Advertisement

ಕಣಿವೆಯಲ್ಲಿ ಅರಳಿದ ಕಟ್ಟೋಣಗಳು

06:35 AM Jul 30, 2017 | |

ಭೂತಾನಕ್ಕೆ ಆನಂದದ ನಾಡು (land of happiness) ಎಂಬ ಹೆಸರಿದೆ. ಹಾಗಿದ್ದರೆ ಅಲ್ಲಿಗೆ ಒಮ್ಮೆ ಹೋಗಿ ಬರಬೇಕು ಅನ್ನಿಸಿತು. ಇದೇ ಏಪ್ರಿಲ್‌ 2017ರಲ್ಲಿ ಆ ಭಾಗ್ಯ ಕೂಡಿ ಬಂದಿತು. 

Advertisement

ಮೊದಲು ಪುಂಶೋಲಿಂಗ್‌ನಲ್ಲಿಳಿದೆವು. ಅಲ್ಲಿಂದ ಪಾರೋ ಪ್ರಯಾಣಿಸಿ ಆ ನಗರದರ್ಶನ ಕಾರ್ಯಕ್ರಮ. ಭೂತಾನ್‌ ದೇಶದಲ್ಲಿ ಅದು ಒಂದು ನಗರವಾದರೂ ನಮ್ಮ ಮಟ್ಟಿಗೆ ಅದೊಂದು ಸಣ್ಣ ಊರು ಅಷ್ಟೇ. ಪಾರೋ ನಗರದಲ್ಲಿ ಅನೇಕ ಬುದ್ಧ ದೇವಾಲಯಗಳು (lakhang) ಹಾಗೂ ಬುದ್ಧ ಭಿಕ್ಷುಗಳ ವಾಸಸ್ಥಾನಗಳು (monastery)ಇವೆ. ಎಲ್ಲವೂ ಬಹಳ ಸುಂದರ ತಾಣಗಳು. ಈ ಪುರಾತನ ಕಟ್ಟಡಗಳಲ್ಲಿ ಸುಂದರ ಚಿತ್ರಕಲೆಯನ್ನು ಕಾಣಬಹುದು. ಗೌತಮ ಬುದ್ಧನು  ತನ್ನ ಉಪದೇಶಗಳನ್ನು ಚಿತ್ರಗಳ ಮೂಲಕ ಬರೆದಿಟ್ಟ ಎಂದು ಹೇಳುತ್ತಾರೆ. ಅದೇ  ಚಿತ್ರಗಳನ್ನು ಇಲ್ಲಿ ಗೋಡೆಗಳ ಮೇಲೆ ಚಿತ್ರಿಸಿದರು ಎಂದೂ ಹೇಳುತ್ತಾರೆ. ಆ ಚಿತ್ರಗಳು ಸುಂದರವೂ ವರ್ಣರಂಜಿತವೂ ಆರ್ಥಪೂರ್ಣವೂ ಆಗಿವೆ.  ಪ್ರಾಕೃತಿಕ ಬಣ್ಣಗಳನ್ನೇ ಬಳಸಲಾಗಿದೆ. ಭೂತಾನೀಯರು ಬಣ್ಣಗಳು ಶುಭಸೂಚಕ ವೆಂದು ನಂಬಿ ತಮ್ಮ ಮನೆಗಳಲ್ಲೂ ಬಣ್ಣದ ಚಿತ್ರಗಳನ್ನು ಬಿಡಿಸುತ್ತಾರೆ. ನಾವು ನೋಡಿದ ಜಾಗಗಳೆಂದರೆ ಕಿಚು ಲೆಖಾಂಗ್‌ ದೇವಾಲಯ ((Kyichu Lakhang) ಮತ್ತು ಸೇಂಟೋಕ ಝೋಂಗ್‌ (Semtokha Dzong).ಕಿಚು 7ನೇ ಶತಮಾನದಲ್ಲಿ ನಿರ್ಮಾಣವಾದ ದೇವ ಮಂದಿರ. ತುಂಬಾ ಸುಂದರವಾಗಿದೆ. ಅಲ್ಲಿನ ಸಿಲಿಂಡರ್‌ ಆಕಾರದ ಘಂಟೆಗಳು ನನ್ನ ಗಮನ ಸೆಳೆದವು. ಮತ್ತೆ ನೋಡಿದರೆ ಎಲ್ಲ ದೇವಾಲಯಗಳಲ್ಲೂ ಅಂತಹ ಗಂಟೆಗಳಿವೆ. ರಿಂಪುಂಗ್‌ ಝೋಂಗ್‌ ಎಂಬುದು ಇನ್ನೊಂದು ಪ್ರೇಕ್ಷಣೀಯ ಸ್ಥಳ. ಅಲ್ಲಿ ಅರ್ಧ ದಿನ ನೋಡುವಷ್ಟು ವಿಷಯ ವಸ್ತುಗಳಿವೆ.  
       
