Advertisement

3 ಹಂತದ ನೀರು ಶುದ್ದೀಕರಣಕ್ಕೆ ಸಿಗುತ್ತಾ ಗ್ರೀನ್‌ಸಿಗಲ್‌?

07:08 AM Feb 08, 2019 | Team Udayavani |

ಚಿಕ್ಕಬಳ್ಳಾಪುರ: ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಆಗಬೇಕು. ಘೋಷಣೆ ಯಾಗಿ ನೆನೆಗುದಿಗೆ ಬಿದ್ದಿರುವ ಮೆಡಿಕಲ್‌ ಕಾಲೇಜಿಗೆ ಅನು ದಾನ ಕೊಟ್ಟು ಶೀಘ್ರ ಅಡಿಗಲ್ಲು ಹಾಕಬೇಕು. ಎತ್ತಿನಹೊಳೆ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಹೆಬ್ಟಾಳ, ನಾಗವಾರ ತ್ಯಾಜ್ಯ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು.

Advertisement

ಸದಾ ಬರಪೀಡಿತ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುಕ್ಕೆ ಪರ್ಯಾಯ ಜಲ ಮೂಲಗಳಿಂದ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟು ಜಿಲ್ಲೆಯ ಜೀವನಾಡಿಗಳಾದ ಕೆರೆ, ಕುಂಟೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.

ಇವು, ರಾಜ್ಯ ಸಮ್ಮಿಶ್ರ ಸರ್ಕಾರದ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಲಿರುವ ತಮ್ಮ ದೋಸ್ತಿ ಸರ್ಕಾರದ ಬಜೆಟ್ ಮೇಲೆ ಬರಪೀಡಿತ ಜಿಲ್ಲೆಯ ಜನರ ನಿರೀಕ್ಷೆಗಳ ಜೊತೆಗೆ ಒಕ್ಕೋರಲಿನ ಹಕ್ಕೋತ್ತಾಯವಾಗಿದೆ.

ಪ್ರಧಾನವಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ರೂಪಿಸಿರುವ ಹೆಬ್ಟಾಳ, ನಾಗವಾರ ತಾಜ್ಯ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಹರಿಸಬೇಕೆಂಬ ನೀರಾವರಿ ಹೋರಾಟ ಗಾರರ ಒಕ್ಕೊರಲಿನ ಧ್ವನಿಗೆ ಹಾಗೂ ದಶಕಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ.

ಇಂದಿಗೂ ಮರೀಚಿಕೆ: ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದ ಕೃಷಿ, ರೇಷ್ಮೆ, ಹೈನುಗಾರಿಕೆಯನ್ನು ಪ್ರಧಾನವಾಗಿ ಅವಲಂ ಬಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಜಿಲ್ಲೆಯಾಗಿ ದಶಕ ಕಳೆದರೂ ಜಿಲ್ಲಾಡಳಿತ ಭವನ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಜಿಲ್ಲಾಸ್ಪತ್ರೆ ನಿರ್ಮಾಣಗೊಂಡಿರುವುದು ಬಿಟ್ಟರೆ ಜನರ ಹಣೆ ಬರಹ ಬದಲಿಸುವ ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿ ಯರಿಂಗ್‌ ಕಾಲೇಜುಗಳ ಇಂದಿಗೂ ಮರೀಚಿಕೆಯಾಗಿರುವುದು ಎದ್ದು ಕಾಣುತ್ತಿದೆ.

Advertisement

ನಿರುದ್ಯೋಗ ಸಮಸ್ಯೆಯ ತೀವ್ರತೆಗೆ ಸಾಕ್ಷಿ: ಹಿಂದಿನ ಸಿದ್ದ ರಾಮಯ್ಯ ನೇತೃತ್ವದ ಸರ್ಕಾರದಲ್ಲಿ 2015-16ನೇ ಸಾಲಿನಲ್ಲಿ ಜಿಲ್ಲೆಗೆ ಮಂಜೂರಾದ ವೈದ್ಯಕೀಯ ಕಾಲೇಜು ಇದುವರೆಗೂ ತಲೆಎತ್ತಿಲ್ಲ. ಜಿಲ್ಲೆಯ ದುಡಿಯುವ ಜನರ ಉದ್ಯೋಗದ ಆಸರೆಯಾಗಿ ನಿಲ್ಲುವ ಯಾವುದೇ ರೀತಿಯ ಕೃಷಿ ಆಧಾರಿತ ಕೈಗಾರಿಕೆಗಳು ಜಿಲ್ಲೆಗೆ ಇದುವರೆಗೂ ಪ್ರವೇಶ ಮಾಡದಿರುವುದು ಜಿಲ್ಲೆಯ ನಿರುದ್ಯೋಗ ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿದೆ.

