Advertisement

ಜಿಎಸ್‌ಟಿ ಹೆಸರಲ್ಲಿ ಸುಲಿಗೆ ತಡೆಗೆ ನಿಗಾ

04:00 AM Jul 09, 2017 | Harsha Rao |

ಹೊಸದಿಲ್ಲಿ / ಬೆಂಗಳೂರು: ಕೇಂದ್ರ ಸರಕಾರ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಡಿಯಲ್ಲಿ ಪ್ರಕಟ ಮಾಡಿ ರುವ ರಿಯಾಯಿತಿಗಳನ್ನು ಗ್ರಾಹಕರಿಗೆ ವರ್ಗಾಯಿಸದೆ ಇರುವ, ಟ್ಯಾಕ್ಸ್‌ ಹೆಸರಿನಲ್ಲಿ ದುಬಾರಿ ಹಣ ಸುಲಿಗೆ ಮಾಡುವ ಮಳಿಗೆ, ಹೊಟೇಲ್‌, ಮಾಲ್‌ಗ‌ಳಿಗೆ ಎಚ್ಚರ !

Advertisement

ಜಿಎಸ್‌ಟಿ ನೆಪದಲ್ಲಿ ದಂಧೆಗಿಳಿದಿರುವವರ ವಿರುದ್ಧ ಕಠಿನ ಕ್ರಮಕ್ಕೆ ಕೇಂದ್ರ ನಿರ್ಧ ರಿಸಿದೆ. ಅದಕ್ಕಾಗಿ 200 ಮಂದಿ ಐಎಎಸ್‌, ಐಆರ್‌ಎಸ್‌ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅವರು ಪ್ರಮುಖ ನಗರ, ಪಟ್ಟಣಗಳಿಗೆ ಭೇಟಿ ನೀಡಲಿದ್ದು, ಸರಕಾರ ನಿಗದಿ ಮಾಡಿದ ದರವನ್ನು ಮಳಿಗೆಗಳಲ್ಲಿ ಅನುಸರಿಸಲಾಗುತ್ತದೆಯೋ ಇಲ್ಲವೋ ಎನ್ನು
ವುದನ್ನು ಪರಿಶೀಲಿಸಲಿದ್ದಾರೆ. ಹಿರಿಯ ಅಧಿಕಾರಿಗಳು ಮಾರುಕಟ್ಟೆಗಳಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾದ ವಸ್ತುಗಳ ಕೊರತೆ ಇದೆಯೋ? ಇಲ್ಲವೋ? ಎಂಬ ಬಗ್ಗೆ ಖಚಿತ ಮಾಡಿಕೊಳ್ಳಲಿದ್ದಾರೆ.

ಜಂಟಿ ಕಾರ್ಯದರ್ಶಿ ಹಂತದ 200 ಅಧಿ ಕಾರಿಗಳ ತಂಡದಲ್ಲಿ ಕರ್ನಾಟಕ ಶ್ರೇಣಿಯ ಶ್ರೀನಿವಾಸ್‌, ವಂದನಾ ಗುರ್ನಾನಿ, ಬಿ.ಎಚ್‌.ಅನಿಲ್‌ಕುಮಾರ್‌ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದ ವಸ್ತುಸ್ಥಿತಿ ಕುರಿತು ಆಯಾ ದಿನದ ಮಾಹಿತಿ ಪಡೆದು ಕೇಂದ್ರ ಸರಕಾರಕ್ಕೆ ರವಾನೆ ಮಾಡುತ್ತಾರೆ. ಜಿಎಸ್‌ಟಿ ಅನುಷ್ಠಾನದಲ್ಲಿ ಎದುರಾಗುವ ಸವಾಲು, ವ್ಯಾಪಾರಿಗಳು, ಉದ್ದಿಮೆದಾರರಲ್ಲಿರುವ ಗೊಂದಲ, ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಅವರು ಎದುರಿಸುತ್ತಿರುವ ಪರಿಣಾಮ ಇವೆಲ್ಲದರ ಬಗ್ಗೆಯೂ ಅಧ್ಯಯನವನ್ನೂ  ಈ ಮೂವರು ಮಾಡಲಿದ್ದಾರೆ.

ದೇಶಾದ್ಯಂತ ಈ ತಂಡ ಭೇಟಿ ನೀಡಲಿದೆ. “ಸರಕಾರ ಹೊಸ ತೆರಿಗೆ ವ್ಯವಸ್ಥೆ ಅಡಿ ಜಾರಿಗೆ ತಂದಿರುವ ರಿಯಾಯಿತಿಗಳು ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿತ್ತಿದ್ದಾರೆ. ಹೀಗಾಗಿ ಅವುಗಳನ್ನು ಗಂಭೀರವಾಗಿಯೇ ಪರಿಗಣಿಸಲಾಗಿದೆ’ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಪ್ರಕಾರ ಕೆಲವು ವರ್ತಕರು ತಮ್ಮ ಮಳಿಗೆಗಳಲ್ಲಿ ಬಿಲ್‌ ನೀಡುತ್ತಿಲ್ಲ. ವಸ್ತುಗಳನ್ನು ಒಂದು ತಿಂಗಳ ಹಿಂದೆಯೇ ಮಾರಾಟ ಮಾಡಿದಂತೆ ಬಿಲ್‌ ಸೃಷ್ಟಿಸುವುದು ಸಹಿತ ಹಲವು ವಂಚನೆ ನಡೆಸುತ್ತಿದ್ದಾರೆ ಎಂಬ ಅಂಶ ಪತ್ತೆ ಯಾಗಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ನಾಲ್ಕು ದಿನಗಳಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.

