Advertisement

ಅಂತರ್ಜಲ ವೃದ್ಧಿ: ಅಟಲ್‌ ಭೂ ಜಲ ಯೋಜನೆ ಜಾರಿಗೆ ಸಿದ್ಧತೆ

12:00 AM Jan 28, 2020 | Lakshmi GovindaRaj |

ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗಿರುವ ರಾಜ್ಯದ 14 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಆ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗೆ ಅಟಲ್‌ ಭೂಜಲ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಜತೆಗೆ ಕೆರೆಗಳನ್ನು ಸಂಪರ್ಕಿಸುವ ಕಾಲುವೆ ಮಾರ್ಗಗಳ ಸರ್ವೇಗೆ ಮುಂದಾಗುತ್ತಿದ್ದು, ಒತ್ತುವರಿ ತೆರವುಗೊಳಿಸಿ ಕಾಲುವೆಗಳಲ್ಲಿ ನೀರು ಹರಿಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲು ಸಜ್ಜಾಗುತ್ತಿದೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾ ರರಿಗೆ ಈ ವಿಷಯ ತಿಳಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯದ 14 ಜಿಲ್ಲೆಗಳಲ್ಲಿ ಗಂಭೀರ ಪ್ರಮಾಣದಲ್ಲಿ ಅಂತರ್ಜಲ ಬಳಸುತ್ತಿರುವುದು ಗೊತ್ತಾಗಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣಕ್ಕಾಗಿ ಅಟಲ್‌ ಭೂಜಲ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಪ್ರಾಯೋಗಿಕವಾಗಿ 14 ಜಿಲ್ಲೆಗಳಲ್ಲೂ ತಲಾ ಒಂದು ತಾಲೂಕಿನಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರವು ಯೋಜನೆಯಡಿ ಐದು ವರ್ಷಗಳಿಗೆ 1,200 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಹಿಂದೆಲ್ಲಾ ಕೆರೆಗಳ ಸಂಪರ್ಕ ಕಾಲುವೆಗಳಿದ್ದವು. ಆದರೆ ಬಹಳಷ್ಟು ಕಡೆ ಒತ್ತುವರಿಯಾಗಿದ್ದು, ನೀರು ಸರಾಗವಾಗಿ ಹರಿಯದಂತಾಗಿದೆ. ಆ ಹಿನ್ನೆಲೆಯಲ್ಲಿ ಕೆರೆ ಸಂಪರ್ಕ ಕಾಲುವೆಗಳ ಸಮೀಕ್ಷೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿರುವ ತಾಲೂಕುಗಳಲ್ಲಿ ಒಂದು ಪಂಚಾಯ್ತಿಯಲ್ಲಿ ಒಂದೆರಡು ಕೊಳವೆ ಬಾವಿ ಕೊರೆದು ಮೊದಲಿನ ಹಾಗೂ ನಂತರದ ಅಂತರ್ಜಲ ಮಟ್ಟವನ್ನು ಕುಳಿತಲ್ಲೇ ಪರಿಶೀಲಿಸುವ ವ್ಯವಸ್ಥೆ ತರಲಾಗುವುದು.

ರಾಜ್ಯದಲ್ಲಿ 37,000 ಕೆರೆಗಳಿದ್ದು, ಇದರಲ್ಲಿ 3,700 ಕೆರೆಗಳಷ್ಟೇ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು ಉಳಿದವು ಜಿಲ್ಲಾ ಪಂಚಾಯ್ತಿ ನಿಯಂತ್ರಣದಲ್ಲಿವೆ. ಕಾಲುವೆಗಳಲ್ಲಿ ನೀರು ಹರಿಸಿದಾಗ ಮಾತ್ರ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗುವುದು ಎಂದು ಹೇಳಿದರು.

ಟ್ರಸ್ಟ್‌ ಕಾಯ್ದೆ ಜಾರಿಗೆ ಚಿಂತನೆ: ಟ್ರಸ್ಟ್‌ ಹೆಸರಿನಲ್ಲಿ ದತ್ತಿ ಧಾರ್ಮಿಕ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆ ಸೇರಿದಂತೆ ಇತರೆ ಟ್ರಸ್ಟ್‌ನ ಭೂಮಿ ಪರಭಾರೆ ಮಾಡುವುದು ಸೇರಿದಂತೆ ಇತರೆ ವ್ಯಾಜ್ಯಗಳ ನಿಯಂತ್ರಣಕ್ಕಾಗಿ ಟಸ್ಟ್‌ ಕಾಯ್ದೆ ಸರ್ಕಾರ ಚಿಂತನೆ ನಡೆಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಟ್ರಸ್ಟ್‌ನ ಹೆಸರಿನಲ್ಲಿ ಕೆಲವೆಡೆ ಅವ್ಯವಹಾರ ನಡೆದಿರುವ ಆರೋಪಗಳಿವೆ.

