ಹುಬ್ಬಳ್ಳಿ: ಯಾವುದೇ ಪಕ್ಷ ಸರ್ಕಾರ ರಚನೆ ಮಾಡದಂತಹ ಪರಿಸ್ಥಿತಿಯನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ನಿರ್ಮಿಸಿದ್ದು, ಆ ರಾಜ್ಯದ ಮತದಾರರ ತೀರ್ಪನ್ನು ಬುಡಮೇಲು ಮಾಡಲು ಶಿವಸೇನೆ ನಾಯಕರು ಮುಂದಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಪೂರ್ವ ಹೊಂದಾಣಿಕೆಯಂತೆ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಅವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಒಪ್ಪಂದವಾಗಿತ್ತು.
ಹಿಂದೆ ಸಾಕಷ್ಟು ಬಾರಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಟೀಕಿಸಿದಾಗಲೂ ಹಳೆಯ ಸ್ನೇಹಿತರು ಎನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆ. ಇದೀಗ ಹದ್ದುಮೀರಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಹೋಗಲು ಮುಂದಾಗಿದ್ದಾರೆ. ಯಾವ ಪಕ್ಷವೂ ಸರ್ಕಾರ ರಚನೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅಲ್ಲಿನ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರಬಹುದು. ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ ಎಂದರು.
ಮುಂದೆ ಯಾವ ಬೆಳವಣಿಗೆ ಆಗುತ್ತದೆ ಎಂದು ಊಹಿಸದೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿಯ ಕೆಲವರು ಭೇಟಿ ಮಾಡುವುದರಲ್ಲಿ ಅರ್ಥವಿಲ್ಲ. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಕೆಲವರೊಂದಿಗೆ ಮಾತನಾಡಿದ್ದೇನೆ. ಮಾಧ್ಯಮಗಳ ಮೂಲಕವೂ ಅವರಿಗೆ ಮನವಿ ಮಾಡುತ್ತೇನೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು.
-ಪ್ರಹ್ಲಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