Advertisement
ಶುಕ್ರವಾರ ಬೆಳಗ್ಗೆ 8.50 ರ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪಾಟ್ನಾ ಕಡೆ ತೆರಳಬೇಕಿದ್ದ ಪಾಟ್ನಾ (ಸಂಘಮಿತ್ರ)ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಒಂದನೇ ಪ್ಲಾಟ್‌ಫಾರಂ ರೈಲ್ವೆ ಹಳಿ ಪಕ್ಕದಲ್ಲಿ ಗ್ರೆನೆಡ್ ಮಾದರಿಯ ವಸ್ತು, ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕಾಣಿಸಿಕೊಂಡಿದೆ.
Related Articles
Advertisement
ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆ ವಸ್ತುವನ್ನು ನಿಲ್ದಾಣದಿಂದ ಹೊರಗೆ ತಗೆದುಕೊಂಡು ಹೋಗಿ, ಪೊಲೀಸರು ಅದು ಸ್ಫೋಟಕವಲ್ಲ ಎಂದು ತಿಳಿಸಿದ ಬಳಿಕ ಪ್ರಯಾಣಿಕರ ಆತಂಕ ದೂರವಾಯಿತು. ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರ ವಿಳಂಬವಾಯಿತು. ಕೆಲ ಗಂಟೆಗಳ ನಂತರ ಮತ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಯತಾಸ್ಥಿತಿಗೆ ಮರಳಿತು.
ಸಂಶಯಾಸ್ಪದ ವಸ್ತು ಪತ್ತೆ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್, ರೈಲ್ವೆ ಐಜಿಪಿ ರೂಪಾ, ರೈಲ್ವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಡಿಸಿಪಿ ರವಿ ಡಿ. ಚನ್ನಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರತೆ ಹೆಚ್ಚಳ: ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಕೂಡಲೆ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಯಿತು. ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ಕಂಡುಬಂದವರನ್ನು ತಪಾಸಣೆ ನಡೆಸಲಾಯಿತು. ನಿಲ್ದಾಣದ ಸುತ್ತಲು ಇರುವ ಅಂಗಡಿ, ಮಳಿಗೆಗಳನ್ನು ಪೊಲೀಸರು ತಪಾಸಣೆ ನಡೆಸಿದರು. ಜತೆಗೆ ಮೆಜೆಸ್ಟಿಕ್, ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಲಾಯಿತು. ಘಟನೆಯಿಂದ ಯಶವಂತಪುರ, ದಂಡು ರೈಲು ನಿಲ್ದಾಣ ಸೇರಿದಂತೆ ಮುಖ್ಯ ರೈಲು ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ನಿಲ್ದಾಣದಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯದಳ, ಶ್ವಾನದಳ ಕರೆಸಿ ತಪಾಸಣೆ ಮಾಡಲಾಯಿತು. ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಪ್ರಯಾಣಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಪತ್ತೆಯಾದ ವಸ್ತು ಯಾವುದು, ಅದನ್ನು ನಿಲ್ದಾಣಕ್ಕೆ ತಂದವರಾರು ಎಂದು ಶೀಘ್ರವೆ ಪತ್ತೆಹಚ್ಚಲಾಗುವುದು.-ಅಲೋಕ್ ಮೋಹನ್, ರೈಲ್ವೆ ವಿಭಾಗದ ಎಡಿಜಿಪಿ