Advertisement

ಮುಖ್ಯವಾಗಿ ಟ್ರಸ್ಟಿಗಳಾಗಿದ್ದವರು ಟ್ರಸ್ಟ್‌ನ ಭೂಮಿಯನ್ನು ಮಾರಾಟ ಮಾಡಿ ಇಲ್ಲವೇ ಮಾರಾಟಕ್ಕೆ ಯತ್ನಿಸಿ ಸಾಕಷ್ಟು ಭೂವ್ಯಾಜ್ಯಗಳು ಸೃಷ್ಟಿ ಯಾಗುತ್ತಿದ್ದು, ಇವುಗಳಿಗೆ ಪರಿಹಾರವಿಲ್ಲದಂತಿದೆ. ಆ ಹಿನ್ನೆಲೆಯಲ್ಲಿ ಟ್ರಸ್ಟ್‌ ಕಾಯ್ದೆ ಜಾರಿಗೆ ಚಿಂತನೆ ನಡೆದಿದೆ ಎಂದು ಹೇಳಿದರು. ದಶಕದ ಹಿಂದೆ ಟ್ರಸ್ಟ್‌ ಕಾಯ್ದೆ ಜಾರಿಗೆ ಪ್ರಯತ್ನ ನಡೆದು ರಾಜ್ಯಪಾಲರ ಅಂಕಿತಕ್ಕೂ ಸಲ್ಲಿಕೆಯಾಗಿತ್ತು. ಆದರೆ ಶುಲ್ಕ ನಿಗದಿಪಡಿ ವಿಚಾರದಲ್ಲಿ ಸಮಸ್ಯೆಯಾಗಿ ಪ್ರಸ್ತಾವ ಹಿಂಪಡೆಯಲಾಗಿತ್ತು.

ಇದೀಗ ಮತ್ತೆ ವಿಧೇಯಕ ಮಂಡಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು. ಸಂಪುಟ ಪುನಾ ರಚನೆ ಬಗ್ಗೆ ಈವರೆಗೆ ಚರ್ಚೆಯಾಗಿಲ್ಲ ಎಂದು ಮಾಧುಸ್ವಾಮಿ ಹೇಳಿದರು. ಚಿಕ್ಕನಾಯಕನಹಳ್ಳಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪದೇ ಪದೆ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ, ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದರು.

ಯಾವ್ಯಾವ ಜಿಲ್ಲೆಗಳು?
* ಕೋಲಾರ: ಶ್ರೀನಿವಾಸಪುರ, ಕೋಲಾರ, ಮಾಲೂರು, ಮುಳಬಾಗಿಲು, ಬಂಗಾರಪೇಟೆ
* ಚಿಕ್ಕಬಳ್ಳಾಪುರ: ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ
* ತುಮಕೂರು: ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ತಿಪಟೂರು, ಶಿರಾ, ತುಮಕೂರು
* ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
* ರಾಮನಗರ: ಕನಕಪುರ, ರಾಮನಗರ
* ಚಿಕ್ಕಮಗಳೂರು: ಕಡೂರು
* ಚಿತ್ರದುರ್ಗ: ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ
* ದಾವಣಗೆರೆ: ಜಗಳೂರು, ಹರಪನಹಳ್ಳಿ, ಚನ್ನಗಿರಿ
* ಬಳ್ಳಾರಿ: ಹಗರಿ ಬೊಮ್ಮನಹಳ್ಳಿ
* ಬಾಗಲಕೋಟೆ: ಬಾದಾಮಿ, ಬಾಗಲಕೋಟೆ
* ಗದಗ: ಗದಗ, ರೋಣ
* ಬೆಳಗಾವಿ: ರಾಮದುರ್ಗ, ಅಥಣಿ
* ಚಾಮರಾಜನಗರ: ಗುಂಡ್ಲುಪೇಟೆ
* ಹಾಸನ:ಅರಸೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next