ಬೆಂಗಳೂರು: ಮೈಸೂರು- ಕೊಡಗು ಕ್ಷೇತ್ರದಲ್ಲಿ ಕೆಲವೆಡೆ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿಸಿದ್ದಾರೆ ಎಂಬುದಾಗಿ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆ ನಿಜ. ಮೈಸೂರು- ಕೊಡಗು ಕ್ಷೇತ್ರ ಮಾತ್ರವಲ್ಲದೆ, ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ಬಹಿರಂಗವಾಗಿ ಜಿ.ಟಿ.ದೇವೇಗೌಡ ಅವರು ಹೇಳುವ ಮೂಲಕ ತಮ್ಮ ಸೋಲನ್ನೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂರಿಂದಲೂ ಸಹಾಯ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಜಿ.ಟಿ.ದೇವೇಗೌಡ ಅವರು ಸತ್ಯವನ್ನೇ ಹೇಳಿದ್ದಾರೆ. ಈ ಬಾರಿ ಜಾತಿ, ಪಕ್ಷ, ಹಣ ಮೀರಿ ಚುನಾವಣೆ ನಡೆದಿದೆ. ಜನರಿಂದ ಮೋದಿ, ಮೋದಿ ಎಂಬ ಉದ್ಘಾರ ಕೇಳಿ ಬರುತ್ತಿತ್ತು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಇತರೆಡೆಯೂ ಪ್ರಧಾನಿ ಮೋದಿ ಹೆಸರು ಕೇಳಿ ಬರುತ್ತಿತ್ತು.
ಮಂಡ್ಯದಲ್ಲೂ ಕಾಂಗ್ರೆಸ್‌ನವರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ತುಮಕೂರು ಕ್ಷೇತ್ರದಲ್ಲೂ ಕೆಲವರು ಆಂತರಿಕವಾಗಿ, ಕೆಲವರು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಸಚಿವರು ಮಾತ್ರವಲ್ಲದೇ, ಮಾಜಿ ಮುಖ್ಯಮಂತ್ರಿಗಳು ಕೂಡ ಕೆಲವೆಡೆ ಸಹಾಯ ಮಾಡಿದ್ದಾರೆ. ನಮಗೆ ಸಣ್ಣ ರಾಜಕೀಯ ಗೊತ್ತಿಲ್ಲ. ಮೋದಿಯವರನ್ನು ಪ್ರಧಾನಿ ಮಾಡಲು ಅವರೆಲ್ಲಾ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ದೊಡ್ಡ ಅಂತರದ ಗೆಲುವಿನ ವಿಶ್ವಾಸ: ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಮೈಸೂರು- ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಿಜೆಪಿ ಬೆಂಬಲಿಸಿದ್ದು, ಕಳೆದ ಬಾರಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲಲಿದ್ದೇನೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಬೇರೆ, ಬೇರೆ ವಿಷಯಗಳ ಆಧಾರದಲ್ಲಿ ನಡೆಯುತ್ತವೆ ಎಂದರು.
ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ, ಸಚಿವ. ನನಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದು. ಬೇರೆಯವರ ವಿಚಾರಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಮೈತ್ರಿ ಧರ್ಮ ಪಾಲಿಸಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ ಪಾಲಿಸಿದ್ದಾರೆ.
-ಡಿ.ಕೆ.ಶಿವಕುಮಾರ್, ಸಚಿವ