Advertisement
ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹ: ಅಂತರ್ಜಲ ಇಲಾಖೆಯು ಪ್ರತಿ ತಿಂಗಳು ಅಂತರ್ಜಲ ಮಟ್ಟವನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸುತ್ತಿದ್ದು, ಮುಂಗಾರು ಮಳೆಯಿಂದ ಜಿಲ್ಲೆಯ ಹಾಸನ, ಆಲೂರು, ಸಕಲೇಶಪುರ, ಅರಕಲಗೂಡು ಮತ್ತು ಹೊಳೆನರಸೀಪುರದಲ್ಲಿ ಅಂತರ್ಜಲದ ಮಟ್ಟ ಸುಧಾರಿಸಿದ್ದರೆ, ಹಿಂಗಾರು ಮಳೆಯಿಂದ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನ ಕೆರೆ – ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಅಂತರ್ಜಲ ಮಟ್ಟ ಏರಿದೆ.
Related Articles
Advertisement
6737 ಕಾಮಗಾರಿ ಅನುಷ್ಠಾನ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಗಳಿಂದ 82 ಕೋಟಿ ರೂ.ವೆಚ್ಚದಲ್ಲಿ ಜಲ ಸಂರಕ್ಷಣಾ ಉದ್ದೇಶದ 6737 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ನೀರಿಗೆ ಹಾಹಾಕಾರವಿಲ್ಲ: ಸ್ವಚ್ಛಗೊಂಡ ಕೆರೆ, ಕಲ್ಯಾಣಿಗಳಲ್ಲಿ ವರುಣಾಗಮನದಿಂದ ಈಗ ನೀರು ತುಂಬಿಕೊಂಡಿದೆ. ಕಿಂಡಿ, ಕಮಾನು ಅಣೆಕಟ್ಟುಗಳು ( ಚೆಕ್‌ಡ್ಯಾಂ)ಗಳು ತುಂಬಿ ಹರಿದಿವೆ. ಇದೆಲ್ಲದರ ಪರಿಣಾಮ ಅಂತರ್ಜಲ ಮಟ್ಟ ಸುಧಾರಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ವರ್ಷ ಬೇಸಿಗೆಯಲ್ಲೂ ಜನ, ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಲಾರದು ಎಂಬ ಆಶಾಭಾವ ಮೂಡಿದೆ.
ಕೊಳೆವೆ ಬಾವಿಗಳು ಪುನರುಜ್ಜೀವನ: ಹಸಿರು ಭೂಮಿ ಪ್ರತಿಷ್ಠಾನವ, ಗ್ರಾಮಕೆರೆ ಅಭಿವೃದ್ಧಿ ಸಮಿತಿಗಳು, ಸ್ಕೌಟ್ಸ್ ಮತ್ತು ಗೈಡ್, ಪರಿಸರಾಸಕ್ತರು, ಸ್ವಯಂ ಸೇವಕರು ಶ್ರಮದಾನದ ಮೂಲಕ ವಿವಿಧ ಜಾಗೃತಿ ಚಟುವಟಿಕೆಗಳ ಮೂಲಕ ಜಿಲ್ಲಾದ್ಯಂತ ಹತ್ತಾರು ಕೆರೆಕಟ್ಟೆ, ಕಲ್ಯಾಣಿಗಳ ಪುನರುಜ್ಜೀವನ ಕಾರಣರಾಗಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲವೆಂಬಂತೆ ಹಾಸನದ ಜವೇನಹಳ್ಳಿ ಕೆರೆ, ಹುಣಸಿನಕೆರೆ, ಸತ್ಯಮಂಗಲ, ಗವೇನಹಳ್ಳಿ, ಹಾಸನ ತಾಲೂಕಿನ ಶಾಂತಿಗ್ರಾಮ ಕೆರೆಗಳು ಸೇರಿದಂತೆ ಹತ್ತಾರು ಕೆರೆಗಳು ಜೀವ ಕಳೆ ತುಂಬಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಇದೇ ರೀತಿ ದೊಡ್ಡಗಟ್ಟ, ಮರಟಿಗೆರೆ ಕಿರು ತಡೆ ಅಣೆಕಟ್ಟು, ಅರೇಹಳ್ಳಿ ಕೆರೆ, ದೊಡ್ಡಕೊಂಡಗೊಳ ಕೆರೆ, ಗಂಜಿಕೆರೆ ಪುಟ್ಟ ಕಲ್ಯಾಣಿ ಸೇರಿದಂತೆ ಅರ್ಧನಹಳ್ಳಿ ಕಲ್ಯಾಣಿ ಸೇರಿದಂತೆ ಹತ್ತಾರು ಕೆರೆಕಟ್ಟೆಗಳು ಕಲ್ಯಾಣಿಗಳು ಜಲಶಕ್ತಿ ಅಭಿಯಾನದ ಪ್ರತಿಫಲವಾಗಿ ಗೋಚರಿಸುತ್ತಿವೆ. ಕೆಲವು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮೇಲೆರಿದೆ. ಸತ್ಯವಂಗಲ ಕೆರೆ, ಗವೇನಹಳ್ಳಿ ಕೆರೆಗಳು ಭರ್ತಿಯಾಗಿರುವುದರಿಂದ ಹಾಸನ ನಗರದ ವಿವಿಧ ಬಡಾವಣೆಗಳ ಕೊಳೆವೆ ಬಾವಿಗಳು ಪುನರುಜ್ಜೀವನಗೊಂಡಿವೆ.