ಸಾಕಷ್ಟು ವಿದ್ಯಾರ್ಥಿಗಳು, ಯುವಜನತೆಯನ್ನು ಅದರಲ್ಲೂ ಕೂಲಿ ಕಾರ್ಮಿಕರನ್ನು ಹೊಂದಿರುವ ಚಿಕ್ಕಬಳ್ಳಾಪುರ, ಬೆಂಗ ಳೂರು-ಹೈದರಾಬಾದ್‌ ನಡುವೆ ರಾಷ್ಟ್ರೀಯ ಹೆದ್ದಾರಿ ಸೌಲಭ್ಯ, ವಿಮಾನ ನಿಲ್ದಾಣ ಕೂಗಳತೆಯ ದೂರದಲ್ಲಿದ್ದರೂ ಜಿಲ್ಲೆ ಮಾತ್ರ ನಿರೀಕ್ಷಿತ ಅಭಿವೃದ್ಧಿಯಿಂದ ದೂರ ಉಳಿದಿದೆ.

ಎಚ್.ಎನ್‌ ವ್ಯಾಲಿ 3 ಹಂತ ಶುದ್ಧೀಕರಣ ಆಗುತ್ತಾ?: ಜಿಲ್ಲೆಗೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರೂಪಿಸಿರುವ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ಧಿಸುವ ಹೆಬ್ಟಾಳ, ನಾಗ ವಾರ ತ್ಯಾಜ್ಯ ನೀರಾವರಿಗೆ ಸಾಕಷ್ಟು ವಿರೋಧ ಇದೆ. ಜತೆಗೆ ಎಚ್.ಎನ್‌ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀ ಕರಣಗೊಳಿಸಬೇಕೆಂಬ ಆಗ್ರಹ ಹೋರಾಟಗಾರರಿಂದ ಕೇಳಿ ಬರುತ್ತಿದೆ.

ಚುನಾವಣೆಗೂ ಮೊದಲೇ ಯೋಜನೆಗೆ ವಿರೋಧ ವ್ಯಕ್ತ ಪಡಿಸಿದ್ದ ಸಿಎಂ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತು ಕೊಟ್ಟು ಯೋಜನೆ ಮುಂದುವರೆಸುತ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೂ ಎತ್ತಿನ ಹೊಳೆ ಯೋಜನೆ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಯೋಜನೆಗೆ ಬೇಕಾದ ಅನುದಾನ ಕೊಟ್ಟು ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ.

ಕೈಗಳಿಗೆ ಕೆಲಸ ನೀಡುವ ಕೈಗಾರಿಕೆ ಬೇಕಿದೆ: ಕಳೆದ ಬಜೆಟ್‌ನಲ್ಲಿ ಚೀನಾ ಮಾದರಿಯಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ನಿರ್ಧರಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಬೈಲ್‌ ಬಿಡಿಭಾಗಗಳ ಉತ್ಪಾದನಾ ಘಟಕ ಷೋಷಿಸಿದ್ದು ಬಿಟ್ಟರೆ ಇದುವರೆಗೂ ಅದು ಕಾರ್ಯಗತವಾಗಿಲ್ಲ. ಕನಿಷ್ಠ ಕೈಗಾರಿಕೆಗೆ ಜಮೀನು ಗುರುತಿಸುವ ಕೆಲಸವೂ ಆಗಿಲ್ಲ. ಹೀಗಾಗಿ ದಶಕಗಳಿಂದಲೂ ದುಡಿಯುವ ಜನತೆ ಕೈಗಾರಿಕೆ ಗಳಿಂದ ವಂಚಿತರಾಗಿದ್ದಾರೆ.

