Advertisement

ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿದ ಜಿಎಸ್‌ಟಿ ಸಂಗ್ರಹ

12:27 AM Mar 03, 2022 | Team Udayavani |

ದೇಶದಲ್ಲಿ ಕಾಣಿಸಿಕೊಂಡ ಕೊರೊನಾದ ಮೂರನೇ ಅಲೆ, ಕೊರೊನಾ ವೈರಸ್‌ ರೂಪಾಂತರಿ ಒಮಿಕ್ರಾನ್‌ ಸೃಷ್ಟಿಸಿದ ಆತಂಕ, ವಿಶ್ವಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಫೆಬ್ರವರಿ ಮಾಸಾಂ ತ್ಯದಲ್ಲಿ ದಿಢೀರನೆ ಉಲ್ಬಣಿಸಿದ ರಷ್ಯಾ ಮತ್ತು ಉಕ್ರೇನ್‌ ನಡುವಣ ಬಿಕ್ಕಟ್ಟು… ಈ ಎಲ್ಲ ನಕಾರಾತ್ಮಕ ಬೆಳವಣಿಗೆಗಳ ಹೊರತಾಗಿಯೂ ಫೆಬ್ರ ವರಿ ತಿಂಗಳಿನಲ್ಲಿ 1,33,026 ಕೋ. ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಐದನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1.30 ಲ.ಕೋ. ರೂ. ಗಡಿಯನ್ನು ದಾಟುವ ಮೂಲಕ ಗಮನಾರ್ಹ ಸಾಧನೆ ತೋರಿದೆ. ಫೆಬ್ರವರಿಯಲ್ಲಿ 28 ದಿನಗಳಿದ್ದಾಗ್ಯೂ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಸಾಧನೆಯಾಗಿರುವುದು ದೇಶದ ಆರ್ಥಿಕತೆಯ ದೃಷ್ಟಿಯಿಂದ ಹೇಳುವುದಾದರೆ ಆಶಾದಾಯಕ ಬೆಳವಣಿ ಗೆಯೇ. ಇದೇ ವೇಳೆ ಜನವರಿಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಯಾದರೂ ದೇಶದ ಮತ್ತು ಜಾಗತಿಕ ವಿದ್ಯಮಾನ, ಆರ್ಥಿಕ ಅನಿಶ್ಚತತೆಗಳನ್ನು ಗಮನದಲ್ಲಿರಿಸಿದಾಗ ಜಿಎಸ್‌ಟಿ ಸಂಗ್ರಹ ಪ್ರಮಾಣ ಗಣನೀಯವೇ.

Advertisement

ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಕಳೆದೆರಡು ವರ್ಷಗಳ ಫೆಬ್ರವರಿ ತಿಂಗಳಿಗೆ ಹೋಲಿಸಿದಲ್ಲಿ ಈ ವರ್ಷದ ಜಿಎಸ್‌ಟಿ ಸಂಗ್ರಹ ಪ್ರಮಾಣ ಕ್ರಮವಾಗಿ ಶೇ. 26ರಷ್ಟು ಮತ್ತು ಶೇ. 18ರಷ್ಟು ಅಧಿಕವಾಗಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್‌ ತೀವ್ರ ಗತಿಯಲ್ಲಿ ಹರಡಿದ್ದರಿಂದಾಗಿ ಹಲವು ರಾಜ್ಯಗಳಲ್ಲಿ ಭಾಗಶಃ ಲಾಕ್‌ಡೌನ್‌, ರಾತ್ರಿ, ವಾರಾಂತ್ಯ ಕರ್ಫ್ಯೂ ಮತ್ತಿತರ ನಿರ್ಬಂಧಗಳನ್ನು ಜಾರಿಗೊಳಿಸಲಾ ಗಿತ್ತು. ಮಾಸಾಂತ್ಯದ ವೇಳೆಗೆ ಈ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸ ಲಾಗಿತ್ತಾದರೂ ಈ ನಿರ್ಬಂಧಗಳು ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಚಟು ವಟಿಕೆಗಳ ಮೇಲೆ ಪರಿಣಾಮ ಬೀರಿದ್ದವು. ಇವೆಲ್ಲದರ ಹೊರತಾಗಿಯೂ ಜಿಎಸ್‌ಟಿ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿರುವುದು ಈ ಕ್ಷೇತ್ರಗಳು ಪ್ರಗತಿಯ ಹಾದಿಯಲ್ಲಿರುವುದನ್ನು ತೋರಿಸುತ್ತದೆ. ಇದೇ ವೇಳೆ ದೇಶದ ಜಿಡಿಪಿ ಮೂರನೇ ತ್ತೈಮಾಸಿಕದಲ್ಲೂ ಆಶಾದಾಯಕವಾಗಿದ್ದು ಶೇ.5.4 ರಷ್ಟು ಪ್ರಗತಿ ಸಾಧಿಸಿದೆ. ಉತ್ಪಾದನ ಕ್ಷೇತ್ರದಲ್ಲೂ ದೇಶ ಮುನ್ನಡೆಯುತ್ತಿದ್ದು ಉತ್ಪಾದನ ಪ್ರಮಾಣ ಮತ್ತು ಬೇಡಿಕೆ ಸತತವಾಗಿ ಹೆಚ್ಚುತ್ತಲೇ ಸಾಗಿದೆ.

