ಬೆಂಗಳೂರು : ನಗರದ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಗ್ರೆನೇಡ್ ಪತ್ತೆಯಾದ ಹಿನ್ನಲೆಯಲ್ಲಿ ನಗರದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವ್ಯಾಪಕ ತಪಾಸಣೆ ನಡೆಸಲಾಗುತ್ತಿದ್ದು, ತನಿಖೆಗೆ 10 ವಿಶೇಷ ತಂಡಗಳನ್ನುರಚಿಸಲಾಗಿದೆ.
ಪೊಲೀಸ್ ಅಧಿಕಾರಿಗಳಾದ ರವಿಚನ್ನಣ್ಣನವರ್, ಮಹಾಂತ್ ರೆಡ್ಡಿ ನೇತೃತ್ವದಲ್ಲಿ 5 ತಂಡಗಳು ತನಿಖೆಗಿಳಿದಿದ್ದು, ರೈಲ್ವೇ ಎಸ್‌ಪಿ ಭೀಮಾಶಂಕರ್ ಗುಳೇದ್ ನೇತೃತ್ವದ5 ತಂಡಗಳು ಕಾರ್ಯಾಚರಣೆಗಿಳಿದಿವೆ.
ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಗ್ರೆನೇಡ್ ಕಂಟ್ರಿಮೇಡ್ ಎಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಗಳ ಪರಿಶೀಲನೆನಡೆಸಲಾಗುತ್ತಿದ್ದು, ಎಲ್ಲಾ ನಿಲ್ದಾಣದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳನ್ನು ಇರಿಸಿ ತಪಾಸಣೆ ಬಿಗಿಗೊಳಿಸಲಾಗಿದೆ.ಪ್ರಯಾಣಿಕರ ಬಳಿಯಿರುವ ವಸ್ತುಗಳನ್ನೂ ತಪಾಸಣೆ ನಡೆಸಲಾಗುತ್ತಿದೆ.
ನಾವು ತನಿಖೆ ನಡೆಸುತ್ತಿದ್ದೇವೆ. ಪತ್ತೆಯಾದ ಗ್ರೆನೇಡ್‌ನ ಸ್ವರೂಪವನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಅಡಿಷನಲ್ ಡಿಜಿಪಿ ಅಲೋಕ್ ಮೋಹನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಗ್ರೆನೇಡ್ ಕಂಡು ಪ್ರಯಾಣಿಕರು ರೈಲ್ವೆ ಸಿಬಂದಿಗೆ ತಿಳಿಸಿದ್ದಾರೆ. ಕೆಲ ಪ್ರಯಾಣಿಕರು ಸ್ಥಳದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ತಕ್ಷಣ ಸ್ಥಳಕ್ಕೆ ರೈಲ್ವೆ ಪೊಲೀಸರು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬಂದಿಗಳು ಆಗಮಿಸಿ ಗ್ರೆನೇಡ್ ಮೇಲೆ ಮರಳಿನ ಚಿಲಗಳನ್ನು ಹಾಕಿ ಮುನ್ನೆಚ್ಚರಿಕೆ ವಹಿಸಿ ಗ್ರೆನೇಡ್ ವಶಕ್ಕೆ ಪಡೆದಿದ್ದರು.
ವಶಕ್ಕೆ ಪಡೆಯಲಾಗಿರುವ ಗ್ರೆನೇಡ್ ನಿಷ್ಕ್ರಿಯ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.