ಕೇರ್ನ್ಸ್: ಕ್ಯಾಮರಾನ್ ಗ್ರೀನ್ ಅವರ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ಚೇತರಿಸಿಕೊಂಡಿತಲ್ಲದೇ ನ್ಯೂಜಿಲೆಂಡ್ ತಂಡವನ್ನು ಸರಣಿಯ ಆರಂಭಿಕ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಯಿತು.
ಟಾಸ್ ಗೆದ್ದು ಫೀಲ್ಡಿಂಗ್ ನಡೆಸಿದ ಆಸ್ಟ್ರೇಲಿಯ ತಂಡವು ನ್ಯೂಜಿಲೆಂಡ್ ಆಟವನ್ನು 9 ವಿಕೆಟಿಗೆ 232 ರನ್ನಿಗೆ ನಿಯಂತ್ರಿಸಿತು. ಇದಕ್ಕುತ್ತರವಾಗಿ ಒಂದು ಹಂತದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಆಸ್ಟ್ರೇಲಿಯ ತಂಡವು 44 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಒದ್ದಾಡಿತು. ಆದರೆ ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರೆ ಆರನೇ ವಿಕೆಟಿಗೆ ಪೇರಿಸಿದ 158 ರನ್ ನೆರವಿನಿಂದಾಗಿ ತಂಡ 45 ಓವರ್‌ಗಳಲ್ಲಿ 8 ವಿಕೆಟಿಗೆ 233 ರನ್ ಗಳಿಸಿ ಜಯಭೇರಿ ಬಾರಿಸಿತು. ಸರಣಿಯ ಎರಡನೇ ಪಂದ್ಯ ಕೇರ್ನ್ಸ್ ನಲ್ಲಿಯೇ ಗುರುವಾರ ನಡೆಯಲಿದೆ.
ಡೆವೋನ್ ಕಾನ್ವೆ, ನಾಯಕ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ಅವರ ಉತ್ತಮ ಆಟದಿಂದಾಗಿ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಆದರೆ ಕೊನೆ ಹಂತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆಯಿಂದಾಗಿ ಆತಿಥೇಯ ತಂಡ ಕುಸಿಯಿತು. ಮ್ಯಾಕ್ಸ್‌ವೆಲ್ 52 ರನ್ನಿಗೆ 4 ವಿಕೆಟ್ ಉರುಳಿಸಿದರೆ ಜೋಶ್ ಹ್ಯಾಝೆಲ್‌ವುಡ್ 31 ರನ್ನಿಗೆ 3 ವಿಕೆಟ್ ಕಿತ್ತರು.
ಆಸ್ಟ್ರೇಲಿಯದ ಆರಂಭ ಉತ್ತಮವಾಗಿರಲಿಲ್ಲ. 44 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರೆ ಅವರ ಸಮಯೋಚಿತ ಆಟದಿಂದಾಗಿ ತಂಡ ಗೆಲುವು ಕಾಣುವಂತಾಯಿತು. ಗ್ರೀನ್ 89 ರನ್ ಗಳಿಸಿ ಅಜೇಯರಾಗಿ ಉಳಿದರೆ ಕ್ಯಾರೆ 85 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ 9 ವಿಕೆಟಿಗೆ 232 (ಡೆವೋನ್ ಕಾನ್ವೆ 46, ವಿಲಿಯಮ್ಸನ್ 45, ಟಾಮ್ ಲಾಥಮ್ 43, ಮ್ಯಾಕ್ಸ್‌ವೆಲ್ 52ಕ್ಕೆ 4, ಹ್ಯಾಝೆಲ್‌ವುಡ್ 31ಕ್ಕೆ 3); ಆಸ್ಟ್ರೇಲಿಯ 45 ಓವರ್‌ಗಳಲ್ಲಿ 8 ವಿಕೆಟಿಗೆ 233 (ಡೇವಿಡ್ ವಾರ್ನರ್ 20, ಕ್ಯಾಮರಾನ್ ಗ್ರೀನ್ 89 ಔಟಾಗದೆ, ಕ್ಯಾರೆ 85, ಟ್ರೆಂಟ್ ಬೌಲ್ಟ್ 40ಕ್ಕೆ 4, ಮ್ಯಾಟ್ ಹೆನ್ರಿ 50ಕ್ಕೆ 2, ಲೂಕಿ ಫರ್ಗ್ಯುಸನ್ 60ಕ್ಕೆ 2). ಕ್ಯಾಮರಾನ್ ಗ್ರೀನ್ ಪಂದ್ಯಶ್ರೇಷ್ಠ.