ಲಿಂಗಸುಗೂರು: ರಾಜ್ಯದ 16 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ನೀರಿನ ಗಂಭೀರ ಸಮಸ್ಯೆ ಇದೆ. ಅಂತರ್ಜಲ ಮರುಪೂರಣಕ್ಕಾಗಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕೇಂದ್ರೀಯ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕ ಡಾ| ಎ.ಸುಬ್ಬರಾಜು ಹೇಳಿದರು.
ಕೇಂದ್ರೀಯ ಅಂತರ್ಜಲ ಮಂಡಳಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಅಂತರ್ಜಲ ಸಮಸ್ಯೆಗಳು ಹಾಗೂ ಸಹಭಾಗಿತ್ವ ಆಧಾರಿತ ಅಂತರ್ಜಲ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಿಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಅರಣ್ಯ, ಪರಿಸರ ಹಾಗೂ ಭೂಮಿಯಲ್ಲಿನ ಖನಿಜ ಸಂಪತ್ತು ನಾಶದಿಂದಾಗಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಜಲಸಂಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಳೆ ತೀವ್ರ ಅಭಾವ ಒಂದಡೆಯಾದರೆ ಅತಿಯಾದ ಕೊಳವೆಬಾವಿಗಳ ಕೊರೆತದಿಂದಾಗಿ ಭೂಮಿಗೆ ಹಾನಿಯಾಗುತ್ತಿದೆ. ಅಂತರ್ಜಲ ಮಟ್ಟ ತೀವ್ರ ಕುಸಿತಗೊಂಡು ನೈಸರ್ಗಿಕ ಸಂಪನ್ಮೂಲವಾದ ನೀರು ಸಹ ಅಭಾವವಾಗುತ್ತಿದೆ. ಗಿಡಗಳನ್ನು ಹೆಚ್ಚಾಗಿ ಬೆಳೆಸಲು, ಕರೆಗಳಲ್ಲಿ ಹೆಚ್ಚು ನೀರು ಸಂಗ್ರಹಗೊಳ್ಳುವಂತೆ ಹೊಳೆತ್ತಲು, ಚೆಕ್‌ಡ್ಯಾಂ ನಿರ್ಮಿಸಲು ಆದ್ಯತೆ ನೀಡುವ ಕಾರ್ಯ ಆಗಬೇಕಿದೆ. ಇದರೊಂದಿಗೆ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಆದ್ಯತೆ ನೀಡುವ ಮೂಲಕ ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಬೇಕಿದೆ. ಈ ಬಗ್ಗೆ ಕೇಂದ್ರ ಅಂತರ್ಜಲ ಮಂಡಳಿ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಉಪ ಕಾರ್ಯದರ್ಶಿ ವೈ. ಎಂ.ಎಂ.ಯೂಸೂಫ್, ತಾಪಂ ಇಒ ಪ್ರಕಾಶ, ನರೇಗಾ ಎಡಿ ಅಮರೇಶ, ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿ ಡಾ| ಎಂ.ಎ. ಫಾರೂಖೀ, ಮಂಡಳಿ ಪ್ರಭಾರಿ ಅಧಿ ಕಾರಿ ಎ.ಸುರೇಶ ಇದ್ದರು.
ಕಳೆದ ದಶಕಗಳಿಂದ ಬೇಕಾಬಿಟ್ಟಿಯಾಗಿ ಕೊಳವೆಬಾವಿ ಕೊರೆಸಿ ನೀರು ಎತ್ತುವುದು ಹೆಚ್ಚುತ್ತಿದೆ. ಇದರಿಂದ ಅಂತರ್ಜಲಮಟ್ಟ
ತೀವ್ರಗತಿಯಲ್ಲಿ ಕುಸಿದು ಹನಿ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಭೂಮಿ ಮೇಲೆ ಜೀವಸಂಕುಲ ಉಳಿವಿಗಾಗಿ ಜಲಮೂಲ ರಕ್ಷಿಸುವುದು ನಮ್ಮೆಲರ ಹೊಣೆಯಾಗಿದೆ.
ಡಾ| ಎ. ಸುಬ್ಬರಾಜು, ಕೇಂದ್ರೀಯ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು.