Advertisement

ಹಸಿರು ಕಾಯಲು ಬೇಕು ಕಾವಲು ಸಮಿತಿ

06:00 AM Nov 03, 2018 | |

ನಮ್ಮ ನಗರಗಳ ಬಣ್ಣ ಕಪ್ಪು. ಹೀಗೆ ಹೇಳಿದರೆ ನಿಜಕ್ಕೂ ಬೇಸರ ಪಡುವಂತಿಲ್ಲ. ವಾಯುಮಾಲಿನ್ಯದ ಚರ್ಚೆ ಮತ್ತೆ ಆರಂಭವಾಗಿದೆ. ಹೊಸ ಸಮೀಕ್ಷೆ ಪ್ರಕಾರ ಬೆಳೆಯುವ ತಾರುಣ್ಯ ವಯಸ್ಸಿನಲ್ಲಿರುವ ನಗರಗಳು ಉಸಿರಾಟದ ತೊಂದರೆಯಿಂದ ಬಳಲುವಂತಾಗಿವೆ. ಹಾಗಾದರೆ ಅಭಿವೃದ್ಧಿ ಎಂದರೇನು ಎಂಬುದೇ ಯಕ್ಷಪ್ರಶ್ನೆ.

Advertisement

ಹಸಿರನ್ನು ಜೀವನ ಪರ್ಯಂತ ಹಲವು ಹೆಸರುಗಳಿಂದ ಉಳಿಸುತ್ತಾ, ಸಂರಕ್ಷಿಸುತ್ತಾ ಹಾಗೂ ಪೋಷಿಸುತ್ತಾ ಬಂದಿರುವ ಹಲವು ಹಿರಿಯ ತಲೆಮಾರುಗಳನ್ನು ಕಂಡಿದ್ದೇವೆ. ದೇವರ ಕಾಡು ಎಂಬಿತ್ಯಾದಿ ಪರಿಕಲ್ಪನೆಗಳಿಂದ ನಮ್ಮ ಹಿರಿಯರು ಸಾಕಷ್ಟು ಹಸಿರನ್ನು ಉಳಿಸಿದ್ದಾರೆ. ಹಾಗಾಗಿ ಅದುವೇ ನಮ್ಮ ಊರಿನ ಬಣ್ಣವಾಗಿತ್ತು. ಇಂದಿಗೂ ಆ ನೆನಪು ಹಸುರು ಹಸುರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಒಂದು ಪುಟ್ಟ ಊರಿಗೆ ವರ್ಷಕ್ಕೊಮ್ಮೆ ಹೋಗುವಾಗ ಸುತ್ತಲೂ ಹಸಿರು. ಮಧ್ಯದಲ್ಲಿ ಹಾದು ಹೋದ ಕಪ್ಪು ಟಾರಿನ ರಸ್ತೆ. ರಸ್ತೆ ದಾಟಿ ಕಾಲು ದಾರಿ ಹಿಡಿದರೆ ಸುಮಾರು ಎಲ್ಲಿ ನೋಡಿದರೂ ಹಸಿರೇ. ಮನೆಯ ಅಂಗಳದವರೆಗೂ ಮರಗಳ ನೆರಳು ಬಿಟ್ಟುಕೊಡುತ್ತಿರಲಿಲ್ಲ. ಸದಾ ತಂಪು. ಪಕ್ಕದಲ್ಲೇ ಹರಿವ ಶುಭ್ರ ನದಿ. ಅದರ ತಪ್ಪಲಿನಲ್ಲಿ ಸಂಜೆ ಕುಳಿತರೆ ಬೀಸಿ ಬರುವ ಗಾಳಿ ನಿಜಕ್ಕೂ ಊರಿನ ಬಣ್ಣವನ್ನು ಮತ್ತಷ್ಟು ಕಡು ಹಸಿರಾಗಿಸುತ್ತಿತ್ತು. 