ಪಾರೋದಲ್ಲಿ ಒಂದು ಸುಂದರ ಸಂಗ್ರಹಾಲಯ (museum) ಇದೆ. ಅದರ ಹೆಸರು ತಾ ಝೋಂಗ್‌ ((Ta Dzong). ಅದು ಭೂತಾನದ ರಾಷ್ಟ್ರೀಯ ಮ್ಯೂಸಿಯಂ ಸಹ. ಅಲ್ಲಿ ಭೂತಾನದ ಚಿತ್ರಕಲೆ, ತಾಮ್ರದ ವಿಗ್ರಹಗಳು, ಮುಖವಾಡಗಳು, ಕುಶಲ ವಸ್ತುಗಳು, ಸತ್ತ ಪ್ರಾಣಿಗಳ ಮತ್ತು ಬಣ್ಣ ಬಣ್ಣದ ಚಿಟ್ಟೆಗಳ ರಕ್ಷಿತ ದೇಹಗಳು, ಬಟ್ಟೆಬರೆಗಳು, ಆಭರಣಗಳು ಇತ್ಯಾದಿಗಳಿವೆ. ಅದನ್ನು ನೋಡಿ ಹೊರಬಂದಾಗ ಕಾಣಿಸುವುದು “ಪಾರೋ’ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುಂದರ ನೋಟ. ವಿಮಾನ ನಿಲ್ದಾಣವು ಬೆಟ್ಟದ ಕೆಳಗೆ ಕಣಿವೆಯಲ್ಲಿದೆ. ಎರಡು ಪರ್ವತಗಳ ಮಧ್ಯೆ ಇರುವ ಕಣಿವೆಯಲ್ಲಿ ವಿಮಾನ ಇಳಿಯುವುದನ್ನು ನೋಡುವುದೇ ಒಂದು ಚಂದ. ಅಲ್ಲಿಗೆ ನಿತ್ಯವೂ 5 ವಿಮಾನಗಳು ಬಂದು ಹೋಗುತ್ತವೆ. ಅಲ್ಲಿ ವಿಮಾನ ಹಾರಿಸುವುದಕ್ಕೆ ವಿಶೇಷ ತರಬೇತಿ ಪಡೆದ ಪೈಲೆಟ್‌ಗಳಿದ್ದಾರೆ. ಈ ವಿಮಾನ ನಿಲ್ದಾಣವು 1968ರಲ್ಲಿ ಭಾರತದ ಸಹಯೋಗದೊಂದಿಗೆ ನಿರ್ಮಾಣವಾಗಿದೆ. ಇತ್ತೀಚೆಗೆ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳು ನಿರ್ಮಾಣವಾದರೂ ಅವು ಕಾರ್ಯರೂಪಕ್ಕೆ ಬಂದಿಲ್ಲ.

