Advertisement

ಕಥೆ ಹೇಳುವ ಮನೆ ಇದು!

04:32 PM Apr 16, 2022 | Team Udayavani |

ಲಂಡನ್‌ಗೆ ಬಂದು ನೆಲೆಯಾದ ಮೇಲೆ ಜಾನ್‌ ಆಸ್ಟಿನ್‌ ಬಗ್ಗೆ ಸಾಕಷ್ಟು ಕೇಳಿದ್ದೆ. ಅವರ ಪುಸ್ತಕಗಳನ್ನೂ ಓದಿದ್ದೆ. ಹೀಗಾಗಿ ಅವರ ಮನೆಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವ ಹಂಬಲ ಮನದೊಳಗೆ ಚಿಗುರೊಡೆದಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಇತ್ತೀಚೆಗೆ ನಾನು ಓದಿದ ಶಿವಮೊಗ್ಗ ಕಾಲೇಜಿನ ಪಿಯುಸಿ ಭೌತಶಾಸ್ತ್ರ ಉಪನ್ಯಾಸಕರಾದ ಪಾರ್ಥಸಾರಥಿ ಅವರು ಕುಟುಂಬ ಸಮೇತ ಯುಕೆಗೆ ಬಂದಿದ್ದರು. 30 ವರ್ಷಗಳ ತರುವಾಯ ನಾನು ಅವರನ್ನು ಭೇಟಿ ಮಾಡುವ ಅವಕಾಶ ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಹೀಗಾಗಿ ವೀಕೆಂಡ್‌ನ‌ಲ್ಲಿ ಅವರೊಂದಿಗೆ ಜಾನ್‌ ಆಸ್ಟೀನ್‌ ಮನೆಗೆ ಭೇಟಿ ಮಾಡುವ ಜತೆಗೆ ಅವರೊಂದಿಗೆ ಸಮಯ ಕಳೆಯಲು ನಿರ್ಧರಿಸಿ ಅಂದು ಬೆಳಗ್ಗೆ ಹೊರಟು ಬಿಟ್ಟೆವು.

Advertisement

ಬೆಚ್ಚಗಿನ ನೆನಪುಗಳಲ್ಲಿ ಜತೆಯಾಗಲು ಆ ದಿನ ಮಳೆಯೂ ನಿರಂತರ ಸುರಿಯುತ್ತಲೇ ಇತ್ತು. ಆದರೂ ಬಿಡಲಿಲ್ಲ. ಮನೆಯಿಂದ ಕಾರಿನಲ್ಲಿ ಸುಮಾರು 26 ಕಿ.ಮೀ. ಪ್ರಯಾಣದ ಬಳಿಕ ವಿಂಚೆಸ್ಟರ್‌ ಚೌಟನ್‌ ಬಳಿ ಇದ್ದ ಜಾನ್‌ ಆಸ್ಟೀನ್‌ ಮನೆ ಸಮೀಪ ಬಂದೆವು. ಹೋದ ಕೂಡಲೇ ಮುಂಗಡವಾಗಿ ಕಾದಿರಿಸಿದ್ದ ಟಿಕೆಟ್‌ ತೋರಿಸಿ ಒಳ ಹೋದಾಗ ನಮಗೆ ಮೊದಲು ಕಾಣಿಸಿದ್ದು ಜಾನ್‌ ಆಸ್ಟೀನ್‌ ಪ್ರಯಾಣ ಮಾಡಲು ಬಳಸುತ್ತಿದ್ದ ಕುದುರೆಗಾಡಿ. ಇದರಲ್ಲಿ ಅವರು ತಮ್ಮ ಸಹೋದರಿ ಯೊಂದಿಗೆ ತಿರುಗಾಡುತ್ತಿದ್ದರಂತೆ.

