ಉಡುಪಿ: ನಾಡಿನ ಹೆಮ್ಮೆಯ ಸಂಸ್ಥೆ ಎಂಜಿಎಂ ಕಾಲೇಜು ಸಂಸ್ಥಾಪಕ ಡಾ|ಟಿಎಂಎ ಪೈಯವರ ಕನಸು ಮೀರಿ ಸಮಾಜಕ್ಕೆ ದೊಡ್ಡ ಕೊಡುಗೆ ಸಲ್ಲಿಸುತ್ತಿದೆ ಎಂದು ಭಾಸವಾಗುತ್ತಿರುವುದಾಗಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ರವಿವಾರ ಮುದ್ದಣ ಮಂಟಪದಲ್ಲಿ ನಡೆದ ಕಾಲೇಜಿನ ಅಮೃತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಕೇವಲ ಪ್ರಮಾಣಪತ್ರ ನೀಡುವ ಸಂಸ್ಥೆಯಾಗಿರದೆ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಹೀಗೆ ವಿವಿಧ ಪ್ರಕಾರಗಳಲ್ಲಿ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪ್ರಾಂಶುಪಾಲರು ಕೊಡುಗೆ ಸಲ್ಲಿಸಿದ್ದಾರೆ. ಮುಂದೆ ಸ್ವಾಯತ್ತ ಕಾಲೇಜಾಗಿಯೂ ಸಂಸ್ಥೆಯು ಬೆಳಗಲಿ ಎಂದು ಹಾರೈಸಿದರು.
1949ರಲ್ಲಿ ಎಸೆಸೆಲ್ಸಿ ಬಳಿಕ ಮುಂದಿನ ಶಿಕ್ಷಣ ಪಡೆಯುತ್ತಿರಲಿಲ್ಲ. ಹೆಮ್ಮಕ್ಕಳಂತೂ ಉನ್ನತ ಶಿಕ್ಷಣದಿಂದ ವಂಚಿತರಾಗಿಯೇ ಇದ್ದರು. ಸರಕಾರದ ಪ್ರೋತ್ಸಾಹವೂ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಡಾ|ಟಿಎಂಎ ಪೈಯವರ ಖರ್ಚಿನಲ್ಲಿ ನ್ಯಾಯಾಲಯಕ್ಕೆ ತೆರಳಿದ ವಿದ್ಯಾರ್ಥಿನಿ ಗೆದ್ದು ಅನಂತರ ಮದ್ರಾಸ್ ಪ್ರಾಂತ್ಯದಲ್ಲಿ ರ್‍ಯಾಂಕ್ ಗಳಿಸಿದಳು. ಈಗ 2047ರಲ್ಲಿ ವಿಕಸಿತ ಭಾರತದ ಕನಸನ್ನು ಪ್ರಧಾನಿ ಹೊಂದಿದ್ದಾರೆ. ಸಮುದಾಯಕ್ಕೆ ಉತ್ತಮ ಶಿಕ್ಷಣವನ್ನು ನೀಡುವ ಜತೆ ಕಲಿತವರೆಲ್ಲರೂ ಉದ್ಯೋಗಿಗಳಾಗಲು ಕೌಶಲಾಭಿವೃದ್ಧಿಯ ಅಗತ್ಯವಿದೆ. ಇದನ್ನು ಆಗಗೊಡಲು ಸಂಸ್ಥೆ ಕೌಶಲಾಭಿವೃದ್ಧಿ ಕೇಂದ್ರವನ್ನೂ ಆರಂಭಿಸಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ|ಎಚ್.ಎಸ್.ಬಲ್ಲಾಳ್ ಹೇಳಿದರು.
ಸ್ವಾಯತ್ತ ಕಾಲೇಜಾಗಿ ಬೆಳೆದು ಇನ್ನಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಮಾಹೆ ವಿ.ವಿ.ಯಿಂದ ಸಕಲ ಪ್ರೋತ್ಸಾಹವನ್ನೂ ನೀಡಲಾಗುವುದು ಎಂದು ಕುಲಪತಿ ಲೆ|ಜ|ಡಾ|ಎಂ.ಡಿ.ವೆಂಕಟೇಶ್ ಹೇಳಿದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ.ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಸಹಕುಲಪತಿ ಡಾ|ನಾರಾಯಣ ಸಭಾಹಿತ್, ಎಜಿಇ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ|ದೇವಿದಾಸ್ ನಾಯ್ಕ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಶುಭ ಕೋರಿದರು.
ಹಿರಿಯ ವಿಶ್ರಾಂತ ಪ್ರಾಂಶುಪಾಲ ಪ್ರೊ|ಶ್ರೀಶ ಆಚಾರ್ಯರನ್ನು ಸಮ್ಮಾನಿಸಲಾಯಿತು. ಟಿ.ಮೋಹನದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ|ಬಿ.ಜಗದೀಶ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವಿನಾಯಕ ಕಿಣಿ, ವಿಜಯ ಸಿಕ್ವೇರ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ|ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ|ಲಕ್ಷ್ಮೀನಾರಾಯಣ ಕಾರಂತ್ ಸ್ವಾಗತಿಸಿ, ಉಪನ್ಯಾಸಕರಾದ ಸುಚಿತ್ ಕೋಟ್ಯಾನ್, ರೋಹಿಣಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ|ವಿಶ್ವನಾಥ ಪೈ ವಂದಿಸಿದರು.