“ಪಾರೋ’ ನಗರದ ಸಮೀಪ ತಕ್ತಸಂಗ್‌ ಹೆಸರಿನ ಪರ್ವತವಿದೆ. ಅದಕ್ಕೆ ಎಂದೂ ಹೇಳುತ್ತಾರೆ. ಅದು ಚಾರಣಕ್ಕೆ ಸೂಕ್ತ ಸ್ಥಳ. ತುಂಬಾ ಕಡಿದಾದ ಪರ್ವತ. ಚಾರಣಕ್ಕೆ 5ರಿಂದ 6 ತಾಸು ಸಮಯ ಬೇಕು. ಅನುಭವಿ ಹಾಗೂ ಉತ್ಸಾಹಿ ತರುಣರಿಗೆ ಮಾತ್ರ ಈ ಪರ್ವತ ಚಾರಣಕ್ಕೆ ಸೂಕ್ತ.
 
ಪಾರೋವಿಗೆ ಹೋದವರು ಭೂತಾನದ ಪುರಾತನ ಚಿಕಿತ್ಸೆಯೆನಿಸಿದ ಹಾಟ್‌ ಸ್ಟೋನ್‌ ಭಾತ್‌ (hot stone bath)ನ ಅನುಭವ ಪಡೆಯಬೇಕು. ಒಂದು ಜಾತಿಯ ಕಲ್ಲಿನ ಹರಳುಗಳನ್ನು ಬೆಂಕಿಯಲ್ಲಿ ಕಾಯಿಸಿ ನೀರಿಗೆ ಹಾಕುತ್ತಾರೆ. ಅದರಿಂದ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು . ಇದು ಬೆನ್ನು ನೋವು, ಮೊಣಕಾಲು ನೋವು, ಸಂಧಿವಾತ ಇತ್ಯಾದಿಗಳನ್ನು ಶಮನಗೊಳಿಸುತ್ತದೆಯಂತೆ.

ಭೂತಾನದ ಹಣ (Tub bath) ಯ ಹೆಸರು NGULTRUM.. ಇದಕ್ಕೆ ಚುಟುಕಾಗಿ Nu ಎಂದು ಕರೆಯುತ್ತಾರೆ. ನಮ್ಮ ಒಂದು ರೂಪಾಯಿಗೆ ಒಂದು Nu ಸಮ. ಭೂತಾನದಲ್ಲಿ ಎಲ್ಲ ಕಡೆಯೂ ಭಾರತದ ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಾರೆ. ಆದುದರಿಂದ ನಮಗೆ ಕರೆನ್ಸಿ ಸಮಸ್ಯೆ ಬರುವುದಿಲ್ಲ.

ಭೂತಾನ್‌ ಪ್ರವಾಸವೆಂದರೆ ಸಾಮಾನ್ಯವಾಗಿ ಪಾರೋ, ಪುನಖ ಮತ್ತು ತಿಂಪು (Thimphu) ನಗರಗಳ ಭೇಟಿ. ತಿಂಪು ಅಲ್ಲಿನ ರಾಜಧಾನಿ. ಮಾರನೆಯ ದಿವಸ ನಾವು  ಪುನಖದತ್ತ ಪ್ರಯಾಣ ಬೆಳೆಸಿದೆವು. ಸುಮಾರು ನಾಲ್ಕು ತಾಸಿನ ಪ್ರಯಾಣ. ಬೆಟ್ಟ, ಕಾಡುಗಳ ಮೂಲಕ ಹಾದು ಹೋಗುವ ಒಳ್ಳೆಯ ರಸ್ತೆ. ದಾರಿ ಮಧ್ಯೆ 3,100 ಮೀಟರ್‌ ಎತ್ತರದಲ್ಲಿ ಒಂದು ಶಿಖರ. ಅದರ ಹೆಸರು DOCHULA PASS  ಎಂದು. ನಮ್ಮ ಬಸ್‌ ಅಲ್ಲಿ ಸ್ವಲ್ಪ ಹೊತ್ತು ನಿಂತಿತು. 

