ದೇವನಹಳ್ಳಿ: ಜಿಲ್ಲಾದ್ಯಂತ ಈ ಬಾರಿ ರಾಗಿ ಬೆಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ಆದರೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಫಸಲು ಕಟಾವಿಗೆ ಸಂಕಷ್ಟ ತಂದೊಡ್ಡಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಫಸಲು ನಷ್ಟ: ತೇವಾಂಶಕ್ಕೆ ರಾಗಿ ತೆನೆಗಳು ನೆಲಕ್ಕೆ ಬಾಗಿದ್ದು ರಾಗಿ ಮೊಳಕೆ ಬರಲು ಕಾರಣವಾಗುತ್ತಿದೆ. ರಾಗಿ ಸೇರಿ ಇತರೆ ಬೆಳೆಗಳು ಚೆನ್ನಾಗಿ ಬಂದಿದ್ದು, ಬಹುತೇಕ ರೈತರು ಮಳೆಯಾಶ್ರಿತ ಭೂಮಿಯಲ್ಲಿ ರಾಗಿ ನಾಟಿ ಮಾಡಿದ್ದರು. ಆದರೆ ಸತತ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸತತ ಮಳೆಯಿಂದಾಗಿ ರಾಗಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಕಟಾವಿನ ಸಂದರ್ಭದಲ್ಲಿ ಮಳೆಯಾಗುತ್ತಿದ್ದು ಇದರಿಂದ ರಾಗಿ ತೆನೆಯಲ್ಲಿಯೇ ಮೊಳಕೆಯಾಗುವ ಭೀತಿ ಉಂಟಾಗಿದೆ. ಜಿಲ್ಲೆಯಲ್ಲಿ ನೀರಾವರಿಗಿಂತ ಮಳೆಯಾಶ್ರಿತ ಪ್ರದೇಶದ ಭೂಮಿಯೇ ಹೆಚ್ಚಾಗಿದ್ದು ಪ್ರತಿ ವರ್ಷ ಈ ಮಳೆಯಾಶ್ರಿತ ಭೂಮಿಯಲ್ಲಿ ಬೇರೆಲ್ಲ ಬೆಳೆಗಿಂತ ರಾಗಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿದೆ.
ರಾಗಿ ಬೆಳೆ ನಷ್ಟ:ಜಿಲ್ಲೆಯಲ್ಲಿ ಇದೇ ರೀತಿ ಮಳೆಯ ವಾತಾವರಣ ವಿದ್ದರೆ ರಾಗಿ ಬೆಳೆಗೆ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆಯಿದೆ. ಶೇ.50ಕ್ಕೂ ಹೆಚ್ಚು ಪ್ರಮಾಣದಲ್ಲಿ ಈಗಾಗಲೇ ರಾಗಿ ಫಸಲು ಕೈಗೆ ಬರುವಂತಾಗಿದ್ದು, ಇನ್ನೂ ಶೇ.50 ಫಸಲು ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿ ಸತತ ಮಳೆಯಾದರೆ ರಾಗಿ ಫಸಲು ನಷ್ಟಕ್ಕೆ ಒಳಗಾಗಲಿದೆ. 4 ತಾಲೂಕುಗಳ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ರಾಗಿ ಬೆಳೆ ಬಿತ್ತನೆ ಮಾಡಲಾಗಿದೆ.
ಇದನ್ನೂ ಓದಿ:- ಹಿಂದುತ್ವದ ಮೇಲೆ ದಾಳಿ; ತರೂರ್, ಅಯ್ಯರ್, ದಿಗ್ವಿಜಯ್ ಗೆ ರಾಹುಲ್ ಗಾಂಧಿಯೇ ಗುರು!
“ಉತ್ತಮವಾಗಿ ರಾಗಿ ಫಸಲು ಬರುವ ವೇಳೆಗೆ ಸತತ ಮಳೆಯಿಂದಾಗಿ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಗಿ ಕಟಾವಿಗೆ ಸಿದ್ಧವಾಗಿದೆ. ಮಳೆ ನಿಲ್ಲದಿದ್ದರೆ ತೆನೆ ಮೊಳಕೆಯೊಡೆಯುವ ಸಾಧ್ಯತೆಯಿದೆ
.” – ವಿಜಯಕುಮಾರ್, ರೈತ
“ಪ್ರತಿರೈತರು ಕಡ್ಡಾಯವಾಗಿ ಬೆಳೆವಿಮೆ ಪಡೆಯುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ತೇವಾಂಶದಿಂದ ಬೆಳೆ ನಷ್ಟವಾಗುವ ಸಾಧ್ಯತೆ ಕಡಿಮೆ. ದೊಡ್ಡ ಮಟ್ಟದಲ್ಲಿ ಬೆಳೆ ನಷ್ಟವಾದರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.”