ಏತನ್ಮಧ್ಯೆ ರಷ್ಯಾ ಮತ್ತು ಉಕ್ರೇನ್‌ ನಡುವೆ ಈಗ ಯುದ್ಧ ನಡೆಯುತ್ತಿ ರುವುದರಿಂದ ಮುಂದಿನ ದಿನಗಳಲ್ಲಿ ಇದರ ಪ್ರತಿಕೂಲ ಪರಿಣಾಮವನ್ನು ಜಾಗತಿಕ ಸಮುದಾಯ ಎದುರಿಸಬೇಕಾಗಿದೆ. ಕಳೆದೊಂದು ವಾರದಿಂದೀ ಚೆಗೆ ತೈಲೋತ್ಪನ್ನಗಳ ಬೆಲೆ ಹೆಚ್ಚುತ್ತಲೇ ಸಾಗಿದೆ. ಅಮೆರಿಕ ಮತ್ತು ನ್ಯಾಟೋ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತಲೇ ಸಾಗಿದ್ದು ಇದು ಭಾರತದ ಆರ್ಥಿಕತೆಯ ಮೇಲೆ ಪರೋಕ್ಷ ಪರಿಣಾಮ ವನ್ನುಂಟು ಮಾಡುವ ಸಾಧ್ಯತೆ ಇದೆ. ಕಚ್ಚಾತೈಲದ ಬೆಲೆ ಏರಿಕೆಯಂತೂ ದೇಶದ ಮಟ್ಟಿಗೆ ನುಂಗಲಾರದ ಬಿಸಿತುಪ್ಪವಾಗಿದ್ದು ಇದು ಅಗತ್ಯ ವಸ್ತುಗಳ ಬೆಲೆಏರಿಕೆಯ ಜತೆಜತೆಯಲ್ಲಿ ಹಣದುಬ್ಬರದ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಶೀಘ್ರದಲ್ಲಿಯೇ ರಷ್ಯಾ-ಉಕ್ರೇನ್‌ ನಡುವಣ ಸಂಘರ್ಷಕ್ಕೆ ಅಂತ್ಯ ಹಾಡಿ ಜಾಗತಿಕವಾಗಿ ಶಾಂತಿ ಕಾಯ್ದುಕೊಳ್ಳದೇ ಹೋದಲ್ಲಿ ಭಾರತದ ಆರ್ಥಿಕತೆ ಮತ್ತೆ ಕೊರೊನಾ ಕಾಲಘಟ್ಟದ ಸಂಕಷ್ಟಕ್ಕೆ ಈಡಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾದ ಮೇಲೆ ಹೇರಲಾಗಿರುವ ನಿರ್ಬಂಧಗಳು ಭಾರತ ಆ ದೇಶದೊಂದಿಗೆ ಹೊಂದಿರುವ ವಾಣಿಜ್ಯ ಮತ್ತು ರಕ್ಷಣ ಸಂಬಂಧಗಳ ಮೇಲೆ ತೀವ್ರ ತೆರನಾದ ಪರಿಣಾಮ ಬೀರಲಿರುವುದಂತೂ ನಿಶ್ಚಿತ.

Advertisement

Udayavani is now on Telegram. Click here to join our channel and stay updated with the latest news.

Next