Advertisement

ಬಸ್ಸಿನಿಂದ ಇಳಿದು ನಾವು ಪ್ರಕೃತಿಯ ರುದ್ರ ಮನೋಹರ ದ‌ೃಶ್ಯಗಳನ್ನು ನೋಡಿದೆವು. ಅಲ್ಲಿ ಒಂದೇ ಕಡೆ 108 ಸ್ತೂಪಗಳಿವೆ. ಅವು ಒಂದೇ ದಿನದಲ್ಲಿ ನಿರ್ಮಾಣವಾದವು ಎಂದು ಹೇಳುತ್ತಾರೆ. ಅದಕ್ಕೆ ಅದರದ್ದೇ ಆದ ಚರಿತ್ರೆಯಿದೆ.  Dochula passನಲ್ಲಿ ಸ್ವಲ್ಪ ಆಮ್ಲಜನಕದ ಕೊರತೆಯಿದೆ. ನಮ್ಮಲ್ಲಿ ಕೆಲವರಿಗೆ ಉಸಿರಾಡಲು ಕಷ್ಟವಾಯಿತು. ಚಳಿ ಹವೆಯು ನಮ್ಮ ಸ್ವೆಟರ್‌, ಶಾಲುಗಳು ಉಪಯೋಗಕ್ಕೆ ಬರುವಂತೆ ಮಾಡಿತು.  
    
ದೋಚುಲದಲ್ಲಿ ಬಿಸಿ ಬಿಸಿ ಕಾಫಿ ಕುಡಿದು ಮುಂದಿನ ಪಯಣ ಪುನಖದ ಕಡೆಗೆ. ಸುಮಾರು ಎರಡು ತಾಸು ಘಟ್ಟ ಇಳಿಯುತ್ತಾ ಸಾಗಿದೆವು. ದಾರಿಯುದ್ದಕ್ಕೂ ಹಚ್ಚ ಹಸಿರಿನ ವನಸಿರಿ, ಅದರಲ್ಲಿ ಬಣ್ಣ ಬಣ್ಣದ ಹೂವುಗಳು. ಮತ್ತೂಂದೆಡೆ ಮೇಲಿಂದ ಹರಿದು ಬರುತ್ತಿದ್ದ ಶುದ್ಧ ತಂಪು ನೀರಿನ ಝರಿ. ಅಲ್ಲಿ ನಿಂತು ಆ ಸೌಂದರ್ಯವನ್ನು ನೋಡಿ ಆನಂದಿಸಿದ್ದಲ್ಲದೆ ನೀರಿನ ರುಚಿಯನ್ನೂ ನೋಡಿದೆವು. ಆ ನೀರನ್ನು ಬಾಟಿÉಂಗ್‌ ಮಾಡಿ ಮಾರುತ್ತಾರೆ ಎಂದು ಗೈಡ್‌ ಹೇಳಿದ. 

ನಮ್ಮ ಪಯಣ ಮುಂದುವರಿದಂತೆ ಸೆಕೆ ಎನಿಸತೊಡಗಿತು. ಏಕೆಂದರೆ, ನಾವು ಸಾಕಷ್ಟು ಕೆಳಗೆ ಇಳಿದಿದ್ದೆವು. ಇದ್ದಕ್ಕಿದ್ದಂತೆ ಚಾಲಕ ಬಸ್‌ ನಿಲ್ಲಿಸಿದ. ಗೈಡ್‌ ಚಿಮಿ ಲಖಾಂಗ್‌ ದೇವಸ್ಥಾನದ ಕಡೆಗೆ ಹೋಗಲು ಮಾರ್ಗದರ್ಶನ ಮಾಡಿದ. ಅಪ್ಪಟ ಹಳ್ಳಿ ದಾರಿ, ಗೋಧಿಯ ಹೊಲಗಳ ಮಧ್ಯೆ ಎರಡು ಕಿ.ಮೀ. ನಡೆದು ಹೋಗುತ್ತಿದ್ದಾಗ ನನ್ನ ಬಾಲ್ಯದ ಜೀವನ ನೆನಪಾಗಿ “ಸವಿಸವಿ ನೆನಪು ಸಾವಿರ ನೆನಪು’ ಎಂದು ಹಾಡತೊಡಗಿದಾಗ ತುಸು ಎತ್ತರದ ದಿಣ್ಣೆಯಂತಹ ಜಾಗದಲ್ಲಿ ಒಂದು ಪುರಾತನ ಮಂದಿರ ಕಾಣಿಸಿತು. ಅದುವೇ ಚಿಮಿ ಲಖಂಗ್‌. ಭೂತಾನೀಯರು ಅಲ್ಲಿಗೆ ಗಣನೀಯ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲರ ಕೈಯಲ್ಲೂ ಪುಟ್ಟ ಪುಟ್ಟ ಕಂದಮ್ಮಗಳು. ಆ ಜನರನ್ನು ಮಾತನಾಡಿಸಿದಾಗ ಗೊತ್ತಾಗಿದ್ದ  ವಿಚಾರ ಆ ದೇವರು ಸಂತಾನವನ್ನು ಕರುಣಿಸುತ್ತಾನಂತೆ. ಆ ಜನರು ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತಿದ್ದರಂತೆ. 