Advertisement

ಹಣಕಾಸು  ಕ್ಷೇತ್ರದ ತಜ್ಞರು ಹೇಳುವ ಪ್ರಕಾರ ಇಂಥ ಕಠಿನ ಕ್ರಮಗಳನ್ನು ಅನು ಸರಿಸಲು ವಾಸ್ತವವಾಗಿ ಕಷ್ಟ. ಏಕೆಂದರೆ ಕಂಪೆನಿಗಳು ಮತ್ತು ಚಿಲ್ಲರೆ ಮಾರಾಟಗಾರರು ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ತಪಾಸಣೆ
ಬೆಂಗಳೂರು: ಜಿಎಸ್‌ಟಿ ವ್ಯವಸ್ಥೆಯನ್ನು ಸಮರ್ಪಕ ಜಾರಿಗೆ  ತರಲು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಿಲ್ಲಾ ಮಟ್ಟದಲ್ಲಿ ತಪಾಸಣೆ  ಆರಂಭಿಸಿದೆ.

ಜಿಲ್ಲಾ ಮಟ್ಟದ ಸ್ಥಳೀಯ ಜಿಎಸ್‌ಟಿ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ ಆರಂಭಿಸಲಾಗಿದ್ದು, ಸಹಾ ಯಕ ಆಯುಕ್ತರು, ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡ ತಮ್ಮ ಸುಪರ್ದಿಯ ವಾಣಿಜ್ಯ-ವಹಿವಾಟು ಸ್ಥಳಗಳಿಗೆ ಭೇಟಿ ನೀಡಿ ಬಿಲ್‌ ಹಾಕಲಾಗುತ್ತಿದೆಯೇ ಇಲ್ಲವೇ? ಹಾಕುತ್ತಿರುವುದೇ ಆದರೆ ಸರಿಯಾಗಿ ಹಾಕಲಾಗುತ್ತಿದೆಯಾ? ಮಾಹಿತಿ ಕೊರತೆಯಿಂದ ತಪ್ಪಾಗುತ್ತಿದೆಯಾ? ಅಥವಾ ಉದ್ದೇಶಪೂರ್ವಕವಾಗಿ ತಪ್ಪಾಗುತ್ತಿದೆಯಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ತಪಾಸಣೆ ನಡೆಸುತ್ತಿದೆ.

ಮೊದಲ ಹಂತದಲ್ಲಿ ಲೋಪ ಆಗಿದ್ದರೂ ದಂಡ ಹಾಕದೆ ಮಾಹಿತಿ ನೀಡಿ ತಪ್ಪು ಮಾಡದಂತೆ ಎಚ್ಚರಿಕೆ ನೀಡುವ ಹಾಗೂ ಗೊಂದಲ, ಅನುಮಾನ ಇದ್ದರೆ ಪರಿಹರಿಸುವ ಕೆಲಸ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ಎದುರಾಗುವ ಗೊಂದಲ ಮತ್ತು ಸವಾಲುಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ರಚನೆಯಾಗಿ ರುವ ನಿಗಾ ತಂಡ ಮಾಹಿತಿ ಪಡೆದು ಕಾಲ ಕಾಲಕ್ಕೆ ಸಲಹೆ-ಸೂಚನೆ ನೀಡುತ್ತಿದೆ. ಸ್ಪಷ್ಟ ಚಿತ್ರಣ ಸಿಗಬೇಕಾದರೆ  ಆ. 20ರ  ವರೆಗೂ ಕಾಯಲೇಬೇಕು. ವ್ಯಾಪಾರಸ್ಥರು, ಉದ್ದಿಮೆದಾರರು ಜುಲೈ ತಿಂಗಳ ವಹಿವಾಟಿನ ರಿಟರ್ನ್ಸ್ ಸಲ್ಲಿಕೆಗೆ ಆ. 20 ಕೊನೆಯ ದಿನ. ಹೀಗಾಗಿ, ಅಂದು ಜಿಎಸ್‌ಟಿ ಜಾರಿಯಿಂದ ತೆರಿಗೆ ಆದಾಯ ಹೆಚ್ಚಾಗಿದೆಯೇ/ಕಡಿಮೆಯಾಗಿದೆಯೇ ಎಂಬುದು ಗೊತ್ತಾಗಲಿದೆ.

ಈ ಹಿಂದೆ ರಾಜ್ಯದಲ್ಲಿ ವ್ಯಾಟ್‌ ವ್ಯವಸ್ಥೆಯಲ್ಲಿ ತಿಂಗಳಿಗೆ ಐದು ಸಾವಿರ ಕೋಟಿ ರೂ.ವರೆಗೆ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‌ಟಿ ಜಾರಿ ಬಳಿಕ ಅದರ ಪ್ರಮಾಣ ಎಷ್ಟು ಎಂಬುದು ಆ. 20ಕ್ಕೆ ತಿಳಿಯಲಿದೆ. ಈಗ ಜಿಎಸ್‌ಟಿ ವ್ಯಾಪ್ತಿಗೆ ಸೇವಾ ಕ್ಷೇತ್ರವೂ ಒಳ ಗೊಂಡಿರುವುದರಿಂದ ಸಹಜವಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next