ಚಿಕ್ಕಮಗಳೂರು: ಜಿ.ಟಿ. ದೇವೇಗೌಡ ಜೆಡಿಎಸ್ ಪಕ್ಷದ ಶಕ್ತಿ. ಅವರು ಪಕ್ಷ ತೊರೆದು ಕಾಂಗ್ರೆಸ್‌ಗೆ ಹೋದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಿ.ಟಿ. ದೇವೇಗೌಡರಿಗೆ ಪಕ್ಷ ಸೂಕ್ತ ಆದ್ಯತೆ, ಗೌರವ ನೀಡಿಲ್ಲ ಎಂದರೆ ಅದು ತಪ್ಪು. ಹಿರಿಯರು ಮತ್ತು ಸಂಘಟನಾ ಶಕ್ತಿಯಾಗಿರುವ ಅವರು ಜನತಾ ಪರಿವಾರದಿಂದ ಬಂದಿದ್ದು, ಅವರ ಮನಸ್ಸಿಗೆ ನೋವಾಗಿರಬಹುದು. ಅವರನ್ನು ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದ್ದರಿಂದ ಅವರ ಮನಸ್ಸಿಗೆ ನೋವಾಗಿರಬಹುದು. ಬೇರೆ ಪಕ್ಷಕ್ಕೆ ಜಿ.ಟಿ. ದೇವೇಗೌಡರನ್ನು ಹೋಗಲು ಬಿಡಬಾರದು.
ಹಿರಿಯರಾದ ಎಚ್.ಡಿ. ದೇವೇಗೌಡರು ಅವರನ್ನು ಕರೆಸಿ ಮಾತನಾಡಬೇಕು. ಅವರ ಮನಸ್ಸಿನ ಭಾವನೆ ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಮೂಲ ಜನತಾ ಪರಿವಾರದಿಂದ ಬಂದ ಅವರನ್ನು ಜೆಡಿಎಸ್ ಪಕ್ಷದಲ್ಲೇ ಉಳಿಸಿಕೊಳ್ಳುತ್ತಾರೆಂಬ ನಂಬಿಕೆ ಇದೆ. ಜೆಡಿಎಸ್ ಬಿಜೆಪಿಗೆ ಹತ್ತಿರವಾದರೆ ನಮ್ಮಂತಹವರಿಗೆ ಕಷ್ಟವಾಗಲಿದೆ. ಅಲ್ಪಸಂಖ್ಯಾತರ ಒಡನಾಟ ಹೊಂದಿ ಅವರನ್ನೇ ನೆಚ್ಚಿಕೊಂಡಿರುವ ನಮ್ಮಂಥವರಿಗೆ ತುಂಬಾ ಕಷ್ಟವಾಗುತ್ತದೆ ಎಂದರು.
ಇದನ್ನೂ ಓದಿ:
ಬಾಲಿವುಡ್ ಡ್ರಗ್ಸ್ ಪ್ರಕರಣ : ನಟ ಅರ್ಮಾನ್‍ಗೆ 14 ದಿನ ನ್ಯಾಯಾಂಗ ಬಂಧನ
ನಾವು ಕೋಮುವಾದಿ ಶಕ್ತಿಗಳನ್ನು ವಿರೋಧಿಸಿ, ಜಾತ್ಯತೀತ ನಿಲುವಿಗೆ ಕಟ್ಟಿಬದ್ಧರಾಗಿರುವವರು. ಪಕ್ಷದ ನಿಲುವು ಎಲ್ಲಿವರೆಗೂ ಸ್ಪಷ್ಟವಾಗಿರುತ್ತದೋ ಅಲ್ಲಿಯವರೆಗೂ ಬೇರೆ ಆಲೋಚನೆ ಇಲ್ಲ. ಪಕ್ಷ ಸಾಮಾಜಿಕ ನ್ಯಾಯ, ಜಾತ್ಯತೀತಕ್ಕೆ ಬದ್ಧವಾಗಿರುತ್ತೋ ಅಲ್ಲಿಯವರೆಗೂ ನನ್ನ ಜೆಡಿಎಸ್ ನಿಲುವಲ್ಲಿ ಬದಲಾವಣೆ ಇಲ್ಲ ಎಂದರು.