10.33 ಮೀಟರ್ ಏರಿಕೆ: 2019ನೇ ಸಾಲಿನ ಅಕ್ಟೋಬರ್ ದಾಖಲಿಸಿರುವ ಅಂತರ್ಜಲ ಮಟ್ಟಗಳನ್ನು ತಾಲೂಕುವಾರು ಸರಾಸರಿ ಕ್ರೋಢೀಕರಿಸಿದಾಗ ಆಲೂರು ತಾಲೂಕಿನಲ್ಲಿ ಕನಿಷ್ಠ 4.54 ಮೀಟರ್, ಅರಸೀಕೆರೆ ತಾಲೂಕಿನಲ್ಲಿ ಗರಿಷ್ಠ 26.14 ಮೀ ಗಳಿದ್ದು, ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 10.33 ಮೀಟರ್ ಏರಿಕೆಯಾಗಿದೆ.
8 ತಾಲೂಕುಗಳು ಅಂತರ್ಜಲ ಏರಿಕೆ: 2018ನೇ ಅಕ್ಟೋಬರ್ ಮತ್ತು 2019ನೇ ಅಕ್ಟೋಬರ್ ಮಾಹೆಯ ತಾಲೂಕವಾರು ಸರಾಸರಿ ಅಂತರ್ಜಲ ಮಟ್ಟಗಳನ್ನು ಹೋಲಿಸಿದಾಗ ಹಾಸನ ಜಿಲ್ಲೆಯ ಎಲ್ಲಾ 8 ತಾಲೂಕುಗಳು ಅಂತರ್ಜಲ ಏರಿಕೆಯಾಗಿದೆ. ಸರಾಸರಿ ಕನಿಷ್ಠ ಏರಿಕೆ ಸಕಲೇಶಪುರ ತಾಲೂಕಿನಲ್ಲಿ 0.78 ಮೀಟರ್ ಹಾಗೂ ಸರಾಸರಿ ಗರಿಷ್ಠ ಏರಿಕೆ ಅರಸೀಕೆರೆ ತಾಲೂಕಿನಲ್ಲಿ 9.83 ಮೀಟರ್ ಏರಿಕೆಯಾಗಿರುವುದು ಕಂಡು ಬಂದಿದೆ. ಎಂದು ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಧಾ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಮೆಚ್ಚುಗೆ: ಜಲಶಕ್ತಿ ಅಭಿಯಾನ ಫಲ ನೀಡಿದೆ. ಈಗ ಎರಡು ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿರುವ ಅಭಿಯಾನ ಜಿಲ್ಲಾದ್ಯಂತ ಇದು ನಿರಂತರವಾಗಿ ನಡೆಯಬೇಕು, ಪ್ರತಿಯೊಬ್ಬ ಪ್ರಜೆಯೂ ಜಲರಕ್ಷಕನಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ಈ ಬಾರಿಯ ಗ್ರಾಮ ಪಂಚಾಯತಿಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಇಲಾಖೆಗಳು ಉದ್ಯೋಗ ಖಾತರಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಜಲ ಸಂವರ್ಧನಾ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದವು. ಉದ್ಯೋಗ ಖಾತರಿ ಯೋಜನೆಯೂ ಸಮರ್ಪಕವಾಗಿ ಬಳಕೆಯಾಗಿದ್ದು ಫಲ ನೀಡಿದೆ. ಮುಂದಿನ ವರ್ಷಗಳಲ್ಲೂ ಈ ಅಭಿಯಾನ ಮುಂದುವರಿಯಲಿ ಎಂದು ಜಿಲ್ಲಾಧಿಕಾರಿ ಆಶಿಸಿದ್ದಾರೆ.
ಜಿಪಂ ಸಿಇಒ ಹರ್ಷ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್ ಅವರು ಜಲಶಕ್ತಿ ಅಭಿಯಾನದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಲ ಗ್ರಾಮ ಪಂಚಾಯತಿಗಳು, ಸೇವಾ ಸಂಸ್ಥೆಗಳು ಜಲ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಅಂತರ್ಜಲ ಮಟ್ಟ ಸುಧಾರಿಸಿದೆ: ಈ ವರ್ಷ ಉತ್ತಮ ಮಳೆಯಿಂದಾಗಿ ಬಹುಪಾಲು ಕೆರೆ- ಕಟ್ಟೆಗಳು, ಕಲ್ಯಾಣಿ ಕಟ್ಟೆಗಳು ತುಂಬಿದ್ದರಿಂದ ಸಹಜವಾಗಿ ಅಂತರ್ಜಲ ಮಟ್ಟ ಸುಧಾರಿಸಿದೆ. ಅರಸೀಕೆರೆ ತಾಲೂಕಿನ ಎಲ್ಲ ಹಳ್ಳಿಗಳಿಗೂ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಪೂರೈಸುವ ಯೋಜನೆ ಅನುಷ್ಠಾನಗೊಂಡಿದೆ. ಇದರಿಂದ ಕೊಳೆವೆ ಬಾವಿಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ ಎಂದು ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಸುಧಾ ಮಾಹಿತಿ ನೀಡಿದರು. ಮುಂದೆ ಬೇಸಿಗೆಯಲ್ಲಿ ಮತ್ತೆ ಅಂತರ್ಜಲದ ಬಳಕೆ ಅಧಿಕವಾದಾಗ ನೀರಿನ ಮಟ್ಟ ಸಹಜವಾಗಿ ಇಳಿಮುಖವಾಗಬಹುದು. ಆದರೆ ಇನ್ನಷ್ಟು ಕೆರೆಕಟ್ಟೆಗಳನ್ನು ಪುನರುಜ್ಜೀವನಗೊಳಿಸಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿದರೆ ಅಂತರ್ಜಲಮಟ್ಟ ಸುಧಾರಣೆಯಾಗುತ್ತಿದೆ ಎಂದರು.
* ಎನ್.ನಂಜುಂಡೇಗೌಡ