ದೇವನಹಳ್ಳಿ: ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸಿ ಅಂರ್ತಜಲ ಮಟ್ಟ ಹೆಚ್ಚಿಸಿರುವುದು ವಿಶ್ವಕ್ಕೇ ಮಾದರಿ ಆಗಿದೆ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಆವತಿ ಗ್ರಾಮದ ಕೆರೆಗೆ ನಾಗವಾರ, ಹೆಬ್ಟಾಳ ತ್ಯಾಜ್ಯ ನೀರು ಹರಿಯುತ್ತಿರುವುದನ್ನು ವೀಕ್ಷಣೆ ಮಾಡಿ ಮಾತನಾಡಿದರು. ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ, ಚಿಕ್ಕಬಳ್ಳಾ ಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನಾಗವಾರ, ಹೆಬ್ಟಾಳ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸುವ ಯೋಜನೆ ಜಾರಿಗೆ ತರಲಾಯಿತು. ಕಳೆದ 20-30 ವರ್ಷಗಳಿಂದ ಸರಿಯಾಗಿ ಮಳೆ ಆಗದೆ ಕೆರೆಗಳು ತುಂಬಿರಲಿಲ್ಲ.
ಈಗ ಸಂಸ್ಕರಿತ ತ್ಯಾಜ್ಯ ನೀರು ಕೆರೆಗಳಿಗೆ ಬಂದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಮತ್ತು ಸಾರ್ವಜನಿಕರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದರು. ಹೆಬ್ಟಾಳದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಘಟಕ ಕಾಮಗಾರಿ ನಡೆಯುತ್ತಿದ್ದು ಕೊರೊನಾದಿಂದಾಗಿ 3 ತಿಂಗಳ ಕಾಲ ಘಟಕ ಪ್ರಾರಂಭಗೊಳ್ಳಲು ವಿಳಂಬ ವಾಗುತ್ತಿದೆ. ಈಗ 80-90 ಎಂಎಲ್‌ಡಿ ನೀರು ಬರುತ್ತಿದೆ. ಮುಂದೆ ಹೆಬ್ಟಾಳದ ಘಟಕ ಪ್ರಾರಂಭವಾದರೆ 200 ಎಂಎಲ್‌ಡಿ ತನಕ ನೀರು ಬರುತ್ತದೆ ಎಂದರು.
ಮಾಜಿ ಶಾಸಕರಾದ ಮುನಿನರಸಿಂಹಯ್ಯ, ಕೆ. ವೆಂಕಟಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ. ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನ ಕುಮಾರ್, ಉಪಾಧ್ಯಕ್ಷ ಶಾಂತ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್ .ಪಿ.ಮುನಿರಾಜು, ಜಿಪಂ ಸದಸ್ಯರಾದ ಕೆ.ಸಿ.ಮಂಜುನಾಥ್, ರಾಧಮ್ಮ, ಕಸಬ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ರವಿಕುಮಾರ್, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್ .ನಾಗೇಶ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಎತ್ತಿನಹೊಳೆ ಕಾಮಗಾರಿ ಕುಂಠಿತ: ದೇವನಹಳ್ಳಿ 12 ಕೆರೆ, ಬ್ಯಾಟರಾಯನಪುರ ಹೋಬಳಿ 12 ಕೆರೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರಿನ ಕೆರೆ ಸೇರಿ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ 80 ಕೆರೆ ತುಂಬುತ್ತವೆ. ವೃಷಭಾವತಿ ವ್ಯಾಲಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರದ 78 ಕೆರೆ, ನೆಲಮಂಗಲ 50 ಕೆರೆ ತುಂಬಿಸುವ ಯೋಜನೆ, ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಹೊಸಕೋಟೆ ಕೆರೆ ತುಂಬಿಸುವ ಯೋಜನೆ ಅಂತಿಮ ರೂಪುರೇಷೆ ದೊರೆತಿದೆ. ಆದರೆ, ಎತ್ತಿನಹೊಳೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಭೂಮಿಗೆ ದರ ನಿಗದಿ ಮಾಡುವ ಪ್ರಕ್ರಿಯೆ ಬಾಕಿಯಿಟ್ಟು ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಶಾಸಕ ಕೃಷ್ಣಬೈರೇಗೌಡ ದೂರಿದರು.