– ಜಯಸ್ವಾಮಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರು
ಕೊಯಿಗೆ ಬಂದಿದ್ದ ರಾಗಿ ಬೆಳೆ ನೆಲಕ್ಕುರುಳಿತು-
ದೊಡ್ಡಬಳ್ಳಾಪುರ: ಹವಾಮಾನ ವೈಪರೀತ್ಯ, ವಾಯು ಭಾರ ಕುಸಿತ ದಿಂದ ತಾಲೂಕಿನಲ್ಲೂ ಶುಕ್ರ ವಾರವೂ ಮಳೆ ಹಾಗೂ ಶೀತ ಗಾಳಿ ಮುಂದುವರಿದು ಜನಜೀವನ ಅಸ್ತವ್ಯಸ್ಥವಾಗಿರುವ ಜತೆಗೆ ರಾಗಿ ಬೆಳೆ ನೆಲ ಕಚ್ಚುತ್ತಿವೆ. ಮೂರು ದಿನಗಳಿಂದಲೂ ತುಂತುರು ಮಳೆ ಬೀಳುತ್ತಲೇ ಇದ್ದು ಶೀತ ಗಾಳಿ ಬೀಸುತ್ತಿದೆ. ಹೀಗಾಗಿ ಕೊಯ್ಲಿಗೆ ಬಂದಿದ್ದ ರಾಗಿ ಸಂಪೂ ರ್ಣ ವಾಗಿ ನೆಲಕ್ಕೆ ಉರುಳಿ ಬಿದ್ದಿದೆ.
ಸತತ ಮಳೆ ಬೀಳುತ್ತಿರುವುದರಿಂದ ರಾಗಿ ತೆನೆ ಮೊಳಕೆಯೊಡಯಲು ಪ್ರಾರಂಭವಾಗಿವೆ. ಇನ್ನು ಎರಡು ಅಥವಾ ಅದಕ್ಕಿಂತಲು ಹೆಚ್ಚು ದಿನ ಮಳೆ ಮುಂದುವರಿದರೆ ರಾಗಿ ಬೆಳೆ ರೈತರ ಕೈತಪ್ಪಲಿದೆ. ಹುಲ್ಲು ಸಹ ದೊರೆಯದಾಗಲಿದೆ ಎಂದು ಆಲಹಳ್ಳಿ ಗ್ರಾಮದ ರೈತ ಚಂದ್ರಶೇಖರ್ ಅಳಲು ತೋಡಿಕೊಂಡಿದ್ದಾರೆ. ಐದಾರು ವರ್ಷಗಳಿಂದ ರಾಗಿ ಕೊಯ್ಲಿಗೆ ಯಂತ್ರಗಳನ್ನೇ ಅವಲಂಭಿಸಿರುವುದರಿಂದ ಮಳೆ, ಗಾಳಿಗೆ ರಾಗಿ ಹೊಲಗಳು ಸಂಪೂರ್ಣವಾಗಿ ಮಲಗಿವೆ. ಹೀಗಾಗಿ ಯಂತ್ರಗಳ ಮೂಲಕ ಕೊಯ್ಲು ಮಾಡುವುದು ಕಷ್ಟವಾಗಿದೆ.
ಯಂತ್ರಗಳನ್ನು ಬಳಸಿದರೆ ಅರ್ಧ ಭಾಗದ ಬೆಳೆ ಸಹ ಕೈಗೆ ಬರುವ ನಂಬಿಕೆ ಇಲ್ಲ ಎನ್ನುತ್ತಾರೆ ರೈತರು. ತಾಲೂಕಿನಲ್ಲಿ ಶೀತಗಾಳಿ ಹೆಚ್ಚಾಗಿದ್ದರಿಂದ ಬೆಚ್ಚಿ ಬಿದ್ದಿರುವ ಪೋಷಕರು ಶಾಲೆಗಳಿಗೆ ಶುಕ್ರವಾರ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಯಾಗಿತ್ತು. ನಗರದ ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿರಳವಾಗಿತ್ತು. ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿತವಾಗಿತ್ತು.