Advertisement

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಗಿಡಮರ ಬೆಳೆಸಿ

09:26 PM Sep 07, 2019 | Lakshmi GovindaRaju |

ಮೈಸೂರು: ಇತ್ತೀಚಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಈ ಬಗ್ಗೆ ಎಲ್ಲರೂ ಗಮನಹರಿಸುವುದು ಅಗತ್ಯವಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಶ್ರೀ ಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌, ಶ್ರೀ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಮತ್ತು ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಾಣಿವಿಲಾಸ ಕಾಲೇಜು ಆವರಣದಲ್ಲಿ ನಡೆದ ಶ್ರೀ ವಾಣಿ ಫೆಸ್ಟ್‌-2019ರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಷ್ಟ ಸರಿಪಡಿಸಿ: ಪರಿಸರದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ. ನಾಡಿನಲ್ಲಿ ಸಂಭವಿಸುತ್ತಿರುವ ಅತಿವೃಷ್ಟಿ-ಅನಾವೃಷ್ಟಿಯನ್ನು ಹತೋಟಿಗೆ ತರಲು ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು ಒಳ್ಳೆಯ ವಾತಾವರಣ ಸೃಷ್ಟಿಸಬೇಕಿದೆ. ಆಗಿರುವ ನಷ್ಟವನ್ನು ಹೇಗೆ ಸರಿಪಡಿಸಬೇಕಿದೆ. ಯಾವ ಕಾರ್ಯಕ್ರಮ ಮಾಡಿದರೂ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಹಿಂದಿನ ದಿನಗಳಿಗಿಂತ ಇಂದು ಶೇ.80ರಷ್ಟು ಹಸಿರು ಕಡಿಮೆಯಾಗಿದೆ. ರೈತರಿಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಈ ಕುರಿತು ಎಲ್ಲರೂ ಗಮನಹರಿಸುವುದು ಅಗತ್ಯ ಎಂದರು.

ಮೈಸೂರು ಅಭಿವೃದ್ಧಿ: ಶ್ರೀ ವಾಣಿವಿಲಾಸ ಸನ್ನಿಧಾನ ಅವರು 10 ವರ್ಷ ರೀಜೆಂಟರಾಗಿ ಕಾರ್ಯನಿರ್ವಹಿಸಿದಾಗ ಮೈಸೂರು ಎಷ್ಟೊಂದು ಅಭಿವೃದ್ಧಿಯಾಗಿದೆ. ದಕ್ಷಿಣ ಏಷಿಯಾದಲ್ಲಿ ಮೊದಲ ಬಾರಿ ವಿದ್ಯುತ್‌ ಬೀದಿದೀಪಗಳು ಬಳಕೆಗೆ ಬಂದಿತು. ಶಿವನಸಮುದ್ರದಲ್ಲಿ ಪ್ರಥಮ ಜಲವಿದ್ಯುತ್‌ ಸ್ಥಾವರ ನಿರ್ಮಾಣವಾಯಿತು. ನೀರಾವರಿ ಯೋಜನೆಗಳು ರೂಪುಗೊಂಡು ರೈತರಿಗೆ ಸಹಾಯವಾಯಿತು. ಇನ್ನು ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ಕೈಗಾರಿಕೆ, ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಯಿತು. ಇವರಿಬ್ಬರನ್ನು ನಾವು ಎಂದೆಂದಿಗೂ ನೆನೆಯಬೇಕು ಎಂದು ಹೇಳಿದರು.

ಆಹಾರ ಮಳಿಗೆ: “ವಾಣಿ ಫೆಸ್ಟ್‌’ನಲ್ಲಿ ವಿದ್ಯಾರ್ಥಿನಿಯರು ವಿವಿಧ ಆಹಾರ ಮಳಿಗೆಗಳನ್ನು ತೆರೆದಿದ್ದರು. ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ರಾಜೇ ಅರಸ್‌, ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್‌ ಎನ್‌.ಅರಸ್‌, ಸಹಕಾರ್ಯದರ್ಶಿ ಶ್ರೀಕಂಠರಾಜೇ ಅರಸ್‌, ಟ್ರಸ್ಟಿಗಳಾದ ಬಾಲಚಂದ್ರ ರಾಜೇ ಅರಸ್‌, ಪದ್ಮಶ್ರೀ ಅರಸ್‌, ಪದವಿ ಕಾಲೇಜಿನ ಡೀನ್‌ ಮಲ್ಲಿಕಾರ್ಜುನ್‌, ಪ್ರಾಂಶುಪಾಲರಾದ ಅನಿತಾ ಹಾಗೂ ಭಾಗ್ಯಶ್ರೀ, ಪ್ರೌಢಶಾಲಾ ಮುಖ್ಯಶಿಕ್ಷಕಿ ಅನ್ನಪೂರ್ಣ, ಕಮಲ, ಸರಿತಾ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next