Advertisement

ಗಟಾರದ ನೀರಿನಿಂದ  ದೊಡ್ಡ ಗಂಟೇ ಬಂತು!

02:00 PM Sep 04, 2017 | |

ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿಯಲ್ಲಿ ಸುಮಾರು ಇನ್ನೂರೈವತ್ತು ಮನೆಗಳಿವೆ. ತ್ಯಾಜ್ಯ ಹರಿದು ಹೋಗಲು ವ್ಯವಸ್ಥಿತ ಗಟಾರವಿಲ್ಲ. ನೀರೆಲ್ಲಾ ಹೊಲಕ್ಕೆ ಹರಿದು ರಾಡಿಯಾಗಿ ಕೃಷಿ ಮಾಡಲಾಗದ ಸ್ಥಿತಿ. ಉಳ್ಳವರು ಹೊಲಕ್ಕೆ ಮಣ್ಣು ಪೇರಿಸಿ ರಾಡಿಯಾಗದಂತೆ ಎಚ್ಚರ ವಹಿಸುತ್ತಾರೆ. ಸಣ್ಣ ಹೊಲವಿದ್ದವರ ಸ್ಥಿತಿ ಅಯೋಮಯ. 

Advertisement

ಇಲ್ಲಿನ ಶಿವಪ್ಪ ಪಂಚಪ್ಪ ಶಿರೇಮ್ಮನವರ್‌ ಕೂಡ ಸಣ್ಣ ಕೃಷಿಕರು. ಅವರಿಗೆ ಹೈನುಗಾರಿಕೆಯ ಹೊರತಾಗಿ ಹೊಟ್ಟೆ ತಂಪು ಮಾಡುವ ಬೇರೆ ಉದ್ಯೋಗವಿಲ್ಲ.  ಶಿವಪ್ಪಗೆ ನೀರಿನ ತೊಂದರೆ. ಜತೆಗೆ ಗಟಾರ ನೀರಿನ ತಲೆನೋವು. ಗಟಾರ ನೀರನ್ನು ತಮ್ಮ ಹೊಲಕ್ಕೆ ತಿರುಗಿಸಿಕೊಂಡರೆ ಆ ನೀರಿನಿಂದ ಕೃಷಿ ಮಾಡಬಹುದಲ್ಲಾ? ಶಿವಪ್ಪ-ರೇಣುಕಾ ದಂಪತಿಗೆ ಹೀಗೊಂದು ಯೋಚನೆ ಬಂತು. ಹೇಗೂ ನೀರು ಹರಿದು ಬರುವಾಗ ಒಂದಷ್ಟು ಇಂಗುತ್ತದೆ. ಮತ್ತೂಂದಿಷ್ಟು ಹರಿಯುತ್ತಾ ಬಂದು ತಿಳಿಯಾಗಿರುತ್ತದೆ. ಹೇಳುವಂತಹ ವಾಸನೆ ಇರುವುದಿಲ್ಲ. ಹಾಗಾಗಿ, ಈ ನೀರನ್ನು ಕೃಷಿಗೆ ಬಳಸುವುದರಲ್ಲಿ ತಪ್ಪೇನೂ ಇಲ್ಲ ಅನ್ನಿಸಿತು. ಆನಂತರ ಅವರು ತಡ ಮಾಡಲಿಲ್ಲ. ಒಂದು ರಿಸ್ಕಾ ತಗೊಳ್ಳಲು ನಿರ್ಧರಿಸಿದರು.