ಕೈಗಾರಿಕಾ ಎಸ್ಟೇಟ್‌ಗಳು ಮೂಲೆಗುಂಪು: ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರಲ್ಲಿ ಗುರುತಿಸಲಾಗಿರುವ ಕೈಗಾರಿಕಾ ಎಸ್ಟೇಟ್‌ಗಳು ಅಭಿವೃದ್ಧಿ ಕಾಣದೇ ಮೂಲೆಗುಂಪಾಗಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಮಳೆಯ ಆಟೋಟದಿಂದ ಬರ ಆವರಿಸುತ್ತಿದ್ದು, ರೈತಾಪಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ಹೀಗಾಗಿ ಜಿಲ್ಲೆಯ ಕೃಷಿ, ಹೈನುಗಾರಿಕೆಗೆ ಕ್ಷೇತ್ರಗಳಿಗೆ ಹೆಚ್ಚಿನ ಸೌಲಭ್ಯಗಳ ದೊರೆಯುವ ನಿರೀಕ್ಷೆಯನ್ನು ಜಿಲ್ಲೆಯ ಜನತೆ ಸಹವಾಗಿಯೇ ಹೊಂದಿದ್ದಾರೆ. ಅಲ್ಲದೇ ಜಿಲ್ಲೆಯ ಕೃಷಿ ಮಾರುಕಟ್ಟೆಗಳಿಗೆ ಮೂಲ ಸೌಕರ್ಯ, ರೇಷ್ಮೆಗೂಡು ಮಾರುಕಟ್ಟೆಗಳ ಉನ್ನತ್ತೀಕರಣಕ್ಕೆ ಆದ್ಯತೆ ಸಿಗಬೇಕಿದೆ.

ಜಲಮೂಲಗಳ ಪುನಶ್ಚೇತನಕ್ಕೆ ಪ್ಯಾಕೇಜ್‌: ಸಾವಿರಾರು ಕೆರೆ, ಕುಂಟೆಗಳ ಮೇಲೆಯೇ ಅವಲಂಬಿತಗೊಂಡಿರುವ ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲಿ ಅಂತರ್ಜಲ ಪಾತಳಕ್ಕೆ ಕುಸಿದಿದೆ. ಅದರಲ್ಲೂ ಕುಡಿಯುವ ನೀರು ವಿಷಮ ಸ್ಥಿತಿಗೆ ತಲುಪಿ ಅಪಾಯಕಾರಿ ಪ್ಲೋರೈಡ್‌ ಅಂಶ ಕುಡಿಯುವಲ್ಲಿ ನೀರಿನಲ್ಲಿ ಅಧಿಕವಾಗಿದೆ. ಹೀಗಾಗಿ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಅಧಿಕ ಕೆರೆಗಳ ಪುನಚ್ಚೇತನಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂಬ ಬೇಡಿಕೆ ಬಹುದಿನ ಗಳಿಂದಲೂ ಜಿಲ್ಲೆಯ ಜನತೆ ರೈತಾಪಿ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಯ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಯೋಜನೆಗಳನ್ನು ರೂಪಿಸಬೇಕಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಾಕಷ್ಟು ಗ್ರಾಮಗಳು ದೂರ ಉಳಿದಿವೆ.

