Advertisement

3 ಕೋಟಿ ಪಯಣ; ಮುಕ್ಕೋಟಿ ಮಹಿಳಾ ಪಯಣ; ರಾಜ್ಯ ಸರಕಾರದ ಯೋಜನೆಗೆ ಅದ್ಭುತ ಸ್ಪಂದನೆ

11:13 PM Jun 18, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರಕಾರದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ “ಶಕ್ತಿ ಯೋಜನೆ’ ಜಾರಿಗೆ ಬಂದು ಒಂದು ವಾರವಾಗಿದೆ. ಈ ಅವಧಿಯಲ್ಲಿ ಯೋಜನೆಗೆ ಅದ್ಭುತ ಸ್ಪಂದನೆ ಸಿಕ್ಕಿದ್ದು, ಬರೋಬ್ಬರಿ 3 ಕೋಟಿಗೂ ಅಧಿಕ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡಿದ್ದಾರೆ.

Advertisement

ಶಕ್ತಿ ಯೋಜನೆ ಜಾರಿಗೆ ಮುನ್ನ ಸಾಕಷ್ಟು ಚರ್ಚೆಗಳು, ಜಿಜ್ಞಾಸೆ-ಅನುಮಾನಗಳು ಮೂಡಿದ್ದವು. ಬಸ್‌ ಮಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಆರಂಭಿಸಿದ್ದ ಉದಾಹರಣೆಯ ಜತೆಗೆ ಬಸ್‌ಗಳಲ್ಲಿ ನೂಕೂನುಗ್ಗಲು, ಪುರುಷ ಪ್ರಯಾಣಿಕರ ಪರದಾಟ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ, ಬಸ್‌ಗಳ ಸಂಖ್ಯೆ ಕಡಿತ ಮತ್ತಿತರ ಅಪವಾದಗಳ ಜತೆಗೆ ಶಕ್ತಿ ಯೋಜನೆ ಒಂದು ವಾರದ ಪ್ರಯಾಣ ಪೂರ್ಣಗೊಳಿಸಿದೆ.

ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿದ್ದರಿಂದ ಈಗ ಅಸಲಿ ಹಿಂದುತ್ವಕ್ಕೆ ಶಕ್ತಿ ಬಂದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟ್‌ ಮಾಡಿ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ಈ ಯೋಜನೆ ದುಡಿಯುವ ವರ್ಗದ ಮಹಿಳೆಯರಿಗೆ ಅತ್ಯಂತ ಉಪಯುಕ್ತವಾಗಿದೆ. ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ ಒಟ್ಟು 5,71,023 ಮಹಿಳೆಯರು ಪ್ರಯಾಣ ಮಾಡಿದ್ದು, 1,40,22,878 ರೂ. ಮೌಲ್ಯದ ಶೂನ್ಯ ಟಿಕೆಟ್‌ ನೀಡಲಾಗಿತ್ತು. ಎರಡನೇ ದಿನ 41,34,726 ಮಹಿಳೆಯರು, ಮೂರನೇ ದಿನ 5,71,023 ಮಹಿಳೆಯರು ಪ್ರಯಾಣಿಸಿದ್ದರು. ಜೂ. 17ರಂದು 54,30,150 ಮಹಿಳೆಯರಿಗೆ 12,88,81,618  ರೂ.ಗಳ ಮೌಲ್ಯದ ಶೂನ್ಯ ಟಿಕೆಟ್‌ ವಿತರಿಸಲಾಗಿದೆ.

ಹೀಗೆ ಒಟ್ಟು ಶಕ್ತಿ ಯೋಜನೆ ಜಾರಿಗೊಂಡ ಒಂದು ವಾರದಲ್ಲಿ ಒಟ್ಟು 3.12 ಕೋಟಿ ಮಹಿಳೆಯರು ರಾಜ್ಯಾದ್ಯಂತ ಸಂಚರಿಸಿದ್ದಾರೆ. ಸುಮಾರು 70.28 ಕೋಟಿ ರೂ. ಮೌಲ್ಯದ ಶೂನ್ಯ ಟಿಕೆಟ್‌ ನೀಡಲಾಗಿದೆ. ಈ ಯೋಜನೆಯಿಂದಾಗಿ ವಾರಾಂತ್ಯದಲ್ಲಿ ಮಹಿಳೆಯರು ರಾಜ್ಯದ ವಿವಿಧ ಪುಣ್ಯಕ್ಷೇತ್ರ ದರ್ಶನಕ್ಕೆ ಮುಗಿಬಿದ್ದಿದ್ದಾರೆ.