ಶಿವಪ್ಪ ದಂಪತಿ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಹೆಗಲೆಣೆ. ಕೃಷಿ ಮಾಡಲು ಆರ್ಥಿಕ ಬೆಂಬಲ. ಅರ್ಧ ಎಕರೆಯಲ್ಲಿ ಗುಂಟೂರು ತಳಿಯ ಮೆಣಸಿನ ಕೃಷಿಗೆ ಶ್ರೀಕಾರ ಹಾಡಿದರು.  ಮತ್ತೂಂದಿಷ್ಟು ಸ್ಥಳದಲ್ಲಿ ಹತ್ತಿ ಮತ್ತು ಟೊಮೆಟೋ. ಈಗ ಈ ಎರಡೂ ಸದೃಢವಾಗಿ ಬೆಳೆದಿವೆ.  ಮೆಣಸು ಇಳುವರಿ ನೀಡುತ್ತಿದೆ. ಈ ಗಟಾರದ ನೀರು ಇಲ್ಲಾಂದ್ರೆ ಕೃಷಿ ಇಲ್ಲಾರಿ. ಕಳೆದ ವರ್ಷ ಇದೇ ನೀರು ನಂಬಿಕೊಂಡು ಮೆಕ್ಕೆ ಜೋಳ ಹಾಕಿದ್ವಿ. ಅದೂ ಚೆನ್ನಾಗಿ ಬಂತು ಎಂದರು ರೇಣುಕಾ. ಈ ಗಟಾರದ ನೀರಿನಿಂದಲೇ ಅವರು ಹಸುಗಳಿಗೆ ಮೇವು ಕೂಡಾ ಬೆಳೆಯುತ್ತಿದ್ದಾರೆ.

ಗಟಾರ ನೀರು ಅಂದಾಕ್ಷಣ ಯಥೇತ್ಛವಾಗಿ ಹರಿದು ಬರುತ್ತದೆ ಎಂದರೆ ತಪ್ಪಾದೀತು. ಇವರ ಅರ್ಧ ಎಕರೆಯ ಮೆಣಸು ಸಾಲುಗಳು ತೋಯಲು ಎಂಟು ದಿನ ಬೇಕು! ಹೊಲದಲ್ಲೇ ಇದ್ದುಕೊಂಡು ಒಂದು ಬಿಂದು ನೀರನ್ನೂ ಪೋಲು ಮಾಡದೆ ಕೃಷಿಗೆ ಉಣಿಸುವುದು ಶ್ರಮ. ಗಂಡ, ಹೆಂಡತಿ ಹೊಲದಲ್ಲಿ ಇದ್ದುಕೊಂಡು ದುಡಿಯುತ್ತಿದ್ದಾರೆ. 

ಮೆಣಸು ಏಳು ತಿಂಗಳ ಬೆಳೆ. ಒಂದು ಬೆಳೆಯಲ್ಲಿ ಐವತ್ತರಿಂದ ಅರುವತ್ತು ಕ್ವಿಂಟಾಲ್‌ ಇಳುವರಿ. ಪ್ರಸ್ತುತ, ಕ್ವಿಂಟಾಲಿಗೆ ರೂ.1600 ರಿಂದ 1700 ದರವಿದೆ. ಸ್ವತಃ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಾರೆ.  ನಾವೇ ಸಂತೆಗೆ ಒಯ್ದರೆ ಎರಡು ಸಾವಿರ ಗಳಿಸಬಹುದು. ಹೊಲಕ್ಕೆ ಬಂದು ಒಯ್ತಾರಲ್ವಾ, ಅವರು ಚೌಕಾಶಿ ಮಾಡ್ತಾರೆ. ನಷ್ಟವಾಗುತ್ತದೆ ಎನ್ನುತ್ತಾರೆ ಶಿವಪ್ಪ. 

Advertisement

ಮಾರ್ಚ್‌ ತಿಂಗಳಿನಲ್ಲಿ ಸಸಿ ಮಾಡಿಟ್ಟುಕೊಂಡಿದ್ದಾರೆ. ಹೂ ಬಿಡುವ ಹಂತಕ್ಕೆ ಮುರುಟು ರೋಗ ಕಾಣಿಸುತ್ತದೆ. ರಸ ಹೀರುವ ಕೀಟವು ಹೂವನ್ನು ನಾಶ ಮಾಡುತ್ತದೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳ ಸಿಂಪಡಣೆ.  ಏನಿಲ್ಲವೆಂದರೂ ಏಳು ತಿಂಗಳಲ್ಲಿ ಆರು ಸಲ ಸಿಂಪಡಣೆ!  ಹನ್ನೆರಡು ದಿವಸಕ್ಕೊಮ್ಮೆ ಕೊಯ್ಲು. 

