Advertisement
ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಸಭೆಯಲ್ಲಿ ಆಯುಕ್ತ ಪಿ.ಎಸ್. ಕಾಂತರಾಜು 2018-19ನೇ ಸಾಲಿನಲ್ಲಿ 32,335 ಲಕ್ಷ ರೂ. ಆದಾಯ ಹಾಗೂ 32,170.32 ಲಕ್ಷ ರೂ. ವೆಚ್ಚದ, 164.68 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
Related Articles
Advertisement
ಬಡಾವಣೆ ನಿರ್ಮಾಣ: ಮೈಸೂರು ತಾಲೂಕು ಬಲ್ಲಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆ ರಚಿಸಲು 484.24 ಎಕರೆ ಪ್ರದೇಶಕ್ಕೆ 248 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಇಲ್ಲಿ ರೈತರ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಲು 5 ಕೋಟಿ ರೂ. ಕಾಯ್ದಿರಿಸಲಾಗಿದೆ.
ಕೆಂಚಲಗೂಡು ಹಾಗೂ ಸುತ್ತಮುತ್ತಲಿನ ಇತರೆ ಗ್ರಾಮಗಳ ರೈತರು ಮುಡಾ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಿಸಲು ಜಮೀನು ನೀಡಲು ಆಸಕ್ತಿ ತೋರಿದ್ದಾರೆ. ಕಾಲಮಿತಿಯೊಳಗೆ ಬಡಾವಣೆ ರಚಿಸಿ, ನಿವೇಶನ ಹಂಚಿಕೆ ಪ್ರಕ್ರಿಯೆ ಮಾಡಿದರೆ 5 ರಿಂದ 6 ಸಾವಿರ ನಿವೇಶನ ಹಂಚಿಕೆ ಸಾಧ್ಯವಾಗಲಿದೆ. ಇದಕ್ಕಾಗಿ 5 ಕೋಟಿ ರೂ. ಕಾಯ್ದಿರಿಸಲಾಗಿದೆ.
ಹಿಂದುಳಿದ ವರ್ಗದವರು ಮತ್ತು ಇತರೆ ವರ್ಗದವರಿಗೆ ಎಲ್‌ಐಜಿ ಮತ್ತು ಇಡಬ್ಲೂಎಸ್ ಮನೆಗಳನ್ನು ನೆಲ ಅಂತಸ್ತು ಸೇರಿದಂತೆ ನಾಲ್ಕು ಮಹಡಿಗಳುಳ್ಳ ಬಹು ಮಹಡಿ ಕಟ್ಟಡ ನಿರ್ಮಾಣ ಮಾಡಲು 5 ಕೋಟಿ ರೂ. ಕಾಯ್ದಿರಿಸಲಾಗಿದೆ.
ಮಿಲೇನಿಯಂ ವೃತ್ತ ಅಭಿವೃದ್ಧಿ: ಮೈಸೂರು ನಗರದ ಮಿಲೇನಿಯಂ ವೃತ್ತದಲ್ಲಿ ರಾಜಮಾತೆ ಕೆಂಪನಂಜಮ್ಮಣ್ಣಿ ದೇವಿ ಅವರ ಪ್ರತಿಮೆ ಸ್ಥಾಪನೆ ಹಾಗೂ ವೃತ್ತದ ಅಭಿವೃದ್ಧಿ ಕಾಮಗಾರಿಗೆ 3.25 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕಾಮಗಾರಿ ಅನುಷ್ಠಾನಕ್ಕಾಗಿ ಪ್ರಸ್ತುತ ಸಾಲಿನಲ್ಲಿ 1 ಕೋಟಿ ರೂ. ಕಾಯ್ದಿರಿಸಲಾಗಿದೆ.