ಅನಂತರ ನೇರವಾಗಿ ಗಾರ್ಡನ್‌ ಒಳಗೆ ಪ್ರವೇಶಿಸಿದೆವು. ಅಲ್ಲಿ ನಮ್ಮ ಹಂಡೆ ಸ್ನಾನ ಮಾಡುತ್ತಿದ್ದ ಬಾಲ್ಯದ ದಿನಗಳನ್ನು ನೆನಪಿಸುವ ಬಾತ್‌ರೂಮ್‌ ಕಾಣಿಸಿತ್ತು. ಆದರೆ ಅದು ಬಾತ್‌ರೂಮ್‌ ಆಗಿರಲಿಲ್ಲ. ಅಲ್ಲಿದ್ದ ಬೃಹತ್‌ ಗಾತ್ರದ ಒಲೆಯಲ್ಲಿ ಹಂದಿ ಬೇಯಿಸುತ್ತಿದ್ದು, ಪಿಜ್ಜಾ, ಕೇಕು ತಯಾರಿಸುತ್ತಿದ್ದರು. ಅದು ಬೇಕ್‌ ರೂಮ್‌ ಆಗಿತ್ತು ಎನ್ನುವುದು ಅನಂತರ ತಿಳಿಯಿತು. ಅಲ್ಲಿಂದ ಅಡುಗೆ ಮನೆ ಪ್ರವೇಶಿಸಿದೆವು. ಅಲ್ಲಿ ಏನೆಲ್ಲ ಮಾಡುತ್ತಿದ್ದರು ಎನ್ನುವುದು ಸ್ಪಷ್ಟವಾಗಿ ಗೋಚರವಾಗುವಂತೆ ತಿಳಿಸಿದ್ದಾರೆ. ಅಲ್ಲಿಂದ ಇನ್ನೊಂದು ರೂಮ್‌ಗೆ ಹೋದಾಗ ಅಲ್ಲಿ ಜಾನ್‌ ಆಸ್ಟೀನ್‌ ಉಪಯೋಗಿಸುತ್ತಿದ್ದ ರೈಟಿಂಗ್‌ ಟೇಬಲ್‌, ಬುಕ್‌ ಶೆಲ್ಫ್, ಪಿಯಾನೋ ನೋಡಲು ಸಿಕ್ಕಿತು.

ಪಿಯಾನೋ ನೋಡಿ ಮಗ ನುಡಿಸಬಹುದೇ ಎಂದು ಕೇಳಿದ. ಅವರು ಸರಿ ಎಂದಾಗ ಮಗ ಅದನ್ನು ಕೈಗೆತ್ತಿ ನುಡಿಸಿದ. ಅದು ಫೈನ್‌ ಟ್ಯೂನ್‌ ಆಗಿರಲಿಲ್ಲ. ಆದರೂ ವಿಂಟೇಜ್‌ ಎಫೆಕ್ಟ್ ಬಂತು. ಜಾನ್‌ ಆಸ್ಟೀನ್‌ ಕಾಲದಲ್ಲಿದ್ದೇವೆ ಎಂದು ಭಾಸವಾಯಿತು. ಅಲ್ಲಿ ಅವರು ಬರೆಯುತ್ತಿದ್ದ ಟೇಬಲ್‌ ಇಟ್ಟಿದ್ದಾರೆ. ಅತ್ಯಂತ ಸಣ್ಣ ಟೇಬಲ್‌. ಅವರು ಕುಳಿತೇ ಬರೆಯುತ್ತಿದ್ದರು. ಸುಂದರ ಬರವಣಿಗೆ ಅವರದಾಗಿತ್ತು. ಆ ಟೇಬಲ್‌ ಅನ್ನು ಅವರು ತಮ್ಮ ನೌಕರನಿಗೆ ಕೊಟ್ಟಿದ್ದರಂತೆ. ಮ್ಯೂಸಿಯಂ ಮಾಡುವ ಸಲುವಾಗಿ ಅದನ್ನು ಮರಳಿ ಪಡೆಯಲಾಗಿತ್ತು. ಇಲ್ಲಿ ಜಾನ್‌ ಆಸ್ಟೀನ್‌ ಬಳಸುತ್ತಿದ್ದ ಹಲವಾರು ಬೌಲ್‌ಗ‌ಳು/ ಪ್ಲೇಟ್‌ಗಳು ಇದ್ದವು.

