Advertisement

ಗುಳೇ ಹೋದವರಿಗೆ ರಾಜಮರ್ಯಾದೆ: ಐಶಾರಾಮಿ ಬಸ್ ಮೂಲಕ ಗ್ರಾಮಕ್ಕೆ ಕರೆಸಿದ ಗ್ರಾ.ಪಂ ಅಭ್ಯರ್ಥಿಗಳು

06:21 PM Dec 27, 2020 | Mithun PG |

ಬಾಗಲಕೋಟೆ: ಬದುಕಿನ ಬಂಡಿ ಸಾಗಿಸಲು ಬೆಂಗಳೂರು, ಮಂಗಳೂರು ಮುಂತಾದ ಕಡೆ  ಗುಳೇ ಹೋದ ಜನರನ್ನು ಹವಾನಿಯಂತ್ರಿತ ಐಶಾರಾಮಿ ಬಸ್‌ನಲ್ಲಿ ಕರೆಸಿ, ಮತದಾನ ಮಾಡಿಸಿದ ಘಟನೆ ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರದಲ್ಲಿ ನಡೆದಿದೆ.

Advertisement

ಒಂದೇ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಜನ ಮಂಗಳೂರಿನಲ್ಲಿ ದುಡಿಯುತ್ತಿದ್ದು, ಸುಮಾರು 15 ರಿಂದ 20 ವರ್ಷಗಳಿಂದ ಅವರೆಲ್ಲ ಮಂಗಳೂರಿನಲ್ಲಿ ವಾಸವಾಗಿದ್ದರೆ. ಆದರೆ, ಅವರ ಆಧಾರ್  ಮತದಾನದ ಹಕ್ಕು ತಿಮ್ಮಸಾಗರದಲ್ಲಿಯೇ ಇದ್ದರಿಂದ ಗುಳೇ ಹೋದವರನ್ನು ಅಭ್ಯರ್ಥಿಗಳು, ರಾಜಮರ್ಯಾದೆ ನೀಡಿ, ಹವಾನಿಯಂತ್ರಿತ ಹೈಟೆಕ್ ಬಸ್ ಮಾಡಿಸಿ, ಊರಿಗೆ ಕರೆಸಿಕೊಂಡಿದ್ದಾರೆ.

ಮತದಾರರಿಗೆ ರಾಜ ಮರ್ಯಾದೆ :

ಮಂಗಳೂರಿನಿಂದ ಹೈಟೆಕ್ ಬಸ್ ಮೂಲಕ ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರಕ್ಕೆ ಬಂದಿಳಿಯುತ್ತಿದ್ದಂತೆ ಮತದಾರರರಿಗೆ ರಾಜ ಮರ್ಯಾದೆ ದೊರೆಯಿತು. ಒಂದೊಂದು ಬಸ್‌ನಲ್ಲೂ 57 ರಿಂದ 67 ಜನರನ್ನು  ಕರೆಸಲಾಗಿತ್ತು.  ಬಸ್‌ ನಿಂದ ಅವರು ಇಳಿಯುತ್ತಿದ್ದಂತೆ ಅಭ್ಯರ್ಥಿಗಳು ತಮ್ಮ ಚಿಹ್ನೆ ತೋರಿಸಿ ಮತದಾನ ಮಾಡುವಂತೆ ಭಿನ್ನವಿಸಿಕೊಳ್ಳುತ್ತಿದ್ದರು.

ಕೆಲವಡಿ ಗ್ರಾ.ಪಂ. ವ್ಯಾಪ್ತಿಯ ತಿಮ್ಮಸಾಗರದಲ್ಲಿ ಒಟ್ಟು ನಾಲ್ಕು ಸ್ಥಾನಗಳಿದ್ದು, ಅದರಲ್ಲಿ ಎಸ್.ಟಿ ವರ್ಗಕ್ಕೆ ಮೀಸಲಿರುವ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

Advertisement

ಒಂದು ಹಿಂದುಳಿದ ವರ್ಗ ಅ ಹಾಗೂ ಎರಡು ಸಾಮಾನ್ಯ ಸ್ಥಾನಕ್ಕೆ ಚುನಾವಣೆ ನಡೆಯಿತು. 2 ಸಾಮಾನ್ಯ ಸ್ಥಾನಕ್ಕೆ ಐವರು, ಒಂದು 2ಎ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದು, ಮಂಗಳೂರಿಗೆ ಗುಳೇ ಹೋದವರನ್ನು ಹೈಟೆಕ್ ಬಸ್‌ನಲ್ಲಿ ಗ್ರಾಮಕ್ಕೆ ಕರೆಸಿ, ಮತ ಹಾಕಿಸಲಾಯಿತು.

ಕೆಲವಡಿ ಗ್ರಾ.ಪಂ. ವ್ಯಾಪ್ತಿಗೆ ಕೆಲವಡಿ 824 ಮತದಾರರು ಹಾಗೂ ತಿಮ್ಮಸಾಗರ ಗ್ರಾಮದಲ್ಲಿ 1304 ಮತದಾರರಿದ್ದಾರೆ. ಕೆಲವಡಿಯಿಂದ ಬೆಂಗಳೂರಿಗೆ ದುಡಿಯಲು ಹೋದ 19  ಜನರನ್ನು ಪ್ರತ್ಯೇಕ ಹೈಟೆಕ್  ಬಸ್‌ನಲ್ಲಿ ಕರೆಸಿದರೆ, ತಿಮ್ಮಸಾಗರದ ಸುಮಾರು 350ಕ್ಕೂ ಹೆಚ್ಚು ಜನರನ್ನು ಮಂಗಳೂರಿನಿಮದ ಕರೆಸಲಾಯಿತು. ಅವರಿಗಾಗಿ ಒಟ್ಟು ಐದು ಹೈಟೆಕ್ ಬಸ್‌ಗಳು ಮಾಡಿದ್ದು, ಅವು ಇಂದು ಬೆಳಗ್ಗೆ 11ರ ಹೊತ್ತಿಗೆ ತಿಮ್ಮಸಾಗರಕ್ಕೆ ಆಗಮಿಸಿದ್ದವು.

