ಅಹ್ಮದಾಬಾದ್: ಗುಜರಾತ್ ಟೈಟಾನ್ಸ್ ತನ್ನ ಚಾಂಪಿಯನ್ನರ ಆಟವನ್ನು ಮುಂದುವರಿಸಿದ್ದು, ಭಾನುವಾರ ತವರಿನಂಗಳದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧವೂ ಪರಾಕ್ರಮ ಮೆರೆಯುವ ಉಮೇದಿನಲ್ಲಿದೆ. ಗೆದ್ದರೆ ಹ್ಯಾಟ್ರಿಕ್ ಸಾಧಿಸಿದಂತಾಗುತ್ತದೆ.
ಇನ್ನೊಂದೆಡೆ ಕೆಕೆಆರ್ ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಆರ್‌ಸಿಬಿಗೆ ಬಲವಾದ ಏಟು ನೀಡಿ ಬಂದಿದೆ. ಇದೇ ಲಯವನ್ನು ಮುಂದುವರಿಸಿದರೆ ಅಹ್ಮದಾಬಾದ್ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.
ಇಲ್ಲೇ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ 5 ವಿಕೆಟ್‌ಗಳಿಂದ ಚೆನ್ನೈಯನ್ನು ಮಣಿಸಿತ್ತು. ಬಳಿಕ ಡೆಲ್ಲಿ ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು. ಎರಡೂ ಚೇಸಿಂಗ್ ಪಂದ್ಯಗಳಾಗಿದ್ದವು. ಚೆನ್ನೈ ವಿರುದ್ಧ ಆರಂಭಿಕರಾದ ಶುಭಮನ್ ಗಿಲ್(63), ವೃದ್ಧಿಮಾನ್ ಸಾಹಾ(25) ಬಿರುಸಿನ ಆರಂಭ ಒದಗಿಸಿದ್ದರು. ಡೆಲ್ಲಿ ಎದುರು ಇವರಿಬ್ಬರೂ 14 ರನ್ ಮಾಡಿ ವಾಪಸಾದಾಗ ಸಾಯಿ ಸುದರ್ಶನ್(62) ನೆರವಿಗೆ ನಿಂತಿದ್ದರು. ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಅವರ ಬ್ಯಾಟಿಂಗ್ ಕೂಡ ಭರವಸೆಯಿಂದ ಕೂಡಿತ್ತು.
ಬಿಗ್ ಹಿಟ್ಟರ್ ರಾಹುಲ್ ತೆವಾಟಿಯಾ ಅವರಿಗೆ ಒಂದು ಪಂದ್ಯದಲ್ಲಷ್ಟೇ ಬ್ಯಾಟಿಂಗ್ ಅವಕಾಶ ಸಿಕ್ಕಿತ್ತು. ಚೆನ್ನೈ ವಿರುದ್ಧ ಗೆಲುವು ಸಾರುವ ವೇಳೆ ತೆವಾಟಿಯಾ ಅವರೇ ಕ್ರೀಸ್‌ನಲ್ಲಿದ್ದರು(ಅಜೇಯ 15). ವೈಫಲ್ಯ ಅನುಭವಿಸಿದ್ದು ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ. ಎರಡೂ ಪಂದ್ಯಗಳಲ್ಲಿ ಇವರ ಗಳಿಕೆ ಬರೀ 8 ರನ್ ಆಗಿತ್ತು.
ಮೊಹಮ್ಮದ್ ಶಮಿ, ರಶೀದ್ ಖಾನ್, ಅಲ್ಜಾರಿ ಜೋಸೆಫ್ ಗುಜರಾತ್ ಟೈಟಾನ್ಸ್‌ನ ಬೌಲಿಂಗ್ ಹೀರೋಗಳು.
ಕೆಕೆಆರ್ ಅಮೋಘ ಚೇತರಿಕೆ:
ಪಂಜಾಬ್ ಎದುರಿನ 7 ರನ್ನುಗಳ ಮಳೆ ಸೋಲಿನ ಬಳಿಕ ಅಮೋಘ ಚೇತರಿಕೆ ಕಂಡ ತಂಡ ಕೆಕೆಆರ್. ತವರಿನ ಈಡನ್ ಅಂಗಳದಲ್ಲಿ ಅದು ಆರ್‌ಸಿಬಿಗೆ ಎದ್ದೇಳಲಾಗದಂಥ ಹೊಡೆತವಿಕ್ಕಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಪರಿಪೂರ್ಣ ಸಾಮರ್ಥ್ಯ ತೋರಿದ ಹಿರಿಮೆ ನಿತೀಶ್ ರಾಣಾ ಪಡೆಯದ್ದಾಗಿತ್ತು. 12ನೇ ಓವರ್‌ನಲ್ಲಿ 89ಕ್ಕೆ 5 ವಿಕೆಟ್ ಉದುರಿಸಿಕೊಂಡಿದ್ದ ಕೆಕೆಆರ್, ಇನ್ನೂರರ ಗಡಿ ದಾಟಿದ್ದನ್ನು ಮರೆಯುವಂತಿಲ್ಲ. ರಿಂಕು ಸಿಂಗ್, ಶಾರ್ದೂ ಲ್ ಠಾಕೂರ್ ಸೇರಿಕೊಂಡು ಬೆಂಗಳೂರು ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು.
ಕೆಕೆಆರ್ ಬೌಲಿಂಗ್ ಅತ್ಯಂತ ಘಾತಕವಾಗಿತ್ತು. ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಹೊಸಬ ಸುಯಶ್ ಶರ್ಮ ಭರ್ಜರಿ ಯಶಸ್ಸು ತಂದಿತ್ತಿದ್ದರು. ಇದೆಲ್ಲವೂ ಗುಜರಾತ್ ಪಾಲಿಗೆ ಎಚ್ಚರಿಕೆಯ ಗಂಟೆ.