Advertisement

ಜಿಎಸ್‌ಟಿ, ಎಫ್ ಟಿಪಿ: ನಿರ್ಮಲಾ ಆಶಾವಾದ

03:45 AM Jan 13, 2017 | Team Udayavani |

ಉಡುಪಿ: ಗೂಡ್ಸ್‌ ಆ್ಯಂಡ್‌ ಸರ್ವಿಸಸ್‌ ಟ್ಯಾಕ್ಸ್‌ (ಜಿಎಸ್‌ಟಿ) ಕಾಯಿದೆ ಎ. 1ರಿಂದ ಜಾರಿಗೊಳಿಸಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌, ಸೆಪ್ಟಂಬರ್‌ನಲ್ಲಿ ವಿದೇಶಾಂಗ ವ್ಯಾಪಾರ ನೀತಿ (ಎಫ್ಟಿಪಿ) ಪ್ರಕಟಿಸುವ ಸಾಧ್ಯತೆ ಇದೆ ಎಂದಿದ್ದಾರೆ. 

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಎಸ್‌ಟಿ ಕುರಿತು ವಿತ್ತ ಸಚಿವರು ಮುಖ್ಯಸ್ಥರಾಗಿ ಅದರ ಎಲ್ಲ ಮಗ್ಗುಲುಗಳನ್ನು ಚರ್ಚಿಸುತ್ತಿದ್ದಾರೆ. ಇದನ್ನು ರಾಜಕೀಯೇತರವಾಗಿ ಸ್ವೀಕರಿಸುವ ಆಶಾವಾದವಿದೆ. ಪ್ರಾಯಃ 2017 ಎಪ್ರಿಲ್‌ನಿಂದ ಜಾರಿಗೊಳಿಸುವ ಸಾಧ್ಯತೆ ಇದೆ ಎಂದರು.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ ರಷ್ಯಾ, ಚೀನದೊಂದಿಗೆ ರಫ್ತು ನೀತಿ ಬಲಪಡಿಸುವ ಇರಾದೆ ವ್ಯಕ್ತಪಡಿಸಿದ್ದಾರಲ್ಲವೆ ಎಂದು ಪ್ರಶ್ನಿಸಿದಾಗ, ಅಮೆರಿಕ ಮತ್ತು ಭಾರತದ ಸಂಬಂಧ ಒಬಾಮಾ ಕಾಲದಿಂದಲೂ ಉತ್ತಮವಾಗಿದೆ. ಅದನ್ನು ಮತ್ತಷ್ಟು ಬಲಪಡಿಸಲಾಗುವುದು. ಸ್ಥಳೀಯತೆ ಬಲಪಡಿಸುವ ನೀತಿ ಎಲ್ಲ ದೇಶಗಳಲ್ಲಿಯೂ ಇದೆ. ಅದರಂತೆ ಅಮೆರಿಕದಲ್ಲಿಯೂ ಇದೆ. ನಮ್ಮಲ್ಲಿಯೂ “ಮೇಕ್‌ ಇಂಡಿಯ’ ನೀತಿಗೆ ಒತ್ತು ಕೊಡುತ್ತಿದ್ದೇವೆ. ನಮ್ಮ ವಿದೇಶಾಂಗ ವ್ಯಾಪಾರ ನೀತಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೆಪ್ಟಂಬರ್‌ನಲ್ಲಿ ಪ್ರಕಟಿಸುತ್ತೇವೆ ಎಂದರು.
 
ಅಪ ನಗದೀಕರಣದಿಂದ ಉಂಟಾದ ಸಮಸ್ಯೆ ಕಡಿಮೆಯಾಗುತ್ತಿದೆ. ಎಲ್ಲ ಬ್ಯಾಂಕ್‌ಗಳು, ಎಟಿಎಂಗಳಲ್ಲಿ ಹೊಸ ನೋಟುಗಳು ಸಿಗುತ್ತಿವೆ ಎಂದು ಸಚಿವೆ ತಿಳಿಸಿದರು. ಜಲ್ಲಿಕಟ್ಟುವಿಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತೀರ್ಪು ಏನು ಬರುತ್ತದೋ ಕಾದುನೋಡೋಣ ಎಂದರು. 

ಶ್ರೀಕೃಷ್ಣ ಮಠದ ಯೋಜನೆ ಸಲ್ಲಿಸಲು ಕೋರಿಕೆ
ಶ್ರೀಕೃಷ್ಣ ಮಠಕ್ಕೆ ಅಗತ್ಯದ ಬೇಡಿಕೆ ಕುರಿತು ಯೋಜನೆ ಸಲ್ಲಿಸಲು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದರು.

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಅವರು ಪರ್ಯಾಯ ಶ್ರೀ ಪೇಜಾವರ ಮಠಾಧೀಶರೊಂದಿಗೆ ಮಠದ ಅಭಿವೃದ್ಧಿ ಕುರಿತು ಚರ್ಚಿಸಿದರು. ಮುಖ್ಯವಾಗಿ ನೀರು, ಶೌಚಾಲಯ, ಘನತ್ಯಾಜ್ಯ ನಿರ್ವಹಣೆ ಘಟಕದ (ಎಸ್‌ಟಿಪಿ) ಅಗತ್ಯವಿದೆ ಎಂಬ ವಿಷಯ ಪ್ರಸ್ತಾವವಾದಾಗ ಜೈವಿಕ ಶೌಚಾಲಯ ನಿರ್ಮಿಸಲು ವಿಸ್ತೃತ ಯೋಜನೆ ಸಲ್ಲಿಸಲು ತಿಳಿಸಿದರು. ಎಸ್‌ಟಿಪಿಗೆ ಜಾಗ ಇತ್ಯಾದಿಗಳಿದ್ದರೆ ಅದರ ಕುರಿತೂ ವರದಿ ಸಲ್ಲಿಸಲು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next