ಬಳಿಕ ನಗರಗಳಿಗೆ ಬಂದ ತಲೆಮಾರುಗಳಲ್ಲಿ ನಾವೂ ಸೇರಿಕೊಂಡಿದ್ದೇವೆ. ಇಲ್ಲೀಗ ಯಾವ ಬಣ್ಣ ಹುಡುಕಿದರೂ ಕಾಣುತ್ತಿಲ್ಲ. ಎಷ್ಟೋ ಬಾರಿ ಗಾದೆಯಂತೆ ಒಂದು ಮಸಿ ಚುಕ್ಕೆ ಎಲ್ಲ ಬಣ್ಣವನ್ನೂ ನುಂಗಿತು ಎಂಬಂತಾಗಿದೆ. ವಸತಿ ಸಮಸ್ಯೆ, ನೀರಿನ ಸಮಸ್ಯೆ ಇತ್ಯಾದಿಗಿಂತಲೂ ಹೆಚ್ಚು ಚರ್ಚೆಯಾಗುವುದೇ ವಾಯುಮಾಲಿನ್ಯದ್ದು. ದಿಲ್ಲಿಯಂತೆ ಮೂಗಿಗೆ ಮಾಸ್ಕ್ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಓಡಾಡುವ ಸ್ಥಿತಿ ಬಂದರೆ ಹೇಗೆ? ಪುಣ್ಯಕ್ಕೆ ಸದ್ಯಕ್ಕೆ ಆ ಸ್ಥಿತಿಯಲ್ಲಿಲ್ಲವಾದರೂ ಸುರಕ್ಷಾ ಕವಚದೊಳಗಡೆ ಏನಿಲ್ಲ. ಯಾವಾಗ ಬೇಕಾದರೂ ಏರು ಪೇರಾಗಬಹುದು. ಇದೊಂದು ಕಲ್ಪನೆ ಸ್ವಲ್ಪ ಅತಿಯೆನಿಸಬಹುದು. ನಮ್ಮ ಆಮ್ಲಜನಕ ಈಗ ಐಸಿಯುನಲ್ಲಿದೆಯೋ ಅಥವಾ ಅದನ್ನು ಅವಲಂಬಿಸಿರುವ ನಾವೇ ಐಸಿಯುನಲ್ಲಿ ಇದ್ದೇವೆಯೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ. 

ಹಾಗೆಂದು ನಗರದಲ್ಲಿ ಹಸಿರು ಬೆಳೆಸುವ ಕೆಲಸವಾಗುತ್ತಿಲ್ಲವೇ? ಆಗುತ್ತಿದೆ. ಒಂದಿಷ್ಟು ಕೋಟಿ ರೂ. ಗಳನ್ನು ನಗರ ಉದ್ಯಾನವನ್ನು ಚೆಂದ ಮಾಡಲಿಕ್ಕೆ ವೆಚ್ಚ ಮಾಡುತ್ತಿವೆ ಸ್ಥಳೀಯ ಸಂಸ್ಥೆಗಳು. ಬೆಂಗಳೂರು ಮಹಾನಗರ ಪಾಲಿಕೆಯೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಆದರೆ ವಿಚಿತ್ರವೆಂದರೆ, ಬಹುತೇಕ ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಮಾಡುತ್ತಿರುವ ಕಾರ್ಯ ಹೇಗಿದೆ ಎಂದರೆ, ಒಂದು ಕೈಯಲ್ಲಿ ನೂರು ರೂ. ಕೊಟ್ಟು, ಮತ್ತೂಂದು ಕೈಯಲ್ಲಿ ಕೋಟಿ ರೂ. ತೆಗೆದುಕೊಳ್ಳುವ ಕೆಲಸವೇ ಹೊರತು ಮತ್ತೇನೂ ಅಲ್ಲ. 