    ಶಿವಪ್ಪ ಸೌತೆ ಬೆಳೆಯುವುದಿಲ್ಲ. ಅದು ಸಹಜವಾಗಿ ನೆಲಕ್ಕೆ ತಾಗಿಕೊಂಡು ಕಾಯಿ ಬಿಡುವುದರಿಂದ ಗಟಾರ್‌ ನೀರು ಸೋಕಬಹುದೆನ್ನುವ ಎಚ್ಚರವಹಿಸಿದ್ದಾರೆ.  ಈ ಬಾರಿ ಟೊಮೆಟೊ ಕೈ  ಹಿಡಿಯುವ ಭರವಸೆ ಇದೆ. ಹಳ್ಳಿಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತದೆ ವಿದ್ಯುತ್‌. ಆಗ ಎಲ್ಲಾ ಮನೆಗಳಲ್ಲಿ ನೀರಿನ ಬಳಕೆ ಹೆಚ್ಚಾಗುತ್ತದೆ. ಆಗ ಗಟಾರ್‌ ನೀರಿನ ಹರಿವು ಹೆಚ್ಚಾಗುತ್ತದೆ. ಶಿವಪ್ಪ ಇಂತಹ ಸಂದರ್ಭಗಳಲ್ಲಿ ಬ್ಯುಸಿ. 

    ಗುಂಟೂರು ಮೆಣಸು ಗಂಟಲು ಸುಡುವ ಖಾರ. ಊಟದ ತಟ್ಟೆಯಲ್ಲಿ ಒಂದು ಮೆಣಸಾದರೂ ಇರಲೇ ಬೇಕು! ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣೇಶ ಮರಾಠೆ ಹೊಸ ರಸರುಚಿಯನ್ನು ನೆನಪಿಸಿಕೊಂಡರು – ಕಾಯಿ ಮೆಣಸನ್ನು ಸಾಸಿವೆ, ಜೀರಿಗೆ, ಮೆಂತ್ಯೆಯೊಂದಿಗೆ ಕುಟ್ಟಿ, ಮೂವತ್ತು ದಿವಸ ಬಿಸಿಲಲ್ಲಿ ಒಣಗಿಸಿ. ಉಪ್ಪಿನಕಾಯಿಯಂತೆ ಬಳಸಿದರೆ ಬಹಳ ರುಚಿ. ಮೆಣಸಿಗೆ ಬಿಸಿಲ ಸ್ನಾನ ಹೆಚ್ಚಿದಷ್ಟೂ ಪಾಕಕ್ಕೆ ರುಚಿ ಹೆಚ್ಚು. 

    ಶಿವಪ್ಪ ದಂಪತಿ ಗಟಾರ್‌ ನೀರಿನ ಬಳಕೆಯ ಕೃಷಿಯ ಗೆಲವು ಬೋರ್‌ವೆಲ್‌ ಪಂಪಿನ ಸದ್ದಿನ ಮಧ್ಯೆ ಕೇಳಿಸದು. ಅವರು ಬದುಕಿನ ಸವಾಲಿಗೆ ಅಧೀರರಾಗದೆ ಕಾಲದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರಿಗೆ ಸಮಸ್ಯೆಯು ಸಮಸ್ಯೆಯಲ್ಲ. ಅದನ್ನು ಸವಾಲಿನಂತೆ ಸ್ವೀಕರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರುಷ ಕೊಳವೆ ಬಾಯನ್ನು ಕೊರೆಯುವಷ್ಟು ಆರ್ಥಿಕತೆಯನ್ನು ಗುಂಟೂರು ಮೆಣಸು, ಟೊಮೆಟೋಗಳು ಹಗುರಮಾಡಲಿವೆ. ಅವರ ಪಾಲಿಗೆ ಮೆಣಸು ಖಾರವಿಲ್ಲ. 

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next