ವಿಜಯನಗರ ಒಂದನೇ ಹಂತದಿಂದ ವಾಟರ್ ಟ್ಯಾಂಕ್ ಹಾಗೂ ಹೆಬ್ಟಾಳು ಕಲ್ಯಾಣ ಮಂಟಪದ ಮುಂಭಾಗದಿಂದ ಹೊರ ವರ್ತುಲ ರಸ್ತೆಗೆ ಸೇರುವ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು 4.98 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಯಾದವಗಿರಿ ಬಡಾವಣೆಯ ರೈಲ್ವೆ ಕೆಳ ಸೇತುವೆಯಿಂದ ಬೃಂದಾವನ ನಗರದವರೆಗೆ ಮೈಸೂರು- ಅರಸೀಕೆರೆ ರೈಲು ಮಾರ್ಗದ ಪಶ್ಚಿಮಕ್ಕೆ ಸಮಾನಾಂತರ ರಸ್ತೆ ನಿರ್ಮಾಣ ಕಾಮಗಾರಿಯ 3 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಆಟೋ ನಗರ: ಮಂಡಕಳ್ಳಿ ಗ್ರಾಮದ ಸರ್ವೇ ನಂ.64 ಮತ್ತು 65ರಲ್ಲಿ ಸುಮಾರು 15.15 ಎಕರೆ ಮುಡಾ ಜಾಗದಲ್ಲಿ ಆಟೋ ನಗರ ನಿರ್ಮಿಸಲು ಉದ್ದೇಶಿಸಲಾಗಿದ್ದು, 9ಕೋಟಿ ಮೊತ್ತದ ಅಂದಾಜುಪಟ್ಟಿಯ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಯೋಜನೆಗೆ ಪ್ರಸ್ತುತ 1 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ಸೌರ ವಿದ್ಯುತ್ ದೀಪ: ಮುಡಾ ವಿವಿಧ ಬಡಾವಣೆಗಳ ಉದ್ಯಾನಗಳಿಗೆ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು. ಪ್ರಾಯೋಗಿಕವಾಗಿ ಮುಡಾದಿಂದ ಅಭಿವೃದ್ಧಿಪಡಿಸಿರುವ ದಟ್ಟಗಳ್ಳಿ ಬಡಾವಣೆಯ ಮಧುವನ ಉದ್ಯಾನವನ, ವಿಜಯ ನಗರ ಬಡಾವಣೆಯಲ್ಲಿನ ಉದ್ಯಾನವನಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1 ಕೋಟಿ ರೂ. ಕಾಯ್ದಿರಿಸಲಾಗಿದೆ.
ಉದ್ಯಾನವನ: ನಗರ ಹಸುರೀಕರಣ ಸಂಬಂಧ ಮುಡಾ ವ್ಯಪ್ತಿಯ ಉದ್ಯಾನವನಗಳಲ್ಲಿ ಹಾಗೂ ಪ್ರಮುಖ ರಸ್ತೆಗಳ ಬದಿಗಳಲ್ಲಿ ಗಿಡಗಳನ್ನು ನೆಡಲು 10 ಲಕ್ಷ ರೂ. ಕಾಯ್ದಿರಿಸಲಾಗಿದೆ. ಮುಡಾ ವ್ಯಾಪ್ತಿಯ ಆಯ್ದ ಉದ್ಯಾನವನಗಳನ್ನು ಹೈಟೆಕ್ ಉದ್ಯಾನವನಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1.5 ಕೋಟಿ ಕಾಯ್ದಿರಿಸಲಾಗಿದೆ.