Advertisement

ನಾರಿ ಶಕ್ತಿ ದಿಗ್ದರ್ಶನ
ಯೋಜನೆ ಜಾರಿಯ ಅನಂತರ ಮೊದಲ ವಾರಾಂತ್ಯ, ಜತೆಗೆ ಆಷಾಢ ಅಮಾವಾಸ್ಯೆಯೂ ಆಗಿದ್ದರಿಂದ ರವಿವಾರ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಲ್ಲಿ ನಾರಿ ಶಕ್ತಿಯ ದಿಗªರ್ಶನವಾಗಿದೆ.

ರಾಜ್ಯದ ಎಲ್ಲೆಡೆ ಬಸ್‌ ನಿಲ್ದಾಣಗಳಲ್ಲಿ ಮಹಿಳೆಯರೇ ಕಂಡುಬಂದಿದ್ದು, ಸಾರಿಗೆ ಸಂಸ್ಥೆಯ ಮೂರು ನಿಗಮಗಳಿಂದ ಹೊರಡುವ ಬಸ್‌ಗಳಲ್ಲಿ ಕಿಕ್ಕಿರಿದು ಪ್ರಯಾಣ ಮಾಡಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಸಿಗಂಧೂರು, ಶೃಂಗೇರಿ, ಮೈಸೂರಿನ ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ, ಮಲೆಮಹದೇಶ್ವರ ಬೆಟ್ಟ, ವಿಜಯಪುರದ ಗೋಳಗುಮ್ಮಟ, ಶಿರಡಿ ಸೇರಿದಂತೆ ರಾಜ್ಯಾದ್ಯಂತ ಇರುವ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಮಹಿಳೆಯರು ಮಕ್ಕಳೊಂದಿಗೆ ಲಗ್ಗೆ ಇಟ್ಟಿದ್ದಾರೆ.

ವಾರಾಂತ್ಯ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ಕೆಎಸ್‌ಆರ್‌ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳ ಎಲ್ಲ ಘಟಕಗಳಿಂದಲೂ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಬಸ್‌ ವ್ಯವಸ್ಥೆ ಲಭ್ಯವಿದ್ದು, ಮಹಿಳೆಯರೇ ಹೆಚ್ಚು ಪ್ರಯಾಣ ಬೆಳೆಸಿದ್ದಾರೆ. ರವಿವಾರ ಸುಮಾರು 55 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ವಿತರಿಸಲಾದ ಶೂನ್ಯ ಟಿಕೆಟ್‌ ಮೌಲ್ಯ ಸರಿಸುಮಾರು 13 ಕೋಟಿ ರೂ. ಆಗಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಬಸ್‌ ಹೆಚ್ಚಿಸಲು ಬೇಡಿಕೆ
ಶಕ್ತಿ ಯೋಜನೆ ಜಾರಿಗೊಂಡ ವಾರದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದ್ದು, ಕೆಲವು ಮಾರ್ಗಗಳ ಬಸ್‌ಗಳಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆದ್ದರಿಂದ ಸರಕಾರಿ ಬಸ್‌ಗಳ ಸಂಖ್ಯೆ ಹಾಗೂ ಕೆಎಸ್‌ಆರ್‌ಟಿಸಿ ಸಿಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಮನವಿಗಳು ಸರಕಾರಕ್ಕೆ ಬಂದಿವೆ.

ಅಸಲಿ ಹಿಂದುತ್ವಕ್ಕೆ ಶಕ್ತಿ: ರಾಮಲಿಂಗಾ ರೆಡ್ಡಿ
ಶಕ್ತಿ ಯೋಜನೆಯು ಮಹಿಳೆಯರಿಗೆ ಶಕ್ತಿ ನೀಡುವ ಜತೆ ಜತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟ್‌ನಲ್ಲಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ವಾರಾಂತ್ಯದಲ್ಲಿ ಬಹುತೇಕ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರನ್ನು ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್‌ ಸರಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್‌ ಸದಾ ಬದ್ಧ ಎಂದು ಬರೆದುಕೊಂಡಿದ್ದಾರೆ.

ದಿನ ಪ್ರಯಾಣಿಸಿದ ಸ್ತ್ರೀಯರು ಟಿಕೆಟ್‌ ಮೌಲ್ಯ (ರೂ.ಗಳಲ್ಲಿ)
1 5,71,023 1,40,22,878
2 41,34,726 8,83,53,434
3. 5,71,023 10,82,02,191
4. 50,17,174 11,51,08,324
5 54,05,629 12,37,89,585
6 55,09,770 12,45,19,262
7 54,30,150 12,88,81,618

Advertisement

Udayavani is now on Telegram. Click here to join our channel and stay updated with the latest news.

Next