Advertisement

ಸಯಾನ್‌ ಜಿಎಸ್‌ಬಿ ಮಂಡಲ: ಹರಿಸೇವೆ,ಗಣೇಶೋತ್ಸವದ ಪೂರ್ವಭಾವಿ ಸಭೆ

04:46 PM Jul 13, 2018 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ವತಿಯಿಂದ ಇತ್ತೀಚೆಗೆ ನಡೆದ ಭದ್ರಿನಾಥ್‌ ಯಾತ್ರೆಯ ಹರಿಸೇವೆ ಮತ್ತು ಮಂಡಲದ 64 ನೇ ವಾರ್ಷಿಕ ಗಣೇಶೋತ್ಸವದ ಪ್ರಥಮ ಪೂರ್ವತಯಾರಿ ಸಭೆಯು ಜು. 8 ರಂದು ಸಯಾನ್‌ ಪೂರ್ವದ ಸೇವಾ ಮಂಡಲದ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಜರಗಿತು.

Advertisement

ಬೆಳಗ್ಗೆ 9.30ರಿಂದ ಹರಿಸೇವೆಯ ಪೂಜೆಯನ್ನು ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಇವರ ನೇತೃತ್ವದಲ್ಲಿ ನಡೆಸಲಾಯಿತು. ಭದ್ರಿನಾಥ್‌ ಕ್ಷೇತ್ರದ ಯಾತ್ರಿಗಳು ಮತ್ತು  ಇತರರು ತೀರ್ಥ ಪ್ರಸಾದ ಸ್ವೀಕರಿಸಿದರು. ಸೇವಾ ಮಂಡಳದ 64ನೇ ಗಣೇಶೋತ್ಸವವು ಸೆ. 13 ರಿಂದ ಸೆ. 17 ರವರೆಗೆ ಶ್ರೀ ಸುಕೃತೀಂದ್ರ ನಗರ, ಎ. ರಾಮ ನಾಯಕ್‌ ಹಾಲ್‌ ಮೈದಾನ ಮತ್ತು ಜಿಎಸ್‌ಬಿ ನ್ಪೋರ್ಟ್ಸ್ ಕ್ಲಬ್‌ ಮೈದಾನ ಕಿಂಗ್‌ ಸರ್ಕಲ್‌ನಲ್ಲಿ ಜರಗಲಿದ್ದು,   ಇದರ ಪೂರ್ಯತಯಾರಿಗಾಗಿ ಕಾರ್ಯಕರ್ತರು, ಸ್ವಯಂ ಸೇವಕರ ಸಭೆಯನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಶ್ರೀ ಗಣೇಶೋತ್ಸವ ಆಯೋಜನ ಸಮಿತಿಯ ಪ್ರಧಾನ ಸಂಚಾಲಕ ಡಾ| ಭುಜಂಗ ಪೈ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಪ್ರದಾನ ಅರ್ಚಕ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಬಳಿಕ ಭುಜಂಗ ಪೈ ಅವರು ತನ್ನನ್ನು ಸಂಚಾಲಕನನ್ನಾಗಿ ನೇಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಕಳೆದ ಗಣೇಶೋತ್ಸವದಲ್ಲಿ ವಿವಿಧ ರೂಪದಲ್ಲಿ ಬಂದ ಧನ ಸಂಗ್ರಹದ ಬಗ್ಗೆ ವಿವರ ನೀಡಿದರು.

ಗಣೇಶೋತ್ಸವ ಆಯೋಜನ ಸಮಿತಿಯ ಸಹ ಸಂಚಾಲಕ ರಘುನಂದನ್‌ ಕಾಮತ್‌ ಅವರು ಮಾತನಾಡಿ, ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಜರಗುವಲ್ಲಿ ಸರಕಾರಿ ನಿಯಮಗಳ ಬಗ್ಗೆ ತಿಳಿಸಿ, ನಿಯಮ ಪಾಲನೆಯೊಂದಿಗೆ ಗಣೇಶೋತ್ಸವ ಸಂದರ್ಭದಲ್ಲಿ ಸಮಾರಾಧನೆಯನ್ನು ಬಫೆ ಸಿಸ್ಟಂ ಮೂಲಕ ನಡೆಸಬೇಕು ಎಂದು ಸಲಹೆ ನೀಡಿದರು.

ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌  ಇವರು ಮಾತನಾಡಿ, ಕಳೆದ ವರ್ಷ ಗಣೇಶೋತ್ಸವದ ಐದನೇ ದಿನ ವಿಸರ್ಜನೆಯಂದು ವಿಪರೀತ ಮಳೆಯಿಂದಾಗಿ ಮಂಟಪದಲ್ಲಿ ನೆರೆದಿದ್ದ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಗೆ ಇಡೀ ರಾತ್ರಿ ನಮ್ಮ ಮಂಡಲದ ಮುಖಾಂತರ ಊಟೋಪಚಾರ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಮರುದಿನ ಪವಾಡ ಎಂಬಂತೆ ಬೆಳಗ್ಗೆಯಿಂದ ಮಳೆಯಿಲ್ಲದೆ, ಬಿಸಿಲು ಕಾದು ವಿಜೃಂಭಣೆಯಿಂದ ಗಣಪತಿ ವಿಸರ್ಜನೆ ವೈಭವದ ಮೆರವಣಿಗೆ ನಡೆಯಿತು. ವರ್ಲಿಯ ಸಮೀಪದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಕಾದು ಕುಳಿತು ದೇವರ ದರ್ಶನ ಮಾಡಿದ್ದಾರೆ ಎಂದರು.

