ಮುಂಬಯಿ: ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ಧಾರಾವಿಯ ಕೊಳಚೆಗೇರಿ ಪ್ರದೇಶದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯು ಮಾ. 27 ರಂದು ಧಾರಾವಿಯ ಕಮರಾಜರ್ ಮೆಮೋರಿಯಲ್ ಇಂಗ್ಲಿಷ್ ಹೈಸ್ಕೂಲ್ ಆ್ಯಂಡ್ ಜ್ಯೂನಿಯರ್ ಕಾಲೇಜಿನ ಸಭಾಗೃಹದಲ್ಲಿ ನಡೆಯಿತು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ನಿಮಿತ್ತ ಪೈಂಟ್ ಎ ಪಿಕ್ಚರ್ ಅರ್ನ್ ಎ ಸರ್ಟಿಫಿಕೇಟ್ ಎಂಬ ಘೋಷ ವಾಕ್ಯದೊಂದಿಗೆ ನಡೆದ ಈ ಸ್ಪರ್ಧೆಯಲ್ಲಿ ಧಾರಾವಿಯ ಕೊಳಚೆಗೇರಿ ಪ್ರದೇಶದ ಸುಮಾರು 6,600 ವಿದ್ಯಾರ್ಥಿಗಳು ಸೇರಿದಂತೆ 200 ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ಇದರ ಡಾ| ಹಿರೇನ್ ದೇಸಾಯಿ, ಪ್ರಕಾಶ್ ಶೆಣೈ, ಶಿವಾನಂದ ಶೆಣೈ ಮತ್ತು ನವನಾಥ್ ಶಿಂಧೆ ಅವರು ಧಾರಾವಿ ಸೇರಿದಂತೆ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಚಿತ್ರಕಲಾ ಸ್ಪರ್ಧೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತ್ಛತೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ಉದ್ಧೇಶದಿಂದ ಈ ಸ್ಪರ್ಧೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಸಂತ ಕಕ್ಕಯ್ಯ ವಿಕಾಸ ಸಂಸ್ಥೆಯ ಅಧ್ಯಕ್ಷ ಶ್ರೀ ಶಿವಲಿಂಗ ವಾಹತ್ಕರ್ ಅವರು ಮಾತನಾಡಿ, ಇಂತಹ ಸ್ಪರ್ಧೆಗಳನ್ನು ಆಯೋಜಿಸುತ್ತಿರುವ ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್‌ನ ಕಾರ್ಯವೈಖರಿ ಅಭಿನಂದನೀಯವಾಗಿದೆ. ಮಕ್ಕಳ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ನೀಡುತ್ತಿರುವ ಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದು, ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಅತಿಥಿ ಸರಕಾರೇತರ ಸಂಸ್ಥೆಯೊಂದರ ಮಾಜಿ ಕೌನ್ಸಿಲರ್ ಶಂಕರ್ ಶಾಂತಿ, ಕಾಮರಾಜ್ ಮೆಮೋರಿಯಲ್ ಸ್ಕೂಲ್ ಇದರ ಪ್ರಾಂಶುಪಾಲ ಮೈಕಲ್ ರಾಜ್ ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ| ಸುಹಾಸ್ ಪ್ರಭು ಅವರು ಸ್ವಾಗತಿಸಿ ಮಾತನಾಡಿ, ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿದೆ. ಈ ಚಿತ್ರಕಲಾ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದು ನುಡಿದು ವಿಜೇತರಾದ 18 ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು. ನೂರಾರು ವಿದ್ಯಾರ್ಥಿಗಳು, ಪಾಲಕ- ಪೋಷಕರು ಪಾಲ್ಗೊಂಡಿ ದ್ದರು. ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.