ಅಭಿವೃದ್ಧಿಯೆಂಬ ಅಶ್ವಮೇಧದ ಕುದುರೆಯನ್ನು ಏರಿ ಹೋಗುತ್ತಿರುವಾಗ ಗಾಳಿಯ ಶಬ್ದವೂ ಕೇಳಿಸುವುದಿಲ್ಲವಂತೆ. ಯಾಕೆಂದರೆ ನಾವೂ ಗಾಳಿಯ ವೇಗಕ್ಕಿಂತಲೂ ಹೆಚ್ಚಿನ ಮನೋವೇಗದಲ್ಲಿ ಹೋಗುತ್ತಿರುತ್ತೇವಲ್ಲ..ಅದೇ ಸ್ಥಿತಿ ಇಂದಿನ ಸರಕಾರಗಳದ್ದು. ಈ ಮಾತು ಒಂದು ಸರಕಾರಕ್ಕೆ ಅನ್ವಯಿಸುವಂಥದ್ದಲ್ಲ. ಎಲ್ಲ ರಾಜ್ಯಗಳ, ಕೇಂದ್ರಗಳ ಸರಕಾರಗಳ ಸ್ಥಿತಿ ಇದೇ. ಕಣ್ಣಿಗೆ ಕಾಣುವ ಅಭಿವೃದ್ಧಿಯನ್ನು ಬಯಸಿ ಹೊರಟಿರುವವರಿಗೆ ಹಸಿರು ಆಪ್ಯಾಯಮಾನವೆನಿಸುವುದಿಲ್ಲ; ಬದಲಾಗಿ ಇಷ್ಟವಾಗುವುದು ಕಾಂಕ್ರೀಟ್‌ ಕಟ್ಟಡಗಳೇ, ರಸ್ತೆ ತುಂಬಿಕೊಂಡ ವಾಹನಗಳೇ. 

Advertisement

ನಮ್ಮೂರೇ ಉದಾಹರಣೆ
ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಳ್ಳೋಣ. ರಾಜಾ ಕೆಂಪೇಗೌಡ ಹಾಕಿದ ಗಡಿಕಲ್ಲುಗಳನ್ನು ದಾಟಿ ನಗರ ಬೆಳೆದಿದೆ. ಅದರಲ್ಲೂ ಮೂರ್‍ನಾಲ್ಕು ದಶಕಗಳಲ್ಲಿ ನಗರದ ಎಷ್ಟು ಹಸಿರನ್ನು ನುಂಗಿ ಬೆಳೆದಿದ್ದೇವೆ ಎನ್ನುವುದಕ್ಕೆ ಸುತ್ತಲೂ ಬೆಳೆದಿರುವ ಬೃಹತ್‌ ಕಟ್ಟಡಗಳೇ ಸಾಕ್ಷಿ. ಜತೆಗೆ ಸುಮ್ಮನೆ ರಸ್ತೆಯುದ್ದಕ್ಕೂ ಎದ್ದಿರುವ ನೂರಾರು ಬಡಾವಣೆಗಳು ಸಾಕ್ಷಿ. ಇನ್ನು ಅಂಕಿಅಂಶಗಳಲ್ಲಿ ಹೇಳಬೇಕೆಂದರೆ, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಕ್ಕೆಂದು ಕಳೆದ ಮೂರು ವರ್ಷಗಳಲ್ಲಿ ಸುಮಾರು 530 ಎಕ್ರೆ ಪ್ರದೇಶವನ್ನು ಬಳಸಿಕೊಳ್ಳಲಾಗಿದೆ. ಬೆಂಗಳೂರಿನ ಹವಾಗುಣವನ್ನು, ಆರೋಗ್ಯವನ್ನು, ಅಲ್ಲಿಯ ನಾಗರಿಕರ ಬದುಕನ್ನು ಕಾಯಬೇಕಿದ್ದ ಹಸಿರು ವಲಯದಿಂದ ಇಷ್ಟೂ ಪ್ರದೇಶವನ್ನು ಪಡೆದುಕೊಂಡಿದ್ದು ಎನ್ನುವುದಕ್ಕೆ ಹೆಮ್ಮೆ ಪಡಬೇಕಷ್ಟೇ. ನ್ಯಾಯಾಲಯಗಳು, ನಾಗರಿಕ ಸಂಘಟನೆಗಳು ಹಸಿರು ವಲಯವನ್ನು ಕರಗಿಸಬೇಡಿ ಎಂದು ಕೂಗುತ್ತಿದ್ದರೂ ಅದ್ಯಾವುದೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಸರಕಾರಗಳು ಇಲ್ಲ. ಇದು ಖಂಡಿತಾ ಆರೋಪವಲ್ಲ ; ವಾಸ್ತವ. 

