದೇನೆ ಎಂದರು.

ಮಾಯಾವತಿ ಬಂದ ತಕ್ಷಣ ದಲಿತರು ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ ಎನ್ನುವುದಾದರೆ, ರಾಹುಲ್‌ ಗಾಂಧಿ ಬಂದ ತಕ್ಷಣ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಾ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ, ನನ್ನ ಮೇಲೆ ಪದೇ ಪದೆ ಆಣೆ ಮಾಡುತ್ತಾರೆ. ಆಣೆ ಕಾಲ ಹೋಗಿ ಈಗ ಕೋರ್ಟಿನ ಕಾಲ ಬಂದಿದೆ. ಅವರನ್ನು ಪ್ರೀತಿಯಿಂದ ಸಿದ್ರಾಮು ಎಂದು ಕರೆಯುತ್ತಿದ್ದುದಕ್ಕೆ ನನ್ನ ಮೇಲೆ ದ್ವೇಷ ಸಾಧಿಸುತ್ತಾರೆ ಎಂದರು.

ದಾಖಲೆ ಇದ್ದರೆ ಬಿಡುಗಡೆ ಮಾಡಿ:
ಜೆಡಿಎಸ್‌-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ, ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಆದಾಯ ತೆರಿಗೆ ಇಲಾಖೆ ದಾಳಿಗಳನ್ನು ರಾಜಕೀಯ ಪ್ರೇರಿತ ಅನ್ನುವುದಿಲ್ಲ. ವರ್ಷಕ್ಕೆ ಆರು ಚುನಾವಣೆ ನಡೆಯುತ್ತವೆ. ಹಾಗಿದ್ದರೆ, ಅವರು ದಾಳಿಯನ್ನೇ ಮಾಡಬಾರದೇ ಎಂದು ಪ್ರಶ್ನಿಸಿದರು. ಶಾಸಕ ಜಿ.ಟಿ.ದೇವೇಗೌಡ, ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪೊ›.ಕೆ.ಎಸ್‌.ರಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಫಿಟೆ°ಸ್‌ಗಾಗಿ ಕೇರಳಕ್ಕೆ ಹೋಗ್ತೀನೆ:
ಈ ಚುನಾವಣೆ ಮುಗಿದ ನಂತರ ಫಿಟೆ°ಸ್‌ಗಾಗಿ ಒಂದು ತಿಂಗಳು ಕೇರಳಕ್ಕೆ ಹೋಗಿ ಆಯುರ್ವೇದ ಚಿಕಿತ್ಸೆ ಪಡೆಯುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಈ ಚುನಾವಣೆಗಾಗಿ ಇನ್ನೂ ಹದಿನೈದು ದಿನ ರಾಜ್ಯ ಸುತ್ತುತ್ತೇನೆ. ಆ ಮೇಲೆ ಒಂದು ತಿಂಗಳು ಕೇರಳಕ್ಕೆ ಹೋಗುತ್ತೇನೆ. ಸದಾ ಹೋರಾಟ ಮಾಡುವುದು ನನ್ನ ಹುಟ್ಟುಗುಣ, 15 ಚುನಾವಣೆಗಳನ್ನು ನೋಡಿದ್ದೇನೆ. ಐಷಾರಾಮಿ ಜೀವನ ಮಾಡುವುದಿಲ್ಲ. ಹೋರಾಟವೇ ನನ್ನ ಬದುಕು. ಎಂದಿಗೂ ಸೋಲು ಒಪ್ಪಿಕೊಳ್ಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next