ಹೈದರಾಬಾದ್: ಇನ್ನು ಮುಂದೆ ಇಡ್ಲಿ, ದೋಸೆ ಹಿಟ್ಟು ದರ ಹೆಚ್ಚಾಗಲಿದೆ ಎಂಬ ಆತಂಕ ಬೇಡ. ಜತೆಗೆ ಸಣ್ಣ ಕಾರುಗಳ ದರ ಕೂಡ. ಏಕೆಂದರೆ, ಜಿಎಸ್‌ಟಿ ವಿಚಾರದಲ್ಲಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.
ಹೈದರಾಬಾದ್‌ನಲ್ಲಿ ಜೇಟ್ಲಿ ನೇತೃತ್ವ ದಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಹುರಿದ ಬೇಳೆ, ಇಡ್ಲಿ, ದೋಸೆ ಹಿಟ್ಟು, ರೈನ್‌ಕೋಟ್, ರಬ್ಬರ್ ಬ್ಯಾಂಡ್ ಸಹಿತ 30 ವಸ್ತುಗಳ ಜಿಎಸ್‌ಟಿ ದರವನ್ನು ಇಳಿಕೆ ಮಾಡಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮಾರಾಟ ಮಾಡುವ ಖಾದಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಅಷ್ಟೇ ಅಲ್ಲ, ಜಿಎಸ್‌ಟಿ ಆರ್ ಫೈಲ್ ಮಾಡುವ ದಿನಾಂಕವನ್ನು ಮುಂದಿನ ತಿಂಗಳ (ಅಕ್ಟೋಬರ್ 31)ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸೆ. 10ರ ಗಡುವು ವಿಧಿಸಲಾಗಿತ್ತು. ಸಭೆ ಬಳಿಕ ಮಾತನಾಡಿದ ಸಚಿವ ಜೇಟ್ಲಿ, “ಜು. 1ರಿಂದ ಜಿಎಸ್‌ಟಿ ಜಾರಿಯಾದ ಬಳಿಕ ಇದುವರೆಗೆ ತೆರಿಗೆ ಸಂಗ್ರಹ ಉತ್ತಮವಾಗಿದೆ. ಶೇ. 70ರಷ್ಟು ಅರ್ಹ ತೆರಿಗೆದಾರರಿದ್ದು, ಅವರು 95 ಸಾವಿರ ಕೋಟಿ ರೂ.ಗಳ ರಿಟರ್ನ್ಸ್ ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದಾರೆ.
20 ಲಕ್ಷ ರೂ. ವಹಿವಾಟು ಇರುವ ಕುಶಲಕರ್ಮಿಗಳಿಗಿಲ್ಲ ಜಿಎಸ್‌ಟಿ: ಜಾನಪದ ಮತ್ತು ಕುಶಲಕರ್ಮಿಗಳಿಗೆ ಸಂತಸ ತರುವ ವಿಚಾರವೂ ಮಂಡಳಿ ಯಿಂದ ಹೊರಬಿದ್ದಿದೆ. ವಾರ್ಷಿಕ 20 ಲಕ್ಷ ರೂ. ವಹಿವಾಟು ಇರುವವರನ್ನು ಹೊಸ ತೆರಿಗೆಯಿಂದ ಹೊರ ಗಿಡಲಾಗಿದೆ. ಅಂತಾರಾಜ್ಯ ಮಟ್ಟ ದಲ್ಲಿನ ಕೆಲಸಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಕೂಡ ಇಲ್ಲವೆಂದು ಹೇಳಿದೆ. ಸರಕಾರಿ ಕೆಲಸಗಳಿಗೆ ವಿಧಿಸಲಾಗಿರುವ ತೆರಿಗೆ ಪ್ರಮಾಣವನ್ನು ಶೇ. 18ರಿಂದ ಶೇ. 12ಕ್ಕೆ ಇಳಿಸಲಾಗಿದೆ. ಜಿಎಸ್‌ಟಿ ನೆಟ್‌ವರ್ಕ್‌ನ ತಾಂತ್ರಿಕ ವಿಚಾರಗಳನ್ನು ಪರಿಶೀಲಿಸಲು ಸಚಿವರ ಮಟ್ಟದ ಸಮಿತಿ ರಚಿಸಲಾಗಿದೆ. ಈ ಮೂಲಕ ಸದ್ಯ ಇರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗು ತ್ತದೆ ಎಂದಿದ್ದಾರೆ ಪಶ್ಚಿಮ ಬಂಗಾಲ ಹಣಕಾಸು ಸಚಿವ ಅಮಿತ್ ಮಿತ್ರಾ.