ಬಳಿಕ ಅವರ ಮಲಗುವ ಕೋಣೆಗೆ ಹೋದೆವು. ಅಲ್ಲಿ ಅವರ ಕುಟುಂಬ ಸದಸ್ಯರ ಚಿತ್ರಗಳಿದ್ದವು. ಜತೆಗೆ ಹಲವಾರು ಕಲಾಕೃತಿಗಳು. ಅವರ ಸಹೋದರ ಸೈಲೋರ್ಸ್‌ ಬಳಸುತ್ತಿದ್ದ ವಸ್ತುಗಳೂ ಇದ್ದವು. ಅವರಿಗೆ ಕ್ವೀನ್‌ ವಿಕ್ಟೋರಿಯಾ ಕೊಟ್ಟ ಪಾತ್ರೆಗೆ ಫ್ರೆàಮ್‌ ಹಾಕಿ ಇಟ್ಟಿದ್ದಾರೆ. ಜಾನ್‌ ಆಸ್ಟೀನ್‌ ಬಳಸುತ್ತಿದ್ದ ಮುಸ್ಲಿನ್‌ ಶಾಲು, ಬ್ರಾಸ್‌ ಲೆಟ್‌, ಉಂಗುರಗಳನ್ನು ನೋಡಿದೆವು. ನೆನಪಿಗಾಗಿ ಸಾಕಷ್ಟೋ ಫೋಟೋಗಳನ್ನು ತೆಗೆದುಕೊಂಡೆವು. ಕೊನೆಯಲ್ಲಿ ಜಾನ್‌ ಆಸ್ಟೀನ್‌ ಅವರ ತಂದೆ ಹಾಗೂ ಅವರ ಕೂದಲುಗಳನ್ನು ನೋಡಿದೆವು. ಅವರ ನೆನಪಿನ ಸಾಕಷ್ಟು ವಸ್ತುಗಳು ಅಲ್ಲಿದ್ದವು. ಅವರು ಓಡಾಡಿದ ಜಾಗದಲ್ಲಿ ನಡೆದ ಹೆಮ್ಮೆಯೊಂದಿಗೆ 41ನೇ ವರ್ಷದಲ್ಲೇ ಅವರು ಪ್ರಾಣ ಕಳೆದುಕೊಂಡ ವಿವರಣೆಯನ್ನು ಕೇಳಿ ದುಃಖತಪ್ತರಾಗಿ ಅವರ ತಾಯಿ, ಸಹೋದರಿಯ ಸಮಾಧಿಗೆ ನಮಿಸಿ ಅಲ್ಲಿಂದ ವಾಪಸ್‌ ಹೊರಟೆವು.

Advertisement

ಆಸ್ಟಿನ್‌ ತಮ್ಮ ಕಾದಂಬರಿಗಳಲ್ಲಿ 18 ಮತ್ತು 19ನೇ ಶತಮಾನದ ಜೀವನ ಶೈಲಿ, ಸಾಮಾಜಿಕ ವ್ಯವಸ್ಥೆಗಳನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ. ಅವರ ಕಾದಂಬರಿಗಳು ಹಾಸ್ಯಭರಿತವಾಗಿದ್ದರೂ ಮಹಿಳೆ ವಿವಾಹದ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುರಕ್ಷಿತಳು ಎಂಬುದಕ್ಕೆ ಒತ್ತು ನೀಡಿದ್ದಾರೆ. ಅವರ ಕಾದಂಬರಿಗಳು ಅನಾಮಿಕವಾಗಿ ಪ್ರಕಟಗೊಂಡರೂ ಅದು ಅವರಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. 1869ರಲ್ಲಿ ಆಕೆಯ ಸೋದರಳಿಯ ಬರೆದ  A memoir of jane Austin ಅವರಿಗೆ ಮಾನ್ಯತೆ ತಂದುಕೊಟ್ಟಿತಲ್ಲದೆ ಅವರನ್ನು ಇಂಗ್ಲೀಷ್‌ ಸಾಹಿತ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿತು. 20ನೇ ಶತಮಾನದಲ್ಲಿ ಅವರ ಕಾದಂಬರಿಗಳಿಗೆ ಅಭಿಮಾನಿಗಳು ಹೆಚ್ಚಾದರು.

ಆಸ್ಟೀನ್‌ ಅವರ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿಗಳು ಬಹಳ ಕಡಿಮೆ. ಅವರ ಮೂರು ಸಾವಿರ ವೈಯಕ್ತಿಕ ಪತ್ರಗಳಲ್ಲಿ ಕೇವಲ 160 ಪತ್ರಗಳು ಬಹಿರಂಗವಾಗಿವೆ. ಅವರ ಸಂಬಂಧಿಕರು ಒದಗಿಸಿದ ಮಾಹಿತಿಗಳೇ ಮೂಲಾಧಾರವಾಗಿ ಉಳಿದಿವೆ.

