ಮುಂಬೈ: ಇಡೀ ದೇಶದಲ್ಲಿ ಲಾಕ್‌ಡೌನ್ ಇದ್ದರೂ ಆಹಾರ ಮತ್ತು ದಿನಸಿ ಪದಾರ್ಥಗಳ ಪೂರೈಕೆಗೆ ತಡೆ ಹೇರಿಲ್ಲ. ಇದರ ಪರಿಣಾಮ ಮಾರಾಟದಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಲಾಕ್‌ಡೌನ್ ಹೇರುವ ಮುನ್ನ ಜನ ಮುಗಿಬಿದ್ದು ಖರೀದಿಸಿದ್ದೂ, ಇದಕ್ಕೆ ಇನ್ನೊಂದು ಕಾರಣ. ಫ್ಯೂಚರ್ ಗ್ರೂಪ್, ಮೋರ್, ರಿಲಯನ್ಸ್ ಫ್ರೆಶ್, ಸ್ಪೆನ್ಸರ್ಸ್ ರೀಟೇಲ್, ನೇಚರ್ಸ್ ಬಾಸ್ಕೆಟ್ ನಂತಹ ಕಂಪನಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇ.15ರಿಂದ 20ರಷ್ಟು ಮಾರಾಟ ಏರಿದೆ. ಇದು ದೀಪಾವಳಿ ವೇಳೆ ಜನರು ಖರೀದಿಸಿದ್ದಕ್ಕಿಂತ ಜಾಸ್ತಿ!
ರಿಲಯನ್ಸ್ ದಾಖಲೆ: ರಿಲಯನ್ಸ್ ಫ್ರೆಶ್‌ನಲ್ಲಿ ಜನರು ಶೇ.44ರಷ್ಟು ಹೆಚ್ಚುವರಿ ಖರೀದಿ ಮಾಡಿದ್ದಾರೆ. ಅಂದರೆ ಜನವರಿ-ಮಾರ್ಚ್ ಅವಧಿಯಲ್ಲಿ 10,043 ಕೋಟಿ ರೂ.
ಮೌಲ್ಯದ ವಸ್ತುಗಳು ಖರೀದಿಯಾಗಿ, ದಾಖಲೆಗೆ ಕಾರಣವಾಗಿದೆ.
ಅಂತರ್ಜಾಲದಲ್ಲೂ ಸಿಕ್ಕಾಪಟ್ಟೆ ಸದ್ದು: ಗ್ರಾಫರ್ಸ್, ಬಿಗ್‌ಬಾಸ್ಕೆಟ್‌ನಂತಹ ಅಂತ ರ್ಜಾಲ ಖರೀದಿ ತಾಣದಲ್ಲೂ ಜನ ಮುಗಿಬಿದ್ದು ಖರೀದಿಸಿದ್ದಾರೆ. ಮಾರ್ಚ್- ಏಪ್ರಿಲ್‌ನಲ್ಲಿ ಈ ಸಂಸ್ಥೆಗಳು ದಾಖಲೆಯ ಮಾರಾಟ ಕಂಡಿವೆ. ವಿಶೇಷವೆಂದರೆ ಆರಂಭದಲ್ಲಿ ಧಾನ್ಯ, ಹಿಟ್ಟು, ಅಕ್ಕಿ ಹೀಗೆ ಕೊಳ್ಳುತ್ತಿದ್ದ ಜನ ಈಗ ಯೋಚನೆ ಬದಲಿಸಿದಂತಿದೆ. ತಕ್ಷಣ ಸಿದ್ಧಪಡಿಸಬಹುದಾದ ನೂಡಲ್ಸ್, ಪಾಸ್ತಾ, ಕುರುಕಲು, ಬ್ರೆಡ್ ಮಾರಾಟ ಪ್ರಮಾಣ ಹೆಚ್ಚಿದೆ. ಗ್ರಾಫರ್ಸ್‌ನಲ್ಲಿ ಒಟ್ಟು ಖರೀದಿಯ ಪ್ರಮಾಣ ಈ ಅವಧಿಯಲ್ಲಿ 416 ಕೋಟಿ ರೂ.ಗೇರಿದೆ.