ವ್ಯವಸಾಯೇತರ ಉದ್ದೇಶಕ್ಕೆಂದು ಬಳಸಲಾಗಲು ನಿರ್ಧರಿಸಿರುವ ಈ ಭೂಮಿಯಲ್ಲಿ ಮತ್ತಷ್ಟು ಬೃಹತ್‌ ಕಟ್ಟಡಗಳು, ಮೇಲುಸೇತುವೆಗಳು ತಲೆ ಎತ್ತುತ್ತವೆ. ಇನ್ನಷ್ಟು ಕೈಗಾರಿಕೆಗಳು ಬರುತ್ತವೆ. ಸುತ್ತಲೂ ಒಂದಿಷ್ಟು ಗಿಡಗಳನ್ನು ನೆಟ್ಟು ವಾತಾವರಣ ಕಾಯ್ದುಕೊಳ್ಳುವ ಮಾತು ಹೇಳಲಾಗುತ್ತದೆ. ಬಳಿಕ ಮತ್ತೆ ಅದೇ. ವಾಹನಗಳು ತುಂಬಿ ತುಳುಕುತ್ತವೆ. ಹೊಗೆ ಎಂಬುದು ಆವರಿಸಿಕೊಳ್ಳುತ್ತದೆ. ನಾವು ಉಸಿರುಗಟ್ಟಿಸಿಕೊಂಡು ಬದುಕು ವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇವೆ. 

ಇದಲ್ಲದೇ, ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡ ಹಲವು ಮಂದಿ ಒಂದು ವರ್ಷದಲ್ಲಿ ಸುಮಾರು 1, 500 ಎಕ್ರೆ ಪ್ರದೇಶವನ್ನು ಪರಿವರ್ತಿಸಿಕೊಂಡಿದ್ದಾರೆ. ಇವೆಲ್ಲವೂ ಕೃಷಿ ಉದ್ದೇಶಕ್ಕೆ ಬಳಸಲು ಇದ್ದ ಭೂಮಿ. ಇನ್ನೂ 2 ಸಾವಿರದಷ್ಟು ಅರ್ಜಿಗಳು ಭೂ ಪರಿವರ್ತನೆಗೆ ಕಾಯುತ್ತಿವೆಯಂತೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಇವೆಲ್ಲವೂ ಬೆಂಗಳೂರು ನಗರದ ಆರೋಗ್ಯವನ್ನು ಕಾಪಾಡಬೇಕಾದವು. ಅಲ್ಲಿಗೆ ನಮ್ಮ ಕಥೆ ಏನೆಂದು ಲೆಕ್ಕಹಾಕಿಕೊಳ್ಳೋಣ. 

ನಗರ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಪರಿಸರ ನಿಯಂತ್ರಣ ಮಂಡಳಿಯವರು ಏನು ಮಾಡುತ್ತಿದ್ದಾರೆ? ಇತ್ಯಾದಿ ಪ್ರಶ್ನೆಗಳನ್ನು ಇಟ್ಟುಕೊಂಡು ಇಡೀ ನಗರಗಳನ್ನು ಅಲೆದಾಡಿದರೂ ಸಿಗುವ ಉತ್ತರ ಶೂನ್ಯವೇ. ಉದಾಹರಣೆಗೆ, ನಗರ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿಗಳನ್ನೇ ಕೇಳಿದರೆ ಸಿಗುವ ಉತ್ತರ- “ನಿಜ, ಹಸಿರು ವಲಯ ಎಂಬುದು ನಗರದ ಉಸಿರಾಟಕ್ಕೆ ಬಹಳ ಮುಖ್ಯವಾದುದು. ಆಮ್ಲಜನಕ ವಲಯವದು. ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಒಳ್ಳೆಯದಾಗದು’ ಎನ್ನುತ್ತಾರೆ. “ಹಾಗೆಂದು ಸಂಬಂಧಪಟ್ಟವರಿಗೆ ಹೇಳಬಹುದಲ್ಲ’ ಎಂದು ಕೇಳಿದರೆ, “ಹೇಳಿದ್ದೇವೆ, ಅಂತಿಮ ತೀರ್ಮಾನ ಅವರದ್ದು’ ಎಂದು ಬೊಟ್ಟು ತೋರಿಸಿಬಿಡುತ್ತಾರೆ. ಇಲ್ಲವಾದರೆ, ಏನು ಮಾಡುವುದು, ನಮ್ಮ ಕೈಲಾದದ್ದು ಮಾಡಿದ್ದೇವೆ ಎಂದು ಬಿಡುವುದುಂಟು. 

