Advertisement
ಚೆಲುವ, ನಿನ್ನ ಗುಳಿ ಕೆನ್ನೆ ಮುಚ್ಚಿದರೂ ಪರವಾಗಿಲ್ಲ, ಮುದ್ದು ಮುಖದ ತುಂಬಾ ಪೊಗದಸ್ತಾಗಿ ಹರಡಿರುವ ಗಡ್ಡ ತೆಗೆಯಬೇಡ. ಗಾಳಿಗೆ ಹಾರುವ ನನ್ನ ಮುಂಗುರುಳನ್ನು ನೀನು ಬೆರಳುಗಳಿಂದ ಸರಿಸಿ ಖುಷಿ ಪಡುವಂತೆ, ನಾನೂ ನಿನ್ನ ಮುಖದ ಮೇಲೆ ಕೈಯಾಡಿಸಿ, ಚುಚ್ಚುವ ಗಡ್ಡದ ಮೇಲೊಂದು ಮುತ್ತಿನ ಮುದ್ರೆಯೊತ್ತುತ್ತೇನೆ… ಇದು ಹುಚ್ಚುಕೋಡಿ ಮನಸ್ಸಿನ ಒಬ್ಬಳ ಕನವರಿಕೆಯಲ್ಲ. ಈಗೀಗ ಹರೆಯದ ಹುಡುಗಿಯರಿಂದ ಹಿಡಿದು, ಮಧ್ಯ ವಯಸ್ಸಿನ ಹೆಂಗಸರಿಗೂ “ಗಡ್ಡ ಅನ್ನೋದು’ ತಲೆಕೆಡಿಸಿಬಿಟ್ಟಿದೆ. ಕಪ್ಪನೆಯ ಗಡ್ಡದಿಂದ ಹಿಡಿದು ಬೆಳ್ಳಿ ಗೆರೆಗಳು ಮೂಡಿದಂತೆ ಕಾಣುವ “ಸಾಲ್ಟ… ಅಂಡ್ ಪೆಪ್ಪರ್’ವರೆಗೂ ಗಡ್ಡ ಟ್ರೆಂಡ್ ಸೃಷ್ಟಿಸಿದೆ.
Related Articles
Advertisement
ಮೊದಲೆಲ್ಲಾ ಕ್ಲೀನ್ ಶೇವ್ ಮಾಡಿದ ಕೆನ್ನೆಯ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಅಭಿರುಚಿಗಳೂ ಬದಲಾದವು. ಪಿಯುಸಿ ದಾಟುತ್ತಿದ್ದಂತೆ ಚಿಗುರು ಮೀಸೆ ಹುಡುಗರು, ತಮಗೆ ಯಾವಾಗಪ್ಪಾ ಗಡ್ಡ ಬರುತ್ತೆ? ಅಂತ ಕನ್ನಡಿ ಮುಂದೆ ನಿಂತು ಮುಖಾವಲೋಕನ ಮಾಡುತ್ತಿರುತ್ತಾರೆ. ಆಗಲೇ ಗಡ್ಡ-ಮೀಸೆ ಚಿಗುರಿದ ಹೈದರು, ಸ್ಟೈಲಾಗಿ ಗಡ್ಡ ಬಿಟ್ಟು, ಅದನ್ನು ಪೋಷಿಸಿ (ಹುಡುಗಿಯರು ತಮ್ಮ ಕೂದಲಿನ ಬಗ್ಗೆ ಕೇರ್ ತೆಗೆದುಕೊಳ್ಳುವಷ್ಟೇ ಹುಡುಗರು ಗಡ್ಡದ ಬಗ್ಗೆ ಕಾಳಜಿ ಮಾಡ್ತಾರೆ) ಹುಡುಗಿಯರ ಚಿತ್ತವನ್ನು ತಮ್ಮೆಡೆಗೆ ಸೆಳೆಯುತ್ತಿರುತ್ತಾರೆ.
ಇವೆಲ್ಲದರ ಮಧ್ಯೆ, ಅಪ್ಪ- ಅಮ್ಮಂಗೆ ತಲೆನೋವು, ಮಗನ ಬಗೆಗೇನೋ ಸಣ್ಣ ಅನುಮಾನ. ಇವನ ಗಡ್ಡದ ಹಿಂದಿನ ಮರ್ಮವೇನು? ಮಗ ಯಾರನ್ನಾದ್ರೂ ಲವ್ ಮಾಡ್ತಿರಬಹುದಾ? ಪ್ರೀತಿಸಿದ ಹುಡುಗಿ ಮೋಸ ಮಾಡಿಬಿಟ್ಳಾ, ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟನಾ, ಮೊದಲಿನಂತೆ ಈಗ ಇವನಿಗೆ ಯಾವುದ್ರಲ್ಲೂ ಯಾಕೆ ಆಸಕ್ತಿಯಿಲ್ಲ, ಏನಾದ್ರೂ ಕೆಟ್ಟ ದಾರಿ ಹಿಡಿದುಬಿಟ್ಟನಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಧುತ್ತನೆ ಎದ್ದು ನಿಂತು ಕಾಡತೊಡಗುತ್ತವೆ. ಆದ್ರೆ, ಮಗನ ಗಡ್ಡದ ಮೇಲಿನ ವ್ಯಾಮೋಹ ಅವರಿಗೆ ಅರ್ಥವೇ ಆಗೋದಿಲ್ಲ. ಅವರ ಪಾಲಿಗೆ ಗಡ್ಡ ಅನ್ನೋದು, ಜೀವನದ ಮೇಲಿನ ನಿರಾಸಕ್ತಿ, ಅನಾರೋಗ್ಯದ ಸಂಕೇತ.
