ಬೆಂಗಳೂರು : ‘ನಾ ನಾಯಕಿ’ ಕಾರ್ಯಕ್ರಮ ಮಾಡಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೂಲಕ ಸೋಮವಾರ ಗೃಹಲಕ್ಷ್ಮಿ ಯೋಜನೆ’ಯನ್ನು ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಸರಣಿ ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರ ನಡೆಸಿದೆ.
”ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಬಲಿಕರಣ ಬಿಡಿ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನೇ ಎಂದೂ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಇದೀಗ ಗೃಹಲಕ್ಷ್ಮಿ ಎಂಬ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವುದು ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ. ಈ ಡೋಂಗಿತನದ ಅರಿವು ರಾಜ್ಯದ ಜನರಿಗಿದೆ” ಎಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನ್ತಿ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವುದಾಗಿ ಘೋಷಿಸಿದೆ.
”ಮಹಿಳಾ ಸಬಲೀಕರಣ ವಿಚಾರದಲ್ಲಿ ಬಿಜೆಪಿ ಸರ್ಕಾರ ಮಾಡಿರುವಂಥ ಸಾಧನೆಗಳನ್ನು ಕರ್ನಾಟಕದಲ್ಲಿ ಇನ್ಯಾವುದೇ ಸರ್ಕಾರ ಮಾಡಿಲ್ಲ. ಮಹಿಳಾ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ 43,188 ಕೋಟಿ ರೂ. ಅನುದಾನ ಒದಗಿಸಿದೆ.” ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮಹಿಳೆಯರಿಂದ ಸ್ಥಾಪಿತವಾದ ಉದ್ದಿಮೆಗಳಿಗೆ ಸಾಮರ್ಥ್ಯಾಭಿವೃದ್ಧಿ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಹಾಗೂ ಕೌಶಲ್ಯ ತರಬೇತಿ ನೀಡಲು ರಾಜ್ಯದ 50,000 ಸ್ವಸಹಾಯ ಕೇಂದ್ರಗಳನ್ನು ಗುರುತಿಸಲಾಗಿದೆ. ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಅಸ್ಮಿತೆ ಎಂಬ ಹೆಸರಿನಲ್ಲಿ ಮಾರಾಟ ಮೇಳಗಳನ್ನು ನಮ್ಮ ಸರ್ಕಾರ ನಡೆಸುತ್ತಾ ಬಂದಿದೆ. ಬಾಲ್ಯ ವಿವಾಹ ತಡೆಗೆ ಇರುವ ಸ್ಫೂರ್ತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರ ಭದ್ರತೆ, ಬಿಜೆಪಿಯ ಬದ್ಧತೆ ಎಂದು ಟ್ವೀಟ್ ಗಳ ಮೂಲಕ ಹೇಳಿಕೊಂಡಿದೆ.
ಬೊಮ್ಮಾಯಿ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಕಟಿಬದ್ಧವಾಗಿದ್ದು ಮಹಿಳೆಯರ ಕ್ಷೇಮಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಾರ್ಮಿಕರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.