ಹಸಿರು ವಲಯ ಯಾರಿಗೆ ಬೇಕು ಎಂದು ಕೇಳುವವರೂ ಇದ್ದಾರೆಂದುಕೊಳ್ಳಿ. ಅದೇನೂ ದೊಡ್ಡದಲ್ಲ. ಸುತ್ತಲಿನ ಅಂತರ್ಜಲ ವೃದ್ಧಿಗೆ, ಉತ್ತಮ ಹವಾಗುಣಕ್ಕೆ, ಒಳ್ಳೆಯ ಗಾಳಿಗೆ ಈ ವಲಯ ಬೇಕೇಬೇಕು. ಅದಿಲ್ಲದೇ ನಾವು ಬದುಕುವುದೇ ಕಷ್ಟ. ಅಂಥದ್ದರಲ್ಲೂ ನಮ್ಮ ಅಭಿವೃದ್ಧಿಯೆಂಬ ಅಶ್ವಮೇಧದ ಕುದುರೆಯ ಪಥ ಬದಲಾಗಿಲ್ಲ. 

ನಾವು ಏನು ಮಾಡಬೇಕು ?
ಈ ಪ್ರಶ್ನೆಯನ್ನು ನಾವು ಕೇಳಿಕೊಂಡರಷ್ಟೇ ಅನುಷ್ಠಾನಕ್ಕೆ ಇಳಿಯಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಿಲ್ಲುವ ಪ್ರತೀ ಸ್ಪರ್ಧಿಗಳನ್ನೂ ಈ ಕುರಿತು ಪ್ರಶ್ನಿಸಬೇಕು. ನಾವು ಈಗ ಬರೀ ರಸ್ತೆ, ಒಳಚರಂಡಿ ಬಗ್ಗೆ ಮಾತನಾಡುತ್ತಿದ್ದೇವೆ. ಅದರೊಂದಿಗೆ ಪ್ರಮುಖವಾಗಿ ಹಸಿರು ವಾತಾವರಣ ಬೆಳೆಸಲು ಏನು ಮಾಡುತ್ತೀರಿ ಎಂದು ಕೇಳಿದರಷ್ಟೇ ಸಾಲದು. ಆಗಾಗ್ಗೆ ಪುನರ್‌ ನೆನಪಿಸುತ್ತಿರಬೇಕು. ಜತೆಗೆ ಪ್ರತಿ ಬಡಾವಣೆಗಳಲ್ಲೂ ಇದಕ್ಕಾಗಿ ಕಾವಲು ಸಮಿತಿಗಳನ್ನು ಕಟ್ಟಿಕೊಳ್ಳಬೇಕು. 

ಇದರ ಕೆಲಸ ಮತ್ತೇನೂ ಇಲ್ಲ, ಕೇವಲ ನಗರದ ಹಸಿರನ್ನು ಹೆಚ್ಚಿಸುವುದು, ಹಸಿರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಈ ಸಂದರ್ಭದಲ್ಲಿ ಕಾನೂನು ಹೋರಾಟದಿಂದ ಹಿಡಿದು ಯಾವುದೇ ರೀತಿಯ ಹೋರಾಟಕ್ಕೆ ಸಜ್ಜಾಗುವುದು, ಶಾಸನ ಸಭೆಗಳಲ್ಲೂ ಈ ಕುರಿತು ಪ್ರಸ್ತಾಪಿಸಿ ಗಮನ ಸೆಳೆಯಲು ಪ್ರಯತ್ನಿಸುವುದು. 

ಹೀಗೆ ಇಂಥ ಹತ್ತಾರು ಕ್ರಮಗಳಿಂದ ಒಗ್ಗಟ್ಟಿನಲ್ಲಿ ಮುಂದಾದರೆ ಕರಗುವ ಒಂದಿಷ್ಟು ಹಸಿರನ್ನು ಉಳಿಸಬಹುದು. ಆ ಮೂಲಕ ನಾವು ಉಸಿರಾಡಬಹುದು. ಇಲ್ಲವಾದರೆ ನಮ್ಮ ನಗರದ ಬಣ್ಣ ಕಪ್ಪು ಎಂದು ಹೇಳಲಡ್ಡಿಯಿಲ್ಲ. ಕಪ್ಪು ಹೊಗೆಯ ಮಧ್ಯೆ ಯಾರ ಮುಖವೂ ಕಾಣುವುದಿಲ್ಲ. 

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next