ಇಂದು ಗಡ್ಡ ಬಿಟ್ಟವನು, ನಾಳೆ ಎಲ್ಲವನ್ನೂ ಬಿಟ್ಟು ಸನ್ಯಾಸಿ ಆಗಿಬಿಟ್ಟರೆ ಅಂತ ಅವರಿಗೆ ಭಯ. ಅಮ್ಮನಂತೂ ಮಗನಿಗೆ ದಿನಾ, “ಗಡ್ಡ ತೆಗೆಯೋ’ ಅಂತ ಪರಿಪರಿಯಾಗಿ ಬೇಡಿಕೊಂಡರೂ, ನಯವಾಗಿ ಗದರಿದರೂ, ಮುನಿಸು ತೋರಿದರೂ ಮಗನ ಮನಸ್ಸು ಬದಲಾಗುವುದು ಕಷ್ಟ. ಯಾಕೆ ಹೇಳಿ, ಕ್ಲಾಸ್‌ನಲ್ಲಿ ಸುಮಾರು ಹುಡುಗಿಯರು ತನ್ನತ್ತ ಮೆಚ್ಚುಗೆಯ ನೋಟ ಬೀರುವುದು ಗಡ್ಡದ ಕಾರಣದಿಂದಲೇ ಅಂತ ಅವನಿಗೂ ಗೊತ್ತಾಗಿ ಹೋಗಿದೆ.
ಹಾಗಾದ್ರೆ, ಹುಡುಗಿಯರಿಗ್ಯಾಕೆ ಗಡ್ಡ ಇಷ್ಟ? ಗಡ್ಡ ಬಿಟ್ಟ ಹುಡುಗರು ಬುದ್ಧಿವಂತರು, ಹೆಚ್ಚು ಸಾಮರ್ಥ್ಯವುಳ್ಳವರು, ಪ್ರಬುದ್ಧರು ಅನ್ನೋದು ಹಲವು ಹುಡುಗಿಯರ ಬಲವಾದ ನಂಬಿಕೆ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲ. ಮಾನವರ ವಿಕಾಸವನ್ನು ಗಮನಿಸಿದರೆ, ಸ್ತ್ರೀಯರು ತಮ್ಮನ್ನು ಹಾಗೂ ಮಕ್ಕಳನ್ನು ಕಾಪಾಡುವ ಸಮರ್ಥ ಪುರುಷನನ್ನೇ ಸಂಗಾತಿಯಾಗಿ ಹುಡುಕ್ತಿದ್ರು. ಅಂದ ಹಾಗೆ, ಈ ಫೇಶಿಯಲ್ ಹೇರ್, ಗಂಡಸಿನ ಟೆಸ್ಟೊ ಸ್ಟಿರೋನ್ ಹಾರ್ಮೋನ್ ಚೆನ್ನಾಗಿದೆ ಅನ್ನೋದಕ್ಕೆ ಹಿಡಿದ ಕನ್ನಡಿಯೂ ಹೌದು. ಎಷ್ಟೋ ಕಾಲಗಳಿಂದ ಮೀಸೆ ಪ್ರಪಂಚವನ್ನು ಆಳಿರೋ ಜಟ್ಟಿ ಮೀಸೆ, ಗಿರಿಜಾ ಮೀಸೆ ಈಗ್ಲೂ ಚಾಲ್ತಿಯಲ್ಲಿದೆ. ಹಾಗೆ ಅದಕ್ಕೀಗ ಗಡ್ಡವೂ ಸೇರಿಕೊಂಡಿದೆ.
ಹಿಂದೆಲ್ಲ ಮದುವೆಯ ದಿನ ಮದುಮಗ ಶೇವ್ ಮಾಡಿಯೋ ಅಥವಾ ಬರೀ ಮೀಸೆ ಬಿಟ್ಟು ಡಿಸೇಂಟ್ ಆಗಿ ಕಾಣುತ್ತಿದ್ದ. ಆದರೀಗ, ಮದುಮಗನೂ ಗಡ್ಡ ಬಿಟ್ಟು ಮಿಂಚುತ್ತಾನೆ. ಶುಭ ಸಂದರ್ಭದಲ್ಲೂ ಗಡ್ಡ ಬಿಡಬೇಕಾ ಅಂತ ಹಿರಿಯರು ಗದರಿದರೂ ಆತ ಕ್ಯಾರೆ ಅನ್ನುವುದಿಲ್ಲ. ಹೀಗೆ ಗಡ್ಡದ ಪುರಾಣ ಹೇಳ್ತಾ ಹೋದ್ರೆ ಮುಗಿಯುವ ಕಥೆಯಂತೂ ಅಲ್ಲ. ಗಡ್ಡ ಬಿಡಲು ನವೆಂಬರೇ ಆಗಬೇಕಿಲ್ಲ. ಈಗಿನ ಹುಡುಗರು 365 ದಿನಗೂ ಗಡ್ಡಪ್ಪಗಳೇ. ಮುಖದಲ್ಲಿ ಗಡ್ಡ ಸೊಂಪಾಗಿ ಬರುತ್ತಿಲ್ಲ ಅಂದ್ರೆ ಹುಡುಗರಿಗದು ಮುಜುಗರದ ವಿಚಾರವೂ ಹೌದು. ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು ಅನ್ನೋ ಕಾಲ ಹೋಗಿ, ಗಡ್ಡ ಬಿಟ್ಟವನೇ ಗ್ರೇಟು ಅನ್ನುವಂತಾಗಿದೆ.
* ಕ್ಷಮಾ ಭಾರದ್ವಾಜ್