ಆಸ್ಟೀನ್‌ ಅವರ ತಂದೆ ಜಾರ್ಜ್‌ ಆಸ್ಟಿನ್‌ ಹಾಗೂ ತಾಯಿ ಕಸಾಂದ್ರ ಕುಲೀನ ಮನೆತನಕ್ಕೆ ಸೇರಿದವರು. ಜಾರ್ಜ್‌ ಅವರು ಉಣ್ಣೆ ಬಟ್ಟೆಗಳ ತಯಾರಕರಾಗಿದ್ದರು. ಅವರು ಸ್ಟೆವೆಂಟನ್‌, ಹ್ಯಾಮ್‌ ಶೈರ್‌ನಲ್ಲಿ ಆಂಗ್ಲಿಕನ್‌ ಸಭೆಯ ಪಾದ್ರಿಯಾಗಿದ್ದರು. ಜೀವನೋಪಾಯಕ್ಕಾಗಿ ಕೃಷಿ, ವಿದ್ಯಾರ್ಥಿಗಳಿಗೆ ಮನೆಪಾಠ ಹೇಳುತ್ತಿದ್ದರು. ಆಸ್ಟೀನ್‌ ಅವರಿಗೆ ಆರು ಮಂದಿ ಸಹೋದರರು, ಓರ್ವ ಸಹೋದರಿ ಇದ್ದರು. ಆಸ್ಟೀನ್‌ ಅವರಿಗೆ ಸಹೋದರಿ ಕಸಾಂದ್ರ ಎಲಿಜಬೆತ್‌ ಅವರೇ ಆಪ್ತ ಗೆಳತಿಯಾಗಿದ್ದರು. ಬ್ಯಾಂಕ್‌ ಮಾಲಕರಾಗಿದ್ದ ಸಹೋದರ ಹೆನ್ರಿ ಥಾಮಸ್‌ ಅವರು ಜಾನ್‌ ಆಸ್ಟೀನ್‌ ಅವರ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರು ನಗರ, ಹೊರ ಊರು, ಸಾಮಾಜಿಕ ವ್ಯವಸ್ಥೆಯ ಕುರಿತು ಆಸ್ಟೀನ್‌ಗೆ ಮಾಹಿತಿಗಳನ್ನು ನೀಡುತ್ತಿದ್ದರು.

1775ರ ಡಿಸೆಂಬರ್‌ 16ರಂದು ಜನಿಸಿದ ಜಾನ್‌ ಆಸ್ಟೀನ್‌, 1783ರಲ್ಲಿ ವಿದ್ಯಾಭ್ಯಾಸಕ್ಕಾಗಿ ಆಕ್ಸ್‌ಫ‌ರ್ಡ್‌ ವಿದ್ಯಾಲಯಕ್ಕೆ ಸೇರಿದರೆ. ಆದರೆ ಅನಾರೋಗ್ಯ ನಿಮಿತ್ತ ಮನೆಗೆ ಬಂದ ಅವರು ಬಳಿಕ ಮನೆಯಲ್ಲೇ ವಿದ್ಯಾಭ್ಯಾಸ ಮುಂದುವರಿಸಿದರು. ಆರ್ಥಿಕವಾಗಿ ತೊಂದರೆಗೊಳಗಾದ ಇವರ ಕುಟುಂಬಕ್ಕೆ 1786ರ ಅನಂತರ ಜಾನ್‌ ಆಸ್ಟೀನ್‌ ಮತ್ತು ಕಸಾಂದ್ರ ಅವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. 1787ರಲ್ಲಿಯೇ ಆಸ್ಟೀನ್‌ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಆಸ್ಟೀನ್‌ ಮನೆಯಲ್ಲೇ ಉಳಿದಿದ್ದರು. ಅವರ ತಾಯಿ, ಸಹೋದರಿಯೊಂದಿಗೆ ಮನೆಕೆಲಸ, ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಜಾನ್‌ ಆಸ್ಟೀನ್‌ ಉತ್ತಮ ನೃತ್ಯಗಾರ್ತಿಯೂ ಆಗಿದ್ದರು. ಸರ್‌ ಚಾರ್ಲ್ಸ್‌ ಗ್ರ್ಯಾಂಡಿಸನ್‌, ದಿ ಹ್ಯಾಪಿ ಮ್ಯಾನ್‌ ಎಂಬ ಕಿರುನಾಟಕವನ್ನೂ ರಚಿಸಿರುವ ಜಾನ್‌ ಆಸ್ಟೀನ್‌ 1789ರಲ್ಲಿ love and friendship ಎಂಬ ಕೃತಿ ಬರೆದ ಬಳಿ ತಮ್ಮ ಸಾಹಿತ್ಯಕ ಜೀವನವನ್ನು ವೃತ್ತಿಪರಗೊಳಿಸಲು ನಿರ್ಧರಿಸಿದರು.

1816ರಲ್ಲಿ ಜಾನ್‌ ಆಸ್ಟೀನ್‌ ಆರೋಗ್ಯ ಹದೆಗೆಟ್ಟಿತು. ಆದರೆ ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿಲ್ಲ. ಹೀಗಾಗಿ 1817ರ ಜು. 18ರಂದು ಇಹಲೋಕ ತ್ಯಜಿಸಿದರು.

-ಶಶಿಕಾಂತ್‌, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next