ಹೊಸದಿಲ್ಲಿ : ಇಂದಿಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ ಚ್ಯುಯಿಂಗ್ ಗಮ್ ನಿಂದ ಹಿಡಿದು ಡಿಟರ್ಜೆಂಟ್ ವರೆಗಿನ ನಿತ್ಯ ಬಳಕೆಯ 177 ಗ್ರಾಹಕ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
ಈ ಮೊದಲು ಜಿಎಸ್‌ಟಿ ತೆರಿಗೆಯನ್ನು ಶೇ.28ರಿಂದ 18ಕ್ಕೆ ಇಳಿಸಲು 227 ವಸ್ತುಗಳನ್ನು ಪಟ್ಟಿ ಮಾಡಲಾಗಿತ್ತು. ಈ ಪಟ್ಟಿಯಲ್ಲಿನ 177 ವಸ್ತುಗಳ ಮೇಲಿನ ತೆರಿಗೆಯನ್ನು ಜಿಎಸ್‌ಟಿ ಮಂಡಳಿ ಇಂದಿನ ತನ್ನ ಸಭೆಯಲ್ಲಿ ಇಳಿಸಿತು.
ಸುಮಾರು 277 ಐಟಮ್‌ಗಳು ಗರಿಷ್ಠ ಶೇ.28ರ ಜಿಎಸ್‌ಟಿ ತೆರಿಗೆಗೆ ಒಳಪಟ್ಟಿದ್ದವು. ಇವುಗಳನ್ನು 62ಕ್ಕೆ ಸೀಮಿತಗೊಳಿಸಲು ಶಿಫಾರಸು ಮಾಡಲಾಗಿತ್ತು. ಅನಂತರ ಇದನ್ನು 50 ಐಟಮ್‌ಗಳಿಗೆ ಸೀಮಿತಗೊಳಿಸಲು ತಿರ್ಮಾನಿಸಲಾಯಿತು ಎಂದು ಸುಶೀಲ್ ಮೋದಿ ಅವರು ಸಭೆಯ ಪಾರ್ಶ್ವದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲ ಬಗೆಯ ಚ್ಯುಯಿಂಗ್ ಗಮ್, ಚಾಕೋಲೇಟ್, ಫೇಶಿಯಲ್ ಮೇಕಪ್ ವಸ್ತುಗಳು, ಶೇವಿಂಗ್ ಮತ್ತು ಆಫ್ಟರ್ ಶೇವಿಂಗ್ ಐಟಮ್‌ಗಳು, ಗ್ರೆನೈಟ್ ಮತ್ತು ಮಾರ್ಬಲ್‌ಗಳು ಈಗಿನ್ನು ಶೇ.18ರ ಜಿಎಸ್‌ಟಿ ತೆರಿಗೆ ಮಿತಿಗೆ ಒಳಪಡುವುವು ಎಂದು ಸುಶೀಲ್ ಮೋದಿ ತಿಳಿಸಿದರು.
ಹೀಗೆ ಶೇ.28ರಿಂದ ಶೇ.18ರ ತೆರಿಗೆ ಹಲವಾರು ಐಟಮ್‌ಗಳನ್ನು ಗುರುತಿಸಲಾಗಿರುವುದು ಜಿಎಸ್‌ಟಿ ಮಂಡಳಿಯ ಐತಿಹಾಸಿಕ ನಿರ್ಧಾರವಾಗಿದೆ ಎಂದು ಮೋದಿ ಹೇಳಿದರು.
ಈಗಿನ್ನು ಕೇವಲ 50 ಐಟಮ್‌ಗಳು ಮಾತ್ರವೇ ಶೇ.28ರ ಗರಿಷ್ಠ ಜಿಎಸ್‌ಟಿ ತೆರಿಗೆಗೆ ಒಳಪಡುತ್ತವೆ. ಉಳಿದೆಲ್ಲ ಐಟಮ್‌ಗಳು ಶೇ.18 ತೆರಿಗೆಗೆ ಒಳಪಡುತ್ತವೆ ಎಂದು ಸುಶೀಲ್ ಮೋದಿ ಹೇಳಿದರು.