ಪುನಖ ಅಲ್ಲಿಂದ ತುಸು ದೂರ ಅಷ್ಟೆ. ಪುನಖ ಜಿಲ್ಲಾ ಕೇಂದ್ರ ಅಂತ ಕರೆಸಿಕೊಳ್ಳುವ ಹಳ್ಳಿ ಎಂದರೆ ತಪ್ಪಾಗಲಾರದು. ಎರಡು ಪರ್ವತಗಳ ಮಧ್ಯದ ವಾಂಗುª ((wangdue) ಕಣಿವೆಯಲ್ಲಿ ಪುನಖ ಎಂಬ ಊರು. ಅಲ್ಲಿ ಮೋಚು ಮತ್ತು ಪೋಚು ಹೆಸರಿನ ಎರಡು ನದಿಗಳ ಸಂಗಮ. ಇವೆರಡರಲ್ಲಿ ಒಂದು ಗಂಡು ನದಿಯಂತೆ, ಇನ್ನೊಂದು ಹೆಣ್ಣು ನದಿಯಂತೆ. ಈ ನದಿಗಳ ಮಧ್ಯಭಾಗದ ಭೂಮಿಯಲ್ಲಿ, ಮೋಚು ನದಿಯ ದಡದ ಮೇಲೆ ಒಂದು ತುಂಬಾ ಸುಂದರ ಝೋಂಗ್‌  (dzong) 1637ರಲ್ಲಿ ನಿರ್ಮಾಣವಾಯಿತು. ಅದರ ನಿಜವಾದ ಹೆಸರು Pungtang Dechen Photrang Dzong . . ಇದರ ಅರ್ಥ ಅತೀವ ಆನಂದದ ತಾಣ- place of great happiness ಎಂದು. ಬೌದ್ಧ ಭಿಕ್ಷುಗಳು ಚಳಿಗಾಲದಲ್ಲಿ ತಂಗುವ ಜಾಗವಿದು. 1987ರಲ್ಲಿ ಸಣ್ಣ ಬೆಂಕಿ ಅವಘಡ ಆಗಿ ತುಸು ಹಾನಿಯಾಗಿತ್ತು. ಅದರೂ ಅದನ್ನು ಸರಿಪಡಿಸಿಕೊಂಡಿದ್ದಾರೆ. 
 
ನಮ್ಮ ಮುಂದಿನ ಹಾಗೂ ಕೊನೆಯ ಪ್ರವಾಸ ತಾಣ ಭೂತಾನದ ರಾಜಧಾನಿ ತಿಂಪು. ತಿಂಪುವಿನಲ್ಲಿ ದಿನವಿಡೀ ನೋಡಿದರೂ ಮುಗಿಯದಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಜಗತ್ತಿನ ಅತೀ ಹೆಚ್ಚು ಎತ್ತರದ ಬುದ್ಧನ ಪ್ರತಿಮೆ ಇರುವುದು ಅಲ್ಲಿಯೇ. 

– ಅಳಿಕೆ ಗಣಪತಿ ಭಟ್‌ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next