ಚಿಕ್ಕಬಳ್ಳಾಪುರ ತಾಲೂಕು ನಿರೀಕ್ಷೆಗಳು
1ನಗರಸಭೆಗೆ ನೂತನ ಕಟ್ಟಡ

2 ಸರ್‌ಎಂವಿ ಜನ್ಮಸ್ಥಳ ಮುದ್ದೇನಹಳ್ಳಿ ಅಭಿವೃದ್ಧಿ

3 ಜಕ್ಕಲಮಡಗು ಜಲಾಶಯ ಅಭಿವೃದ್ಧಿ

4 ಚಿಕ್ಕಬಳ್ಳಾಪುರಕ್ಕೆ ಉಪ ನಗರ ಭಾಗ್ಯ

5 ಸ್ಕಂದಗಿರಿ, ಅವುಲುಬೆಟ್ಟ ಅಭಿವೃದ್ಧಿ

6 ಬಟಾನಿಕಲ್‌ ಗಾರ್ಡ್‌ನ್‌ ಅಭಿವೃದ್ಧಿ

ಶಿಡ್ಲಘಟ್ಟ ತಾಲೂಕಿನ ನಿರೀಕ್ಷೆಗಳು
1 ಪ್ರತ್ಯೇಕ ಎಪಿಎಂಸಿ ಮಾರುಕಟ್ಟೆ

2 ಬಸ್‌ ನಿಲ್ದಾಣ ಮೇಲ್ದರ್ಜೇಗೆ

3 ರೇಷ್ಮೆ ಮಾರುಕಟ್ಟೆಗೆ ಮೂಲ ಸೌಕರ್ಯ

4 ನಗರಸಭೆಗೆ ಬೇಕಿದೆ ನೂತನ ಕಟ್ಟಡ

5 ರೇಷ್ಮೆ ಕೃಷಿ ಸಂಶೋಧನಾ ಕೇಂದ್ರ

6 ಪಟ್ಟಣಕ್ಕೆ ಕುಡಿಯುವ ನೀರು ಸೌಲಭ್ಯ

ಚಿಂತಾಮಣಿ ತಾಲೂಕು ನಿರೀಕ್ಷೆಗಳು
1 ಎಂಜಿನಿಯರಿಂಗ್‌ ಕಾಲೇಜು

2 ಸಂಚಾರ ಪೊಲೀಸ್‌ ಠಾಣೆ

3 ಪ್ರವಾಸೋದ್ಯಮಕ್ಕೆ ಉತ್ತೇಜನ

4 ನಗರಕ್ಕೆ ಕುಡಿಯುವ ನೀರಿಗೆ ಅನುದಾನ

5 ಮಾವು, ರೇಷ್ಮೆಗೆ ಕೃಷಿಗೆ ಪ್ರೋತ್ಸಾಹ

6 ಕನ್ನಂಪಲ್ಲಿ, ನೆಕ್ಕುಂದಿ ಕೆರೆಗಳ ಅಭಿವೃದ್ಧಿ

ಬಾಗೇಪಲ್ಲಿ ತಾಲೂಕಿನ ನಿರೀಕ್ಷೆಗಳು
1 ಕೈಗಾರಿಕೆಗಳ ಅಭಿವೃದ್ಧಿ ನಿರೀಕ್ಷೆ

2 ಚಿತ್ರಾವತಿ ಡ್ಯಾಂ ಪುನಶ್ಚೇತನ

3 ತಾಂಡಗಳಿಗೆ ಮೂಲ ಸೌಕರ್ಯ

4 ವಂಡಮಾನ್‌ ಕೆರೆ ಅಭಿವೃದ್ಧಿ

5 ನಗರಸಭೆಗೆ ನೂತನ ಕಟ್ಟಡ

6 ಒಳಚರಂಡಿಗೆ ಕಾಮಗಾರಿ ಕಾಯಕಲ್ಪ

ಗೌರಿಬಿದನೂರು ತಾಲೂಕು
1 ಉತ್ತರ ಪಿನಾಕಿನಿ ನದಿ ಪುನಶ್ಚೇತನ

2 ನಗರಸಭೆಗೆ ನೂತನ ಕಟ್ಟಡ

3 ಮಹಿಳಾ ಪದವಿ ಕಾಲೇಜು

4 ಒಳಚರಂಡಿ ಯೋಜನೆ

5 ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುದಾನ

6 ವಿಧುರಾಶ್ವತ್ಥ ಅಭಿವೃದ್ಧಿಗೆ ನೆರವು

ಗುಡಿಬಂಡೆ ತಾಲೂಕು ನಿರೀಕ್ಷೆಗಳು
1 ಕೈಗಾರಿಕೆಗಳ ಸ್ಥಾಪನೆ

2 ಮಹಿಳೆಯರಿಗೆ ಗಾರ್ಮೆಂಟ್ಸ್‌

3 ಸೋಮೇನಹಳ್ಳಿ ಪಿಯು ಕಾಲೇಜು

4 ಪ್ರವಾಸೋದ್ಯಮಕ್ಕೆ ಅಭಿವೃದ್ಧಿ

5 ಅಮಾನಿ ಬೈರಸಾಗರ ಕೆರೆ ಅಭಿವೃದ್ಧಿ

6 ಕೆರೆಗಳು ಹೂಳು ಎತ್ತುವುದು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next