Advertisement

ಇನ್ನೋರ್ವ ಸಹ ಸಂಚಾಲಕ ಜಿ. ದಾಮೋದರ ರಾವ್‌ ಅವರು ಮಾತನಾಡಿ, ಕಳೆದ ಸಾಲಿನ ಧನ ಸಂಗ್ರಹದ ಬಗ್ಗೆ ವಿವರಿಸಿದರು. ಸಹ ಸಂಚಾಲಕ ಹಿರಿಯ ನ್ಯಾಯವಾದಿ ಎಂ. ವಿ. ಕಿಣಿ ಅವರು ಮಾತನಾಡಿ, ಸೇವಾ ಮಂಡಲದ ಪ್ರಾರಂಭದ ವರ್ಷಗಳಲ್ಲಿ ಬಟ್ಟೆ ಗಿರಣಿಗಳಲ್ಲಿ ಕೆಲಸ ಮಾಡುವ ನಮ್ಮ ಸಮಾಜದವರು ಒಂದಾಣೆ, ಎರಡಾಣೆ ದೇಣಿಗೆ ಸಂಗ್ರಹಿಸಿ ಉತ್ಸವ ಆಚರಿಸುತ್ತಿದ್ದರು. ಅಂದಿನ ನಮ್ಮ ಸಮಾಜ ಬಾಂಧವರ ಶ್ರಮ ಇಂದಿನವರಿಗಿಂತ ಹೆಚ್ಚು ಮಹತ್ವದ್ದಾಗಿದೆ ಎಂದರು.

ಸಹ ಸಂಚಾಲಕ ಗಣೇಶ್‌ ಪ್ರಭು ಇವರು ಮಾತನಾಡಿ, ಸೇವಾ ಮಂಡಲವು ಇತ್ತೀಚೆಗೆ ಆಯೋಜಿಸಿದ ಭದ್ರಿನಾಥ ಯಾತ್ರೆಯಲ್ಲಿ ಊಟೋಪಹಾರ ಇತರ ವ್ಯವಸ್ಥೆಯನ್ನು ಕೈಗೊಂಡು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನುಡಿದರು.
ಸೇವಾ ಮಂಡಲದ ಮಾಜಿ ಅಧ್ಯಕ್ಷ ಆರ್‌. ಜಿ. ಭಟ್‌ ಇವರು ಮಾತನಾಡಿ, ಸೇವಾ ಮಂಡಳದ ಮುಂದಿರುವ ಯೋಜನೆಗಳು ಕ್ಲಪ್ತ ಸಮಯದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು. ಸೇವಾ ಮಂಡಲದ ಜೊತೆ ಕೋಶಾಧಿಕಾರಿ ವಿಷ್ಣು ಕಾಮತ್‌ ಅವರು ಮಾತನಾಡಿ, ಗಣೇಶೋತ್ಸವದಲ್ಲಿ ಭಕ್ತರು ಪೂಜಾ ಸೇವೆ, ದೇಣಿಗೆ ಇತ್ಯಾದಿಗಳನ್ನು ಸೇವಾ ಮಂಡಳದ ಮೊಬೈಲ್‌ ಆ್ಯಪ್‌ ಮೂಲಕ ನೋಂದಾಯಿಸಿಕೊಳ್ಳಬಹುದು. ಇದರಿಂದ ಕಾರ್ಯಕರ್ತರ, ಸ್ವಯಂ ಸೇವಕರ ಶ್ರಮ ಹಾಗೂ ಸಮಯ ಉಳಿತಾಯವಾಗುತ್ತದೆ ಎಂದು ಹೇಳಿದರು.

ಸೇವಾ ಮಂಡಳದ ಕಾರ್ಯದರ್ಶಿ ಶಿವಾನಂದ ಭಟ್‌ ಇವರು ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಜು. 21 ರಂದು ಸಂಜೆ 7.35 ಕ್ಕೆ ಜಿಎಸ್‌ಬಿ ಸೇವಾ ಮಂಡಲ ಶ್ರೀ ಗುರುಗಣೇಶ್‌ ಪ್ರಸಾದ್‌ ಸಭಾಗೃಹ ಸಯಾನ್‌ ಪೂರ್ವದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ಸ್ವಯಂ ಸೇವಕರು, ಕಾರ್ಯಕರ್ತರು, ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next