ಮೈಸೂರು ನಗರದಲ್ಲಿ ಸ್ಥಾಪಿತವಾಗಿರುವ ಐಎಚ್‌ಸಿಎನ್ ಸಂಸ್ಥೆಯು ಎಫ್ಎಂ ರೇಡಿಯೋ ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಸ್ಟೇಷನ್‌ನಿಂದ ಮುಡಾ ಧ್ಯೇಯೋದ್ದೇಶಗಳನ್ನು ತಿಳಿಸುವ ಮತ್ತು ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 5 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಮಲಿನ ನೀರು ಶುದ್ಧೀಕರಣ ಘಟಕಗಳ ನಿರ್ಮಾಣಕ್ಕೆ 25 ಲಕ್ಷ ರೂ., 27 ಖಾಸಗಿ ಬಡಾವಣೆಗಳನ್ನು ಮೈಸೂರು ಮಹಾ ನಗರಪಾಲಿಕೆಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಈ ಬಡಾವಣೆಗಳಲ್ಲಿ ಬಾಕಿ ಇರುವ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಲು ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಮುಡಾ ಆಸ್ತಿಗಳ ಸಂರಕ್ಷಣೆಗಾಗಿ ಪ್ರಾಧಿಕಾರದಲ್ಲಿಯೇ ವಿಶೇಷ ಕಾರ್ಯಪಡೆ ರಚಿಸಲು ಉದ್ದೇಶಿಸಲಾಗಿದ್ದು, ಈ ವಿಶೇಷ ಕಾರ್ಯಪಡೆಯಲ್ಲಿ ಇಬ್ಬರು ಎಸ್‌ಐ, ಮೂವರು ಎಎಸ್‌ಐ, ನಾಲ್ವರು ಮುಖ್ಯ ಪೇದೆಗಳು ಮತ್ತು ಆರು ಜನ ಪೊಲೀಸ್ ಪೇದೆಗಳನ್ನು ನಿಯೋಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಗುಣಮಟ್ಟ ಪರಿಶೀಲನೆ: ಮುಡಾ ಕೈಗೊಳ್ಳುತ್ತಿರುವ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲು 3ನೇ ವ್ಯಕ್ತಿ/ ಸಂಸ್ಥೆ ನೇಮಿಸಲು 50 ಲಕ್ಷ ರೂ. ಕಾಯ್ದಿರಿಸಿದೆ. ಮೈಸೂರು ಮಹಾ ನಗರ ಯೋಜನೆ ಅನ್ವಯ ಹೊರ ಪರಿಧಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ರಸ್ತೆಯ ಅಲೈನ್‌ಮೆಂಟ್ ಅಂತಿಮಗೊಳಿಸಿ ಯೋಜನಾ ವರದಿ ತಯಾರಿಸಲು ಪ್ರಸ್ತುತ ಸಾಲಿನಲ್ಲಿ 10 ಲಕ್ಷ ರೂ. ಮೀಸಲಿಡಲಾಗಿದೆ.
ನಕ್ಷೆ ಮಂಜೂರಾತಿಗಾಗಿ ಏಕ ಗವಾಕ್ಷಿ ಯೋಜನೆ ಜಾರಿಗಾಗಿ 10 ಲಕ್ಷ ರೂ., ಮಹಾ ಯೋಜನೆಯನ್ನು ಪುನಾ ಪರಿಷ್ಕರಿಸಲು ಪ್ರಸ್ತುತ ಸಾಲಿನಲ್ಲಿ 50 ಲಕ್ಷ ರೂ., ನಗರ ಯೋಜನಾ ಯೋಜನೆಗಳನ್ನು ಅನುಷ್ಠಾನಗೊಳಿಸಲು 40 ಲಕ್ಷ ರೂ., ನೀರು ಸರಬರಾಜು ಯೋಜನೆಗಾಗಿ 5ಕೋಟಿ ರೂ., ಭೂ ಸ್ವಾಧೀನ ವೆಚ್ಚಗಳಿಗಾಗಿ 100 ಕೋಟಿ ರೂ., ಸಿಬ್ಬಂದಿ, ಆಡಳಿತ ಮತ್ತು ಇತರೆ ವೆಚ್ಚಗಳಿಗಾಗಿ 32.20ಕೋಟಿ ರೂ. ಕಾಯ್ದಿರಿಸಲಾಗಿದೆ. ಜತೆಗೆ ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಡಳಿತ ತರಬೇತಿಗಾಗಿ 1 ಕೋಟಿ ರೂ. ಮೀಸಲಿಡಲಾಗಿದೆ ಎಂದು ವಿವರಿಸಿದ್ದಾರೆ.
ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕಳಲೆ ಕೇಶವಮೂರ್ತಿ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಕೆ.ವಿ.ನಾರಾಯಣಸ್ವಾಮಿ, ಸದಸ್ಯರಾದ ಸಂದೇಶ್ ಸ್ವಾಮಿ, ಶಿವಮಲ್ಲು, ಸೋಮಶೇಖರ್ ಇತರರು ಇದ್ದರು.