ಚಿಕ್ಕಮಗಳೂರು: ಸೈಕ್ಲಿಂಗ್‌ನಿಂದ ಆರೋಗ್ಯವಂತ ವ್ಯಕ್ತಿಯಾಗುವುದರೊಂದಿಗೆ ಪರಿಸರ ರಕ್ಷಣೆ ಸಾಧ್ಯವೆಂದು ಎಸಿಎಫ್ ಮುದ್ದಣ್ಣ ತಿಳಿಸಿದರು.
ಶನಿವಾರ ನಗರದ ಆದ್ರಿಕಾ ಹೊಟೇಲ್ ಆವರಣದಲ್ಲಿ “ಗ್ರೇಟ್ ಮಲ್ನಾಡ್ ಚಾಲೆಂಜ್ 2020′ ಚಿಕ್ಕಮಗಳೂರು ನಗರದಿಂದ ಕುಂದಾಪುರದವರೆಗೆ ನಡೆಯುವ 500 ಕಿಮೀ ಸೈಕ್ಲಿಂಗ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಪರಿಸರದ ಉಷ್ಣಾಂಶದಲ್ಲಿ ಏರುಪೇರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜನಸಂಖ್ಯಾ ಸ್ಫೋಟ ಮತ್ತು ಅತಿಯಾದವಾಹನ ಬಳಕೆ. ಹಿಂದೆ 5 ಡಿಗ್ರಿ ಉಷ್ಟಾಂಶ ಏರಿಕೆಗೆ 5 ಸಾವಿರ ವರ್ಷ ಕಾಲ ಬೇಕಾಗುತ್ತದೆ. ಆದರೆ, ಇಂದು 20 ಪಟ್ಟು ಹೆಚ್ಚಾಗಿದೆ ಎಂದರು.
ಪರಿಸರದಲ್ಲಿ ಉಷ್ಠಾಂಶ ಹೆಚ್ಚಳದಿಂದ ಹವಾಮಾನ ಏರುಪೇರು, ಸೈಕ್ಲೋನ್, ಪ್ರಕೃತಿವಿಕೋಪ ಸಂಭವಿಸುತ್ತಿದೆ. ಸೈಕ್ಲಿಂಗ್ ಹವ್ಯಾಸ ಬೆಳೆಸಿಕೊಳ್ಳುವುದರಿಂದ ವಾಹನ ಬಳಕೆ ಕಡಿಮೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಪರಿಸರದ ಮೇಲಾಗುವ ಪರಿಣಾಮವನ್ನುತಡೆಗಟ್ಟಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸೈಕ್ಲಿಂಗ್ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸೈಕ್ಲಿಂಗ್ ಚಾಲೆಂಜ್ 2020ಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಪ್ರದೀಪ್ ಮಾತನಾಡಿ, ಗ್ರೇಟ್ ಮಲ್ನಾಡ್ ಚಾಲೆಂಜ್ 2020 ಸೈಕ್ಲಿಂಗ್‌ನಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ. ಅದರಲ್ಲೂ ಮಲೆನಾಡಿನ ಪರಿಸರದಲ್ಲಿ ನಡೆಯುವ ಸೈಕ್ಲಿಂಗ್ ನಮ್ಮಲ್ಲಿ ಹುಮ್ಮಸ್ಸು ತಂದಿದೆ ಎಂದರು.
ಚಿಕ್ಕಮಗಳೂರಿನ ರಘು ಮಾತನಾಡಿ, ಇದೇ ಮೊದಲ ಬಾರಿಗೆ ಸೈಕ್ಲಿಂಗ್ ಚಾಲೆಂಜ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸೈಕ್ಲಿಂಗ್ ಮಾಡುವುದು ಖುಷಿ ನೀಡುತ್ತದೆ ಎಂದರು.