ಎಲ್ಲೆಡೆ ಹೈಟೆಕ್ ಬಸ್‌ಗಳು :

2ನೇ ಹಂತದ ಮತದಾನ ನಡೆದ ಬಾದಾಮಿ ತಾಲೂಕಿನ ಬಹುತೇಕ ಕಡೆ, ಬೆಂಗಳೂರು, ಮಂಗಳೂರು ಹಾಗೂ ಗೋವಾ ಪಾಸಿಂಗ್ ಹೊಂದಿದ ಐಶಾರಾಮಿ ಬಸ್‌ಗಳೇ ಕಂಡವು. ಬಾದಾಮಿ ತಾಲೂಕಿನ ಬಹುತೇಕ ಗ್ರಾಮ, ತಾಂಡಾಗಳ ಜನರ ಬೆಂಗಳೂರು, ಮಂಗಳೂರಿನಲ್ಲಿ ಗೌಂಡಿ ಕೆಲಸ ಮಾಡಿದರೆ, ಗೋವಾದಲ್ಲಿ ಹೊಟೇಲ್‌ನಲ್ಲಿ ಕೆಲಸಕ್ಕೆ ದುಡಿಯುವ ಹೋಗುವುದು ವಾಡಿಕೆ. ಪ್ರತಿಬಾರಿ ಚುನಾವಣೆಗೊಮ್ಮೆ ಅವರೆಲ್ಲ ತಮ್ಮೂರಿಗೆ ಬಂದು ಮತದಾನ ಮಾಡಿ ಹೋಗುತ್ತಾರೆ.  ಪಟ್ಟದಕಲ್ಲನಿಂದ ಮಂಗಳೂರಿಗೆ ದುಡಿಯುಲು ಹೋಗಿದ್ದ 45 ಜನ ಮತದಾರರನ್ನು ತೋಟಗೇರ ಎಂಬ ಅಭ್ಯರ್ಥಿ, ಹೈಟೆಕ್ ಬಸ್ ಮೂಲಕ ತಮ್ಮೂರಿಗೆ ಕರೆಸಿಕೊಂಡಿದ್ದರು.

ನಾವು 20 ವರ್ಷದಿಂದ ಇಡೀ ಕುಟುಂಬ ಸಮೇತ ನಾವು ಮಂಗಳೂರಿಗೆ ದುಡಿಯಲು ಹೋಗಿದ್ದೇವೆ. ತಿಮ್ಮಸಾಗರದ ಮನೆಗೆ ಬೀಗ ಹಾಕಿದ್ದೇವೆ. ಜಾತ್ರೆ, ಚುನಾವಣೆಗೊಮ್ಮೆ ಮಾತ್ರ ಬರುತ್ತೇವೆ. ಚುನಾವಣೆಗೆ ನಿಂತವರೇ ಬಸ್ ಮಾಡಿಕೊಟ್ಟು, ನಮ್ಮನ್ನು ಕರೆಸಿಕೊಂಡಿದ್ದಾರೆ. ಮತ ಹಾಕಿ, ಮನೆ ಸ್ವಚ್ಛ ಮಾಡಿ, ಪುನಃ ಮಂಗಳೂರಿಗೆ ಹೋಗುತ್ತೇವೆ. ಮತ ಹಾಕಲು ಹಣ ಪಡೆದಿಲ್ಲ. ಬಸ್ ಮಾತ್ರ ಮಾಡಿಕೊಟ್ಟಿದ್ದಾರೆ.

-ಗೌರಮ್ಮ ಹಿರೇಮಠ ಮತ್ತು ಈರಪ್ಪ ಕಂಠಿ, ಮಂಗಳೂರಿನಿಂದ ಮತ ಹಾಕಲು ಆಗಮಿಸಿದ ತಿಮ್ಮಸಾಗರದ ಜನ

ನಮ್ಮೂರಿನ ಸುಮಾರು 400ಕ್ಕೂ ಹೆಚ್ಚು ಜನ ಮಂಗಳೂರಿಗೆ ದುಡಿಯಲು ಹೋಗಿದ್ದಾರೆ. ಚುನಾವಣೆಗೊಮ್ಮೆ ಅವರನ್ನು ಕರೆಸಿಕೊಳ್ಳುತ್ತೇವೆ. ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಎಲ್ಲ ಅಭ್ಯರ್ಥಿಗಳು ಹಣ ಒಟ್ಟು  ಮಾಡಿಕೊಂಡು ಗುಳೇ ಹೋದವರಿಗೆ ಬಸ್  ವ್ಯವಸ್ಥೆ ಮಾಡಲಾಗುತ್ತದೆ. ಅವರ ಮತಗಳೂ ಇಲ್ಲಿ ನಿರ್ಣಾಯಕವಾಗುತ್ತವೆ. ಅಲ್ಲದೇ ಗುಳೇ ಹೋದವರಲ್ಲಿ ನಮ್ಮ ಸಂಬಂಧಿಕರೂ ಹೆಚ್ಚಿನವರಿದ್ದಾರೆ.

ಹೆಸರು ಬಹಿರಂಗಪಡಿಸಲಿಚ್ಛಿಸದ ಕೆಲವಡಿ ಗ್ರಾ.ಪಂ.ನ ತಿಮ್ಮಸಾಗರದ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next